ADVERTISEMENT

ಇತ್ತ ಪಾರ್ಕಿಂಗ್‌ ಸಮಸ್ಯೆ; ಅತ್ತ ಟ್ರಾಫಿಕ್‌ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 8:51 IST
Last Updated 23 ಅಕ್ಟೋಬರ್ 2017, 8:51 IST

ಭಾರತೀನಗರ: ಈ ಭಾಗದ ವಾಣಿಜ್ಯ ಹಾಗೂ ಶೈಕ್ಷಣಿಕ ಕೇಂದ್ರವಾಗಿರುವ ಭಾರತೀನಗರ ತ್ವರಿತಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಆದರೆ, ಪಟ್ಟಣದ ರಸ್ತೆಗಳಾಗಲಿ, ಟ್ರಾಫಿಕ್ ವ್ಯವಸ್ಥೆಯಾಗಲೀ ಸುಧಾರಣೆ ಕಂಡಿಲ್ಲ ಎಂಬುದು ನಾಗರಿಕರ ಕೊರಗು.

ಜನ ನಡೆದಾಡಲು ಇಲ್ಲಿ ಫುಟ್‌ಪಾತ್‌ಗಳೇ ಇಲ್ಲವಾಗಿದೆ. ಏಕೆಂದರೆ ಎಲ್ಲ ಫುಟ್‌ಪಾತ್‌ಗಳೂ ದ್ವಿಚಕ್ರ ವಾಹನ ಪಾರ್ಕಿಂಗ್‌ ಜಾಗಗಳಾಗಿವೆ. ಇದರಿಂದ ಜನ ಅನಿವಾರ್ಯವಾಗಿ ರಸ್ತೆಯಲ್ಲೇ ಹೋಗಬೇಕಾಗಿದೆ.

ಪ್ರತಿದಿನ ಸಾವಿರಾರು ಜನರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಪಟ್ಟಣಕ್ಕೆ ಬರುತ್ತಾರೆ. ಚಾಂಷುಗರ್ ಕಾರ್ಖಾನೆಗೆ ದಿನನಿತ್ಯ ನೂರಾರು ಲಾರಿಗಳು, ಟ್ರ್ಯಾಕ್ಟರ್ ಗಳು, ಎತ್ತಿನ ಗಾಡಿಗಳು ಬಂದು ಹೋಗುತ್ತವೆ. ಇದರಿಂದಾಗಿ ಪಾದಚಾರಿಗಳಿಗೆ ಅಪಾಯ ತಪ್ಪಿದ್ದಲ್ಲ.

ADVERTISEMENT

ಸ್ಥಳೀಯ ಪೊಲೀಸರು ಇಲ್ಲಿನ ಟ್ರಾಫಿಕ್ ವ್ಯವಸ್ಥೆ ಸುಧಾರಿಸಲು ಎಷ್ಟೇ ಕಠಿಣ ಕ್ರಮ ಕೈಗೊಂಡರೂ, ಜನರು ರಸ್ತೆ ನಿಯಮಗಳನ್ನು ಪಾಲಿಸದಿರುವುದು ತಲೆ ನೋವಾಗಿ ಪರಿಣಮಿಸಿದೆ. ರಸ್ತೆ ನಿಯಮಗಳ ನಾಮಫಲಕಗಳು ಎಲ್ಲಿಯೂ ಕಾಣಸಿಗುವುದಿಲ್ಲ. ಹೊರಗಡೆಯಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗಂತೂ ಭಾರತೀನಗರ ದಾಟುವಷ್ಟರಲ್ಲೇ ಮರುಜನ್ಮ ಪಡೆದಂತಾಗುತ್ತದೆ.

ವಿವಿಧ ಹಳ್ಳಿಗಳಿಗೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಬಾಡಿಗೆ ಮಿನಿ ಆಟೊಗಳು ಸೂಕ್ತ ನಿಲ್ದಾಣವಿಲ್ಲದೆ ರಸ್ತೆಯ ಅಂಚಿನಲ್ಲೇ ನಿಲ್ಲುತ್ತವೆ. ರಸ್ತೆಯಲ್ಲಿಯೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಮತ್ತು ಇಳಿಸುವ ಕೆಲಸ ಮಾಡಲಾಗುತ್ತಿದೆ.

ಇನ್ನೊಂದೆಡೆ, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದ್ದರಿಂದ ರಸ್ತೆಬದಿಯೇ ವ್ಯಾಪಾರ ಕೇಂದ್ರಗಳಾಗಿ ಮಾರ್ಪಟ್ಟಿದೆ. ಕಾರು ಹಾಗು ಟೆಂಟೊಗಳು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಅನಧಿಕೃತವಾಗಿ ನಿಲ್ದಾಣ ಮಾಡಿಕೊಂಡಿದೆ.

ಪಟ್ಟಣಕ್ಕೆ ಬರುವ ಬಸ್‌ಗಳಿಗೆ ನಿಲ್ದಾಣ ಎಂಬುದೇ ಇಲ್ಲ. ಬಸ್ ಎಲ್ಲಿ ನಿಲ್ಲುತ್ತವೋ ಅದೇ ನಿಲ್ದಾಣ ಎಂಬ ಪರಿಸ್ಥಿತಿ ಇದೆ. ಇದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇಲ್ಲಿ ಪೊಲೀಸರ ಕರ್ತವ್ಯ ಎಷ್ಟಿದೆಯೋ ಅಷ್ಟೇ ಜವಾಬ್ದಾರಿ ಸಾರ್ವಜನಿಕರದೂ ಇದೆ. ಹಾಗಾದಾಗ ಟ್ರಾಫಿಕ್ ವ್ಯವಸ್ಥೆ ಸುಧಾರಿಸುತ್ತದೆ ಎನ್ನುತ್ತಾರೆ ಪಿಎಸ್‌ಐ ಅಯ್ಯನಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.