ADVERTISEMENT

ಓಟ ಸ್ಪರ್ಧೆ: ರಾಜು, ಚೆಲುವರಾಜುಗೆ ಪ್ರಶಸ್ತಿ

ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 9:46 IST
Last Updated 15 ಡಿಸೆಂಬರ್ 2012, 9:46 IST

ಮಂಡ್ಯ: ಜೀವನದಲ್ಲಿ ಶಿಸ್ತು, ಸಂಯಮ, ಭ್ರಾತೃತ್ವ ಭಾವವನ್ನು ಬೆಳೆಸುವಲ್ಲಿ ಕ್ರೀಡೆ ಸಹಕಾರಿಯಾಗಿದೆ ಎಂದು ಜಿಲ್ಲಾ ಸೆಷನ್ಸ್ ಕೋರ್ಟ್ ಪ್ರಧಾನ ನ್ಯಾಯಾಧೀಶ ಬಿ.ಶಿವಲಿಂಗೇಗೌಡ ಹೇಳಿದರು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಿರುವ `ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ'ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

`ಸದಾ ಒತ್ತಡದಲ್ಲಿ ಕೆಲಸ ನಿರ್ವಹಿಸುವ ಪೊಲೀಸರು, ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ದೇಹ ಮತ್ತು ಮನಸನ್ನು ಸದೃಢ ಹಾಗೂ ಉಲ್ಲಾಸದಿಂದ ಇಟ್ಟುಕೊಳ್ಳಬಹುದು' ಎಂದು ಸಲಹೆ ನೀಡಿದರು.

ವ್ಯಕ್ತಿತ್ವ ವಿಕಸನ ಗಟ್ಟಿಗೊಳಿಸುವಲ್ಲಿ ಮತ್ತು ಒಳ್ಳೆಯ ಆರೋಗ್ಯಕ್ಕೆ ಆಟೋಟಗಳು ಪೂರಕವಾಗಿದೆ. ಇದರಿಂದ, ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ನ್ಯಾಯಾಧೀಶ ಬೆಳ್ಳುಂಕೆ ಮಾತನಾಡಿ, `ರಾಷ್ಟ್ರೀಯ, ಅಂತರ ರಾಷ್ಟ್ರೀಯ ಮತ್ತು ಒಲಂಪಿಕ್ ಕ್ರೀಡಾಕೂಟದಲ್ಲೂ ಪೊಲೀಸರು ಉತ್ತಮ ಸಾಧನೆ ಮಾಡಿರುವ ಇತಿಹಾಸವಿದೆ. ಕ್ರೀಡಾ ಮನೋಭಾವ ಬೆಳಸಿಕೊಂಡರೆ, ಗಟ್ಟಿಯಾದ ವ್ಯಕ್ತಿತ್ವ ರೂಪಗೊಳ್ಳುತ್ತದೆ' ಎಂದು ಸಲಹೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎ.ಎನ್. ರಾಜಣ್ಣ, ಐಎಎಸ್ ಪ್ರೊಬೆಷನರಿ ಅಧಿಕಾರಿ ಹೆಪ್ಸಿಬಾರಾಣಿ ಕೊರ‌್ಲಪಾಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಪ್ಪ ಉಪಸ್ಥಿತರಿದ್ದರು.

ಕ್ರೀಡಾಕೂಟ ಫಲಿತಾಂಶ: 1500 ಮೀಟರ್ ಓಟದಲ್ಲಿ ಸ್ಪರ್ಧೆಯಲ್ಲಿ ಮಂಡ್ಯ ಗ್ರಾಮಾಂತರ ವಿಭಾಗದ ರಾಜು ಮೊದಲ ಸ್ಥಾನ ಪಡೆದರು. ಅವರು, 4:54:18 ನಿಮಿಷದಲ್ಲಿ ಈ ದೂರವನ್ನು ಕ್ರಮಿಸಿದರು.

ಉಳಿದಂತೆ, ಚೆಲುವರಾಜು (ಡಿಎಆರ್, 5:33 ನಿಮಿಷ) -2, ಎಸ್.ಚೇತನ್‌ಕುಮಾರ್ (ಮಂಡ್ಯ ನಗರ, 5:54 ನಿಮಿಷ)-3 ನಂತರ ಸ್ಥಾನದ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT