ADVERTISEMENT

ಇನ್ಫೋಸಿಸ್‌ಗೆ ಕೆಆರ್‌ಎಸ್ ನೀರು: ವಿರೋಧ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 9:45 IST
Last Updated 2 ಫೆಬ್ರುವರಿ 2011, 9:45 IST

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್ ಜಲಾಶಯದಿಂದ ಮೈಸೂರಿನ ಇನ್ಫೋಸಿಸ್ ಕಂಪೆನಿಗೆ ಕಿರುಗಾಲುವೆಯಷ್ಟು ನೀರನ್ನು ಸರಬರಾಜು ಮಾಡುವ ಸಂಬಂಧ ಮೈಸೂರು ನಗರಪಾಲಿಕೆಯಲ್ಲಿ ನಿರ್ಣಯ ಕೈಗೊಂಡಿದ್ದು, ಈ ಯತ್ನವನ್ನು ತಕ್ಷಣ ಕೈಬಿಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು. ಕೆಆರ್‌ಎಸ್‌ಗೆ ಮಂಗಳವಾರ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸುತ್ತಿದ್ದ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಾಧಿಕ್ ಜತೆ ಚರ್ಚಿಸಿದರು. ಬರಹದಲ್ಲಿ ದೂರು ಕೊಡಿ ಎಂದು ವ್ಯವಸ್ಥಾಪಕ ನಿರ್ದೇಶಕರು ಕೇಳಿದ ಕಾರಣಕ್ಕೆ ರೈತರು ಅಸಮಾಧಾನ ವ್ಯಕ್ತಪಡಿಸಿದರು.

 ರೈತರ ಬಳಿ ನಿಯಮ ಕೇಳುವುದಕ್ಕಿಂತ ಜಲಾಶಯದಿಂದ ಇನ್ಫೋಸಿಸ್‌ನಂತಹ ರೈತ ವಿರೋಧಿ ಸಂಸ್ಥೆಗೆ ನೀರು ಕೊಡುವ ಬಗ್ಗೆ ಚಿಂತಿಸಬೇಕು. ಇನ್ಫೋಸಿಸ್‌ಗೆ ನೀರು ಕೊಡುವ ಕುರಿತು ಜ.12ರಂದು ಮೈಸೂರು ನಗರಪಾಲಿಕೆ ನಿರ್ಣಯ ಕೈಗೊಂಡಿದ್ದು, ನೀರಾವರಿ ನಿಗಮದ ಅಧಿಕಾರಿಗಳು ಸಮ್ಮತಿ ಸೂಚಿಸಿದ್ದಾರೆ ಜಲಾಶಯ ಸುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರಿಲ್ಲದೆ ಜನ ಪರಿತಪಿಸುತ್ತಿದ್ದಾರೆ.ವ್ಯಾಪಾರಿ ಪ್ರವೃತ್ತಿಯ ಕಂಪೆನಿಗೆ ನೀರು ಕೊಡುವುದು ತರವಲ್ಲ ಎಂದು ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಹೇಳಿದರು.

ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು. ಮುಖ್ಯ ಎಂಜಿನಿಯರ್ ಪ್ರಸನ್ನ, ನಿಗಮದ ತಾಂತ್ರಿಕ ನಿರ್ದೇಶಕ ಶಿವಸ್ವಾಮಿ, ಸಲಹೆಗಾರ ಶಿವಪ್ರಸಾದ್, ವಿಜಯಕುಮಾರ್ ಸಭೆಯಲ್ಲಿದ್ದರು. ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆಂಪೇಗೌಡ, ಡಿ.ಎಸ್.ಚಂದ್ರಶೇಖರ್, ಪಾಂಡು, ದಿನೇಶ್, ಮಲ್ಲೇಗೌಡ, ಕೃಷ್ಣೇಗೌಡ, ನಾಗೇಂದ್ರಸ್ವಾಮಿ, ಪಾಲಹಳ್ಳಿ ಶ್ರೀನಿವಾಸ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.