ADVERTISEMENT

ಎಂ.ಶ್ರೀನಿವಾಸ್‌, ಶಂಕರೇಗೌಡರತ್ತ ಬಿಜೆಪಿ ಚಿತ್ತ?

ಜೆಡಿಎಸ್‌ ಅಭ್ಯರ್ಥಿ ಘೋಷಣೆಯಾದರೆ 24 ಗಂಟೆಯೊಳಗೆ ಬಿಜೆಪಿ ಹೆಸರು ಪ್ರಕಟ

ಎಂ.ಎನ್.ಯೋಗೇಶ್‌
Published 30 ಮಾರ್ಚ್ 2018, 10:05 IST
Last Updated 30 ಮಾರ್ಚ್ 2018, 10:05 IST
ಎಂ.ಶ್ರೀನಿವಾಸ್‌,  ಡಾ.ಎಸ್‌.ಸಿ.ಶಂಕರೇಗೌಡ
ಎಂ.ಶ್ರೀನಿವಾಸ್‌, ಡಾ.ಎಸ್‌.ಸಿ.ಶಂಕರೇಗೌಡ   

ಮಂಡ್ಯ: ತಾಲ್ಲೂಕು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿ ಹೆಸರು ಘೋಷಣೆ ಆಗುವುದನ್ನೇ ಬಿಜೆಪಿ ಕಾಯುತ್ತಿದೆ. ಜೆಡಿಎಸ್‌ ಅಭ್ಯರ್ಥಿಯ ಹೆಸರು ಘೋಷಣೆಯಾದ 24 ಗಂಟೆಯೊಳಗೆ ಬಿಜೆಪಿ ಅಭ್ಯರ್ಥಿಯ ಹೆಸರು ಘೋಷಣೆಯಾಗಲಿದೆ ಎಂಬ ಸುದ್ದಿ ಜಿಲ್ಲೆಯಾದ್ಯಂತ ಹರಡಿದೆ.

ಜೆಡಿಎಸ್‌ನಲ್ಲಿ 12ಕ್ಕೂ ಹೆಚ್ಚು ಆಕಾಂಕ್ಷಿಗಳು ಟಿಕೆಟ್‌ಗಾಗಿ ಕಾಯುತ್ತಾ ಕುಳಿತಿದ್ದಾರೆ. ಒಬ್ಬರ ಹೆಸರು ಘೋಷಣೆ ಆಗಲಿದ್ದು, ಟಿಕೆಟ್‌ ಸಿಗದ ನಾಲ್ಕೈದು ಮಂದಿ ಬಂಡಾಯವೇಳುವ ಸಾಧ್ಯತೆ ಇದೆ. ಇದನ್ನೇ ಕಾಯುತ್ತಿರುವ ಬಿಜೆಪಿ ಮುಖಂಡರು ಬಂಡಾಯವೇಳುವ ಪ್ರಬಲ ನಾಯಕರಿಗೆ ಟಿಕೆಟ್‌ ನೀಡಲು ತುದಿಗಾಲ ಮೇಲೆ ನಿಂತಿದೆ.

ಐದು ರೂಪಾಯಿ ವೈದ್ಯ ಡಾ.ಎಸ್‌.ಸಿ.ಶಂಕರೇಗೌಡ ಹಾಗೂ ಎಂ.ಶ್ರೀನಿವಾಸ್‌ ಅವರನ್ನು ಬಿಜೆಪಿ ಮುಖಂಡರು ಈಗಾಗಲೇ ಸಂಪರ್ಕಿಸಿದ್ದಾರೆ. ಜೆಡಿಎಸ್‌ ಟಿಕೆಟ್‌ ಘೋಷಣೆಯಾದ ಕೂಡಲೇ ನಿರ್ಧಾರ ತಿಳಿಸುವುದಾಗಿ ಇಬ್ಬರೂ ನಾಯಕರು ಬಿಜೆಪಿ ಮುಖಂಡರಿಗೆ ತಿಳಿಸಿರುವುದು ಕ್ಷೇತ್ರದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ADVERTISEMENT

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ತವರು ಜಿಲ್ಲೆಯಲ್ಲಿ ಒಂದು ಕ್ಷೇತ್ರವನ್ನಾದರೂ ಗೆಲ್ಲಬೇಕು ಎಂಬ ಹಠ ಬಿಜೆಪಿ ಮುಖಂಡರಲ್ಲಿದೆ. ಪರಿವರ್ತನಾ ಯಾತ್ರೆಯ ವೇಳೆ ಜಿಲ್ಲೆಗೆ ಭೇಟಿ ನೀಡಿದ್ದ ಬಿ.ಎಸ್‌.ಯಡಿಯೂರಪ್ಪ, ಜಿಲ್ಲೆಯಿಂದ ಒಂದು ಕ್ಷೇತ್ರದಲ್ಲಾದರೂ ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದ್ದರು.

ಅಲ್ಲದೆ ಜಿಲ್ಲೆಯಲ್ಲಿ ಶತಾಯ, ಗತಾಯ ಕಮಲ ಅರಳಿಸಬೇಕು ಎಂಬ ಉದ್ದೇಶದಿಂದ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್‌ ಹಾಗೂ ತೇಜಸ್ವಿನಿ ರಮೇಶ್‌ ಅವರನ್ನು ಉಸ್ತುವಾರಿ ಯನ್ನಾಗಿ ನೇಮಕ ಮಾಡಲಾಗಿದೆ. ಸಿ.ಟಿ.ರವಿ ಸೇರಿ ಹಲವು ಮುಖಂಡರು ಕ್ಷೇತ್ರಕ್ಕೆ ಭೇಟಿ ನೀಡಿ ಬಿಜೆಪಿ ಬೇರುಗಳನ್ನು ಗಟ್ಟಿಮಾಡಲು ಯತ್ನಿಸುತ್ತಿದ್ದಾರೆ.

‘ಐದು ರೂಪಾಯಿ ವೈದ್ಯ’ರಿಂದ ಪ್ರಚಾರ: ಈ ಬಾರಿ ಮಂಡ್ಯ ಕ್ಷೇತ್ರದಿಂದ ಅಭ್ಯರ್ಥಿಯಾಗುವುದು ಶತಸಿದ್ಧ ಎಂದು ಘೋಷಣೆ ಮಾಡಿರುವ ಐರು ರೂಪಾಯಿ ವೈದ್ಯ ಡಾ.ಎಸ್‌.ಸಿ.ಶಂಕರೇಗೌಡ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಬೆಂಬಲಿಗರೊಂದಿಗೆ ತಾಲ್ಲೂಕಿನ ಹಳ್ಳಿಗಳಿಗೆ ಭೇಟಿ ನೀಡಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಐದು ರೂಪಾಯಿ ವೈದ್ಯರಿಗೆ ಮತ ಹಾಕಬೇಕು ಎಂದು ಬೆಂಬಲಿಗರು ಕೋರುತ್ತಿದ್ದಾರೆ.

ಶಂಕರೇಗೌಡರನ್ನು ಬಿಜೆಪಿಗೆ ಸೆಳೆಯಲು ಶಾಸಕ ಸಿ.ಪಿ.ಯೋಗೇಶ್ವರ್‌ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ನಗರದ ಬಂದೀಗೌಡ ಬಡಾವಣೆಯ ಶಂಕರೇಗೌಡರ ಮನೆಗೆ ತೆರಳಿ ಟಿಕೆಟ್‌ ನೀಡುವ ಭರವಸೆ ನೀಡಿದ್ದಾರೆ. ಅಲ್ಲದೆ ವೈದ್ಯರು ಕೂಡ ಎರಡು ಬಾರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅವರು ಬಿಜೆಪಿ ಅಭ್ಯರ್ಥಿಯಾದರೆ ಚುನಾವಣೆ ಯ ಸಂಪೂರ್ಣ ವೆಚ್ಚವನ್ನು ಪಕ್ಷವೇ ನೋಡಿಕೊಳ್ಳುತ್ತದೆ ಎಂಬ ಭರವಸೆ ನೀಡಿದ್ದಾರೆ ಎಂಬ ಸುದ್ದಿ ಹರಡಿದೆ.

‘ನಾನಂತೂ ಜೆಡಿಎಸ್‌ ಪಕ್ಷದ ಟಿಕೆಟ್‌ ಆಕಾಂಕ್ಷಿ. ಪಕ್ಷ ಟಿಕೆಟ್‌ ಘೋಷಣೆವರೆಗೆ ಏನೂ ಹೇಳುವುದಿಲ್ಲ. ಕಡೆಯ ಕ್ಷಣದವರೆಗೆ ಕಾಯುತ್ತೇನೆ. ನನ್ನ ಹೆಸರು ಘೋಷಣೆಯಾಗಲಿದೆ ಎಂಬ ವಿಶ್ವಾಸವಿದೆ. ಆಗದಿದ್ದರೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ಚುನಾವಣೆಗೆ ಸ್ಪರ್ಧಿಸುವುದಂತೂ ಖಚಿತ’ ಎಂದು ಡಾ.ಎಸ್‌.ಸಿ.ಶಂಕರೇಗೌಡ ಹೇಳಿದರು.

ಶೀಘ್ರ ಹೆಸರು ಘೋಷಣೆ: ಜಿಲ್ಲೆಯಲ್ಲಿ ಈಗ ವಿಕಾಸಪರ್ವ ಯಾತ್ರೆ ನಡೆಯುತ್ತಿದೆ. ಕುಮಾರಸ್ವಾಮಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಟಿಕೆಟ್‌ ಆಕಾಂಕ್ಷಿಗಳೆಲ್ಲರೂ ಅವರ ಜೊತೆಯಲ್ಲಿದ್ದು, ಮಂಡ್ಯ ಕ್ಷೇತ್ರದ ಅಭ್ಯರ್ಥಿ ಅಂತಿಮಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಎರಡು ದಿನಗಳಿಂದ ಹಲವು ಸಭೆ ನಡೆದಿವೆ.

‘ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಗಳಲ್ಲಿ ಬಂಡಾಯ ಸುಳಿಯದಂತೆ ಪಕ್ಷದ ಮುಖಂಡರನ್ನು ಒಗ್ಗೂಡಿಸಲು ಕುಮಾರಸ್ವಾಮಿ ಯತ್ನಿಸುತ್ತಿದ್ದಾರೆ. ಆಕಾಂಕ್ಷಿಗಳ ಜೊತೆಗೆ ಮಾತನಾಡುತ್ತಿದ್ದಾರೆ. ಶೀಘ್ರ ಅಭ್ಯರ್ಥಿ ಹೆಸರು ಘೋಷಣೆಯಾಗಲಿದೆ’ ಎಂದು ಟಿಕೆಟ್‌ ಆಕಾಂಕ್ಷಿಗಳಲ್ಲಿ ಒಬ್ಬರಾದ ಡಾ.ಎಚ್‌.ಕೃಷ್ಣ ಹೇಳಿದರು.

**

ಎಂ.ಶ್ರೀನಿವಾಸ್‌ ಸೆಳೆಯಲು ಯತ್ನ

ಎರಡು ಬಾರಿ ಶಾಸಕರಾಗಿ ಕೆಲಸ ಮಾಡಿರುವ ಎಂ.ಶ್ರೀನಿವಾಸ್‌ ಅವರನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ಮುಖಂಡರು ಸರ್ವ ಪ್ರಯತ್ನ ನಡೆಸಿದ್ದಾರೆ. ಕ್ಷೇತ್ರದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಅವರು ಬಿಜೆಪಿಗೆ ಬಂದರೆ ಪಕ್ಷದ ಬೇರು ಗಟ್ಟಿಯಾಗಲಿದೆ.

ಅವರು ಬಿಜೆಪಿಗೆ ಬಂದರೆ ಅವರ ಅಳಿಯ, ಯುವ ಮುಖಂಡ, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್‌.ಎನ್‌.ಯೋಗೇಶ್‌ ಅವರೂ ಬಿಜೆಪಿಗೆ ಬರುತ್ತಾರೆ ಎಂಬ ಲೆಕ್ಕಾಚಾರವೂ ಬಿಜೆಪಿ ಮುಂದಿದೆ.

**

ನಾನು ಬಿಜೆಪಿ ಸೇರುತ್ತೇನೆ ಎಂಬ ಊಹಾಪೋಹವಿದೆ. ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇನ್ನೂ ಜೆಡಿಎಸ್‌ ಅಭ್ಯರ್ಥಿ ಹೆಸರು ಘೋಷಿಸಿಲ್ಲ. ಈಗಲೇ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ.

–ಎಂ.ಶ್ರೀನಿವಾಸ್‌, ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.