ADVERTISEMENT

ಎಂ.ಶೆಟ್ಟಹಳ್ಳಿ ಶಾಲೆಯಲ್ಲಿ `ನಲಿ-ಕಲಿ' ಸೌರಭ!

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 10:01 IST
Last Updated 15 ಡಿಸೆಂಬರ್ 2012, 10:01 IST
ಗುಣಿತಾಕ್ಷರಗಳನ್ನು ಪರಿಚಯಿಸಲು ರೂಪಿಸಿರುವ ವಿನೂತನ ಬೋಧನೋಪಕರಣ ಮಾದರಿಯ ಬಳಕೆ.
ಗುಣಿತಾಕ್ಷರಗಳನ್ನು ಪರಿಚಯಿಸಲು ರೂಪಿಸಿರುವ ವಿನೂತನ ಬೋಧನೋಪಕರಣ ಮಾದರಿಯ ಬಳಕೆ.   

ಶ್ರೀರಂಗಪಟ್ಟಣ: ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಅಆಇಈ.... ವರ್ಣಮಾಲೆ ಕಲಿಸುವ ಕಾಲ ಮುಗಿದು ರಗಸದಅ, ಜವಮಬನ, ಪಯಡಟಚ ಕಲಿಸುವ ಕಾಲ ಬಂದು ವರ್ಷಗಳೇ ಕಳೆದಿವೆ. ಆದರೆ ಸಾಕಷ್ಟು ಶಾಲೆಗಳಲ್ಲಿ ಶಿಕ್ಷಕರು ಈ ಪದ್ಧತಿಗೆ ಇನ್ನೂ ಹೊಂದಿಕೊಂಡಿಲ್ಲ.

ಈ ವಿಷಯದಲ್ಲಿ ತಾಲ್ಲೂಕಿನ ಎಂ.ಶೆಟ್ಟಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇತರ ಶಾಲೆಗಳಿಗಿಂತ ಒಂದು ಹೆಜ್ಜೆ ಮುಂದಿದೆ. ನಲಿ-ಕಲಿ ಯೋಜನೆ ಅಭೂತಪೂರ್ವ ಯಶಸ್ಸು ಕಾಣುತ್ತಿದೆ. ಮಕ್ಕಳಿಗೆ `ಆಡುತ್ತಾ ಕಲಿ' ಪರಿಕಲ್ಪನೆಗೆ ಪೂರಕವಾಗಿ ಇಲ್ಲಿ ಶಿಕ್ಷಣ ನೀಡಲಾಗುತ್ತದೆ. ಶಾಲಾ ಕೊಠಡಿ ತೆರೆದ ಪುಸ್ತಕವಾಗಿ ಮಾರ್ಪಟ್ಟಿದೆ. ಎಲ್ಲಡೆಯೂ ಆಸಕ್ತಿ ಮೂಡಿಸುವ ವಿನೂತನ ಕಲಿಕಾ ಸಾಮಗ್ರಿಗಳು ಕಣ್ಣಿಗೆ ಬೀಳುತ್ತವೆ. ಕನ್ನಡ, ಇಂಗ್ಲಿಷ್, ಗಣಿತ ವಿಷಯವನ್ನು ಮಕ್ಕಳಿಗೆ ಸುಲಭದಲ್ಲಿ ಹೇಗೆ ಪರಿಚಯಿಸಬಹುದು ಎಂಬುದಕ್ಕೆ ಈ ಶಾಲೆ ಅತ್ಯುತ್ತಮ ಉದಾಹರಣೆಯಾಗಿದೆ.

`ಪದಚಕ್ರ'ದ ಹಾಗೂ `ಜಾಣ ಜಾರೋ ಪಟ್ಟಿ'ಯ ಮೂಲಕ ವಿದ್ಯಾರ್ಥಿಗಳು ಅಕ್ಷರ ಗುರುತಿಸುವಂತೆ ಪ್ರೇರೇಪಿಸಲಾಗುತ್ತದೆ. ಗುಂಪಿನಿಂದ ಬಿಡಿ ಅಕ್ಷರವನ್ನು ಹೆಕ್ಕಿ ತೆಗೆಯುವ, ಪದವನ್ನು ರೂಪಿಸುವ ಹಾಗೂ ಒಂದು ಪದಕ್ಕೆ ಇರುವ ವಿವಿಧ ಅರ್ಥಗಳನ್ನು ಹೇಳುವಂತೆ ಸೂಚಿಸಲಾಗುತ್ತದೆ. ಜಾಣ ಜಾರೋ ಪಟ್ಟಿಯನ್ನು ಬಳಸಿ ಸರಳ ಮತ್ತು ಸಂಯುಕ್ತ ಪದಗಳು; ಇಂಗ್ಲಿಷ್‌ನ ಸಣ್ಣ ಮತ್ತು ದೊಡ್ಡ ಅಕ್ಷರಗಳು; ಗಣಿತದ ಸಂಖ್ಯೆಗಳು; ತ್ರಿಭುಜ, ಆಯತ, ವೃತ್ತ, ರೇಖೆ, ಕೋನ- ಹೀಗೆ ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚು ವಿಷಯಗಳನ್ನು ಕಲಿಸಲುವ ಪ್ರಕ್ರಿಯೆ ನಡೆಯುತ್ತಿದೆ.

ಒಂದರಿಂದ 3ನೇ ತರಗತಿ ವಿದ್ಯಾರ್ಥಿಗಳು ಪುಸ್ತಕಗಳಲ್ಲಿ ಅಡಕವಾಗಿರುವ ವಿಷಯಗಳನ್ನು ಬೋಧನೋಪಕರಣಗಳ ಸಹಾಯದಿಂದ ಶ್ರಮ ಇಲ್ಲದೆ ಕಲಿಯುತ್ತಿದ್ದಾರೆ. ಒತ್ತಕ್ಷರ, ತಲಕಟ್ಟು, ಇಳಿ, ದೀರ್ಘ, ಕೊಂಬು, ಏತ್ವ ಉಳ್ಳ ಪದಗಳು, ಸ್ವರ ಹಾಗೂ ವ್ಯಂಜನಗಳನ್ನು ಚಾರ್ಟ್ ಬಳಸಿ ಪರಿಣಾಮಕಾರಿಯಾಗಿ ಬೋಧಿಸಲಾಗುತ್ತಿದೆ.

  ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್ ವ್ಯಾಕರಣ ಪರಿಚಯಿಸುವುದಕ್ಕೂ ಇಲ್ಲಿ ಪದಚಕ್ರ ಬಳಸುತ್ತಿರುವುದು ವಿಶೇಷ. ಕಬ್ಬಿಣದ ಕಡಲೆ ಎನ್ನುವ ಗಣಿತ ಹಾಗೂ ಇಂಗ್ಲಿಷ್ ವಿಷಯಗಳನ್ನು ವಿದ್ಯಾರ್ಥಿಗಳು ಮಾತೃಭಾಷೆ ಕಲಿತಷ್ಟೇ ಲೀಲಾಜಾಲವಾಗಿ ಕಲಿಯುತ್ತಿದ್ದಾರೆ. ಮಕ್ಕಳ ಅರಿವಿಗೆ ಬಾರದಂತೆ ಕಲಿಕೆ ಉಂಟುಮಾಡುವ ಪ್ರಯತ್ನ ನಡೆಯುತ್ತಿದೆ.

  `ವ್ಯರ್ಥವಾಗಿ ಬಿದ್ದಿರುವ ಕಾಗದದ ಡಬ್ಬಿಗಳು, ಮರದ ಪಟ್ಟಿಗಳು, ಗಾಜಿನ ಬಳೆ ಇತರ ವಸ್ತುಗಳಿಂದ ಕಲಿಕಾ ಉಪಕರಣ ತಯಾರಿಸಲಾಗುತ್ತದೆ. ಪ್ಲಾಸ್ಟಿಕ್ ಟೀ ಕಪ್‌ಗಳನ್ನು ಬಳಸಿ ಹಣ್ಣು, ಹೂ, ಮರ, ಪ್ರಾಣಿ, ಪಕ್ಷಿಗಳ ಚಿತ್ರ ರಚಿಸಲಾಗುತ್ತದೆ. ಅವುಗಳ ಮೇಲೆ ಕಲಿಸಬೇಕಾದ ಅಕ್ಷರಗಳನ್ನು ಬರೆದು ಪರಿಚಯಿಸಲಾಗುತ್ತದೆ. ಮಕ್ಕಳಲ್ಲಿ ನಿರೀಕ್ಷಿತ ಪ್ರಗತಿ ಕಾಣುತ್ತಿದೆ' ಎಂದು ಬೋಧನೋಪಕರಣ ತಯಾರಿಕೆಯಲ್ಲಿ ಸಿದ್ಧಹಸ್ತರೆನಿಸಿರುವ ಶಿಕ್ಷಕ ಮಹದೇವಯ್ಯ ತಮ್ಮ ಪ್ರಯತ್ನ ಸಫಲವಾಗುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.