ADVERTISEMENT

ಆತ್ಮಾರ್ಪಣೆ ಮಾಡಿಕೊಂಡವರ ಕತೆ ಜೀವಂತ!

ಅಗ್ರಹಾರ ಬಾಚಹಳ್ಳಿ; ಹೊಯ್ಸಳ ಸಂಸ್ಕೃತಿ ಬಿಂಬಿಸುವ ಹಲವು ದೇವಾಲಯಗಳು ಇಲ್ಲಿವೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2018, 13:45 IST
Last Updated 10 ಜೂನ್ 2018, 13:45 IST

ಕೆ.ಆರ್.ಪೇಟೆ: ಐತಿಹಾಸಿಕ ಪರಂಪರೆಯ ಗ್ರಾಮ ಎಂಬ ಕೀರ್ತಿಗೆ ಪಾತ್ರವಾಗಿರುವ ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಒಂದು ಕಾಲದಲ್ಲಿ ಹೊಯ್ಸಳ ಪರಂಪರೆಯ ಗರುಡ ಸಂಸ್ಕೃತಿಯನ್ನು ಪೋಷಿಸಿತ್ತು. ಪಟ್ಟಣದಿಂದ ಐದು ಕಿ.ಮೀ ದೂರದಲ್ಲಿರುವ ಈ ಗ್ರಾಮ ಹೊಯ್ಸಳ ವಾಸ್ತುಶಿಲ್ಪದ ಅಪೂರ್ವ ಕೆತ್ತನೆಯ ದೇವಾಲಯಗಳನ್ನು ಹೊಂದಿದೆ. ಗ್ರಾಮದಲ್ಲಿರುವ ದೊಡ್ಡಕೆರೆ ಗ್ರಾಮದ ಜೀವನಾಡಿಯಾಗಿದ್ದು ಪುರಾಣ ಪ್ರಸಿದ್ಧವಾದುದು.

ಗ್ರಾಮದೇವತೆ ಬಾಚಳಮ್ಮ (ಲಕ್ಷ್ಮಿದೇವಮ್ಮ)ನ ಹಬ್ಬ ರಥೋತ್ಸವ ಮತ್ತು ಸಿಡಿಹಬ್ಬ ಪ್ರತಿವರ್ಷ ಯುಗಾದಿಯ ನಂತರ ನಡೆಯುತ್ತದೆ. ರಾಜ್ಯದಾದ್ಯಂತ ವಿವಿಧೆಡೆಯಿಂದ ಸಾವಿರಾರು ಜನರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಇಂತಹ ಪರಂಪರೆಯ ಗ್ರಾಮ ಒಂದು ಕಾಲದಲ್ಲಿ ಗರುಡಪರಂಪರೆಯ ಗ್ರಾಮವಾಗಿತ್ತು. ಗ್ರಾಮದ ನೂರಾರು ಯುವಕರು ಹೊಯ್ಸಳ ದೊರೆಯ ಸಂರಕ್ಷಣಾ ಪಡೆಯ ಗರುಡರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ದೊರೆ ನಿಧನ ಹೊಂದಿದಾಗ ತಮ್ಮ ಸ್ವಾಮಿನಿಷ್ಠೆ ಪ್ರದರ್ಶಿಸಲು ತಾವೂ ಆತ್ಮಾರ್ಪಣೆ ಮಾಡಿಕೊಳ್ಳುತ್ತಿದ್ದರು. ಗ್ರಾಮದ ಹಲವರು ಬಹಿರಂಗವಾಗಿ ಊರ ಜನರ ಸಮ್ಮುಖದಲ್ಲಿ ಕತ್ತಿಯಿಂದ ತಾವೇ ಇರಿದುಕೊಳ್ಳುತ್ತಿದ್ದರು ಎಂಬ ಇತಿಹಾಸ ಇದೆ. ಇದನ್ನೇ ಗರುಡ ಸಂಸ್ಕೃತಿ ಎಂದು ಕರೆಯಲಾಗುತ್ತಿತ್ತು.

ಆತ್ಮಾರ್ಪಣೆ ಮಾಡಿದವರ ಹೆಸರಿನಲ್ಲಿ ಗರುಡಸ್ತಂಭ ನಿರ್ಮಿಸಿ ಗ್ರಾಮಸ್ಥರು ಸ್ಮರಿಸುವ ಪರಂಪರೆಗೆ ಈ ಗ್ರಾಮ ಹೆಸರಾಗಿತ್ತು. ಇದನ್ನು ದಾಖಲಿಸುವ ಶಾಸನಗಳು ಮತ್ತು ಗರುಡಸ್ತಂಭಗಳು ಗ್ರಾಮದ ಹೊಯ್ಸಳ ವಾಸ್ತು ಶಿಲ್ಪಕಲೆಯ ದೇಗುಲವಾದ ಹುಣಶೇಶ್ವರ ದೇಗುಲದಲ್ಲಿ ಇಂದಿಗೂ ಕಾಣ ಸಿಗುತ್ತದೆ.

ADVERTISEMENT

12ನೇ ಶತಮಾನಕ್ಕೆ ಸೇರಿದ ಗ್ರಾಮದ ದೇವಸ್ಥಾನಗಳು ಹೊಯ್ಸಳ ದೊರೆಗಳಿಂದ ನಿರ್ಮಿತವಾದವು. ಪ್ರಾಚೀನ ಶಾಸನಗಳಲ್ಲಿ ಈ ಗ್ರಾಮವನ್ನು ಬಾಚೆಯನಹಳ್ಳಿ, ದಾನದ ಬಾಚಹಳ್ಳಿ ಎಂದು ಕರೆಯಲಾಗಿದೆ. ಗ್ರಾಮದ ಹುಣಶೇಶ್ವರ ದೇವಾಲಯವು ಗ್ರಾಮದ ಮಧ್ಯದಲ್ಲಿದೆ. ದ್ರಾವಿಡ ಶೈಲಿಯ ಗೋಪುರವಿದ್ದು ಚಿತ್ತಾಕರ್ಷಕವಾಗಿದೆ. ಮುಖ ಮಂಟಪಕ್ಕೆ ಎರಡು ಪಾರ್ಶ್ವಗಳಿದ್ದು ಹುಣಶೇಶ್ವರ ಮೂರ್ತಿಯ ವಿಗ್ರಹ ಕಲಾತ್ಮಕವಾಗಿದೆ. ದೇಗುಲದ ದಕ್ಷಿಣದಲ್ಲಿ ದೈತ್ಯ ವೀರಗಲ್ಲಿದ್ದು ಇದಕ್ಕಾಗಿಯೇ ಒಂದು ಪ್ರತ್ಯೇಕ ಗುಡಿ ನಿರ್ಮಿಸಲಾಗಿದೆ. ಇಲ್ಲಿ ಐದು ವೀರಗಲ್ಲುಗಳಿದ್ದು ಆತ್ಮಾರ್ಪಣೆ ಮಾಡಿಕೊಂಡ ಗರುಡರ ಕತೆ ಹೇಳುತ್ತವೆ.

ಹಾಗೆಯೇ ಇಲ್ಲಿ ಮೂರು ಗರುಡಸ್ತಂಭಗಳು ಇತಿಹಾಸ ಬಿಚ್ಚಿಡುತ್ತವೆ. ಸುಮಾರು 15 ಅಡಿಗಳಷ್ಟು ಎತ್ತರ ಇವೆ. ಮೇಲೆ ಮಟ್ಟಸವಾದ ಚಪ್ಪಡಿಗಳಿದ್ದು ಅವುಗಳ ಮೇಲೆ ಎರಡು ಅಡಿ ಎತ್ತರದ ಕೆತ್ತನೆ ಇದ್ದು ಅದರ ಮೇಲೆ ಒಬ್ಬ ಪುರುಷ ಮತ್ತು ಹಿಂದೆ ಒಬ್ಬ ಸ್ತ್ರೀ ಕುಳಿತಿದ್ದಾರೆ. ಉಳಿದೆರಡರಲ್ಲಿ ಮೂರು ಪುರುಷರ ಹಿಂದೆ ಮೂವರು ಸ್ತ್ರೀಯರು ಕುಳಿತಿದ್ದಾರೆ. ಇವರು ಹೋರಾಡುತ್ತಿರುವುದನ್ನು ಕಂಡಾಗ ತಾವು ವಿಷ್ಣುವಿನ ವಾಹನ ಗರುಡರಿಗಿಂತ ಕಡಿಮೆ ಇಲ್ಲ ಎಂಬುದನ್ನು ತೋರಿಸುವಂತಿದೆ. ಕ್ರಿ.ಶ. 1291 ರ ಶಾಸನದ ಪ್ರಕಾರ ಅಚಲಸ್ವಾಮಿನಿಷ್ಠೆ ಹೊಂದಿದ್ದ ಗ್ರಾಮದ ಮುಗಿಲಕುಲದ ಬಣಂಚು ವಂಶಕ್ಕೆ ಸೇರಿದ ಕಬ್ಬಾಹುನಾಡ ಪ್ರಭು ವಂಶದ 7ನೇ ತಲೆಮಾರಿನ ಗರುಡರು ಆತ್ಮಾರ್ಪಣೆ ಮಾಡಿಕೊಂಡ ವಿವರ ಇಲ್ಲಿದೆ.

ಈ ರೀತಿ ಪ್ರಾಣ ತ್ಯಾಗ ಮಾಡಿದವರ ಮೊದಲ ಹೆಸರು ಗ್ರಾಮದ ನಾರಾಯಣ ಶೆಟ್ಟಿ ಮತ್ತು ಆತನ ಪತ್ನಿ ಮಾರವ್ವೆಯದು. ಇವರು ಗರುಡರಾಗಿ ಆತ್ಮಾರ್ಪಣೆ ಮಾಡಿಕೊಂಡರೆ ಹೊಯ್ಸಳಶೆಟ್ಟಿಯ ಮಗ ಕೊರೆಯ ಶೆಟ್ಟಿ ನಾಯಕ ಮತ್ತು ಏಳು ಮಂದಿ ನರಸಿಂಹನ ಮರಣದಲ್ಲಿ ಸಾವನ್ನಪ್ಪುವ ಮಾಹಿತಿ ಇಲ್ಲಿ ದೊರೆಯುತ್ತದೆ. ಹಿಂದಿನ ಕಾಲದಲ್ಲಿ ದೊರೆ ಮರಣವನ್ನಪ್ಪಿದರೆ ದೀಕ್ಷೆ ತೊಟ್ಟ ಗರುಡರು ದೇಗುಲಗಳ ಮುಂದೆ ಆತ್ಮಾರ್ಪಣೆ ಮಾಡಿಕೊಳ್ಳಬೇಕಿತ್ತು. ಇದರ  ವಿವರಣೆಯನ್ನು ಇಲ್ಲಿನ ಶಾಸನದಲ್ಲಿ ಕಾಣಬಹುದು. ಇಲ್ಲಿ ಗರುಡ ಸಂಸ್ಕೃತಿಯನ್ನು ಬಿಂಬಿಸುವ ಏಳು ಶಾಸನಗಳನ್ನು ಕಾಣಬಹುದು.

ರಾಜ್ಯದಲ್ಲಿಯೆ ಎಲ್ಲೂ ಸಿಗದಂತಹ ಅಪರೂಪದ ಸ್ಮಾರಕ ಇವುಗಳಾಗಿವೆ. ಇಂತಹ ಗ್ರಾಮವನ್ನು ವಿಶ್ವಪಾರಂಪರಿಕ ಶಿಲ್ಪಕಲೆಯ ತಾಣವನ್ನಾಗಿ ಘೋಷಿಸಲು ಸರ್ಕಾರ ಮುಂದಾಗಿದ್ದು ಈ ಬಗ್ಗೆ ಜಿಲ್ಲಾಧಿಕಾರಿ ಮಂಜುಶ್ರೀ ಈಚೆಗೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

‘ಗರುಡ ಪರಂಪರೆ ಆಚರಿಸಲು ಈಗ ರಾಜರ ಆಳ್ವಿಕೆ ಇಲ್ಲ. ಆದರೆ ಗ್ರಾಮದ ಜನತೆ ತಮ್ಮೂರಿನ ಪರಂಪರೆಯನ್ನು ಮರೆತಿಲ್ಲ. ವೈವಿಧ್ಯಮಯ ಜಾನಪದ ಸಂಸ್ಕೃತಿ ಗ್ರಾಮದಲ್ಲಿದೆ. ಈಚೆಗೆ ಗ್ರಾಮಸ್ಥರು ಹಲವು ದೇಗುಲಗಳನ್ನು ಜೀರ್ಣೋದ್ಧಾರ ಮಾಡಿದ್ದಾರೆ. ದೇಗುಲ ಪರಂಪರೆಯನ್ನು ಮುಂದುವರಿಸಿದ್ದಾರೆ. ಇದು ಹೆಮ್ಮೆಯ ಸಂಗತಿ’ ಎಂದು ಗ್ರಾಮದ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಬಿ.ಪುಟ್ಟಸ್ವಾಮಿಗೌಡ ಹೇಳಿದರು.

ಬಲ್ಲೇನಹಳ್ಳಿ ಮಂಜುನಾಥ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.