ADVERTISEMENT

ಆರೋಗ್ಯ ಸೇವೆಯೊಂದಿಗೆ ಸಮಾಜ ಸೇವೆಯೂ ಇರಲಿ: ಯುಪಿಎಸ್‌ಸಿ ಸಾಧಕರ ಪ್ರೇರಣೆಯ ಮಾತು

ಮಿಮ್ಸ್‌ನಲ್ಲಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 15:35 IST
Last Updated 26 ಏಪ್ರಿಲ್ 2019, 15:35 IST
ಮಿಮ್ಸ್‌ನಲ್ಲಿ ಶುಕ್ರವಾರ ನಡೆದ ಯುಪಿಎಸ್‌ಸಿ ಪರೀಕ್ಷೆ ತಯಾರಿ ಮಾಹಿತಿ ಕಾರ್ಯಾಗಾರದಲ್ಲಿ ಡಾ.ನಾಗಾರ್ಜುನಗೌಡ ಮಾತನಾಡಿದರು
ಮಿಮ್ಸ್‌ನಲ್ಲಿ ಶುಕ್ರವಾರ ನಡೆದ ಯುಪಿಎಸ್‌ಸಿ ಪರೀಕ್ಷೆ ತಯಾರಿ ಮಾಹಿತಿ ಕಾರ್ಯಾಗಾರದಲ್ಲಿ ಡಾ.ನಾಗಾರ್ಜುನಗೌಡ ಮಾತನಾಡಿದರು   

ಮಂಡ್ಯ: ‘ವೈದ್ಯಕೀಯ ಕ್ಷೇತ್ರದಲ್ಲಿ ಎಷ್ಟೇ ಸಾಧನೆ ಮಾಡಿದ್ದರೂ ಸಾಮಾಜಿಕವಾಗಿ ಸೇವೆ ಸಲ್ಲಿಸುವ ಹಂಬಲ ಇದ್ದರೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಉನ್ನತ ಅಧಿಕಾರಿಯಾಗಲು ಸಾಕಷ್ಟು ಅವಕಾಶಗಳಿವೆ’ ಎಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ 418 ನೇ ರ‍್ಯಾಂಕ್‌ ಪಡೆದ ಡಾ.ನಾಗಾರ್ಜುನಗೌಡ ಹೇಳಿದರು.

ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ಶುಕ್ರವಾರ ನಡೆದ ಯುಪಿಎಸ್‌ಸಿ ಪರೀಕ್ಷೆ ತಯಾರಿ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

‘ಸಮಾಜಕ್ಕೆ ಸೇವೆ ಮಾಡಲು ಒಬ್ಬ ಅಧಿಕಾರಿಗೆ ಇರುವ ಅವಕಾಶ ಮತ್ತಾರಿಗೂ ಇಲ್ಲ. ಹೀಗಾಗಿ ವೈದ್ಯಕೀಯ ಸೇವೆಯೊಂದಿಗೆ ಜನರಿಗೆ ಉತ್ತಮ ಸೇವೆ ಒದಗಿಸಲು ಆಡಳಿತ ಸೇವಾ ಪರೀಕ್ಷೆ ಎದುರಿಸಲು ಸಿದ್ಧರಾಗಬೇಕು. ವಿದ್ಯಾರ್ಥಿಗಳು ಕೇವಲ ಪದವಿ ಪಡೆಯಲು ಸೀಮಿತವಾಗದೆ, ದೊಡ್ಡ ಮಟ್ಟದ ಗುರಿ ಇಟ್ಟುಕೊಂಡರೆ ಆರೋಗ್ಯ ಸೇವೆಯ ಜೊತೆಗೆ ಸಮಾಜ ಸೇವೆಯಲ್ಲೂ ಗುರುತಿಸಿಕೊಳ್ಳಬಹುದು’ ಎಂದು ಹೇಳಿದರು.

ADVERTISEMENT

‘ಐಎಎಸ್ ಹುದ್ದೆ ಪಡೆಯಲು ಇತಿಹಾಸ, ಸಾರ್ವಜನಿಕ ಆಡಳಿತ, ರಾಜಕೀಯ, ಸಂವಿಧಾನ, ಭೂಗೋಳ ವಿಜ್ಞಾನ, ಪ್ರಚಲಿತ ವಿದ್ಯಾಮಾನಗಳು, ಕಲೆ, ಸಾಹಿತ್ಯ, ಕ್ರೀಡೆ ಹಾಗೂ ಅಂತರಾಷ್ಟ್ರೀಯ ಸಂಬಂಧಗಳ ಕುರಿತು ನಿರಂತರ ಅಧ್ಯಯನ ಮಾಡಬೇಕು. ಐಷಾರಾಮಿ ಜೀವನದಿಂದ ಭಾರತೀಯ ನಾಗರಿಕ ಸೇವೆಯ ಹುದ್ದೆ ಪಡೆಯಲು ಸಾಧ್ಯವಿಲ್ಲ. ಕಠಿಣವಾದ ಅಭ್ಯಾಸ ಹಾಗೂ ನಿರಂತರ ಶ್ರದ್ಧೆಯಿಂದ ಮಾತ್ರ ಸಾಧ್ಯವಾಗುತ್ತದೆ. ಈ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬಹುದು’ ಎಂದು ಹೇಳಿದರು.

‘ಶಾಸಕಾಂಗ ನಿರ್ಣಯಗಳನ್ನು ಕಾರ್ಯಗತಗೊಳಿಸಲು ಆಡಳಿತಾಂಗ ಪ್ರಮುಖವಾಗಿದೆ, ದೇಶದ ಆಡಳಿತಾಂಗಕ್ಕೆ ಭಾರತೀಯ ಆಡಳಿತ ಸೇವೆ ಪ್ರಮುಖ ಅಸ್ತ್ರವಾಗಿದೆ. ಆಡಳಿತ ಸೇವಾ ಹುದ್ದೆಯ ಪರೀಕ್ಷೆ ಎದುರಿಸಲು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳಿಂದ ಕೇವಲ ಶೇ 20 ರಷ್ಟು ಜ್ಞಾನ ಸಂಪಾದಿಸುತ್ತೇವೆ. ಉಳಿದ ಶೇ 80 ರಷ್ಟು ಜ್ಞಾನವನ್ನು ನಾವು ಓದು, ಅಭ್ಯಾಸ ನಿರತರೊಂದಿಗೆ ಸಮಾಲೋಚನೆ ಮಾಡುವುದರಿಂದ ಹೆಚ್ಚು ಜ್ಞಾನ ಪಡೆದುಕೊಳ್ಳುತ್ತೇವೆ. ಆಡಳಿತಾತ್ಮಕ ಪರೀಕ್ಷೆ ಬರೆಯುವವರಿಗೆ ಪುಸ್ತಕಗಳೇ ಉತ್ತಮ ಸ್ನೇಹಿತರಾಗಿರಬೇಕು’ ಎಂದರು.

ಮಿಮ್ಸ್ ನಿರ್ದೇಶಕ ಡಾ.ಎಂ.ಎಸ್.ತ್ರಿನೇಶ್‌ಗೌಡ ಕಾರ್ಯಾಗಾರ ಉದ್ಘಾಟಿಸಿದರು. ಯುಪಿಎಸ್‌ಸಿಯಲ್ಲಿ 224ನೇ ರ‍್ಯಾಂಕ್‌ ಪಡೆದ ರೋಹನ್ ಜಗದೀಶ್, 495ನೇ ರ‍್ಯಾಂಕ್‌ ಪಡೆದ ಆರ್.ಮಂಜುನಾಥ್ , ದ್ಯಕೀಯ ಅಧೀಕ್ಷಕ ಡಾ.ಎಂ.ಆರ್.ಹರೀಶ್, ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಡಾ.ಪಿ.ವಿ.ಶ್ರೀಧರ್, ಪ್ರಾದೇಶಿಕ ವೈದ್ಯಕೀಯ ಅಧಿಕಾರಿ ಡಾ.ಎಂ.ಎಸ್.ಶಿವಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.