ADVERTISEMENT

ಕನ್ನಂಬಾಡಿ ನೆಂಟಸ್ತನ, ನೀರಿಗೆ ಬಡತನ!

ಎಂ.ಎನ್.ಯೋಗೇಶ್‌
Published 28 ಫೆಬ್ರುವರಿ 2018, 6:30 IST
Last Updated 28 ಫೆಬ್ರುವರಿ 2018, 6:30 IST

ಮಂಡ್ಯ: ‘ಮಜ್ಜಿಗೆಪುರ’ ಗ್ರಾಮದ ಜನರು ಬೆಳಿಗ್ಗೆ ಎದ್ದು ದೇವರ ಮುಖ ನೋಡುವುದಕ್ಕೂ ಮೊದಲು ಕನ್ನಂಬಾಡಿ ಕಟ್ಟೆಯ ದರುಶನ ಮಾಡುತ್ತಾರೆ. ಕಣ್ಣಿಗೆ ಕಾಣುವಷ್ಟು ದೂರ ಕಾವೇರಿ ಕಾಣುತ್ತಾಳೆ. ಆದರೆ ಗಾವುದ ದೂರದಲ್ಲಿ ನೀರಿದ್ದರೂ ಜನರ ದಾಹ ತಣಿದಿಲ್ಲ. ಕೆಆರ್‌ಎಸ್‌ ಜಲಾಶಯ ಕಟ್ಟಿದ ದಿನದಿಂದಲೂ ಕನ್ನಂಬಾಡಿ ನೀರು ಕುಡಿಯುವ ಮಜ್ಜಿಗೆಪುರ ಗ್ರಾಮಸ್ಥರ ಕನಸು ಇಂದಿಗೂ ನನಸಾಗಲೇ ಇಲ್ಲ.

ಎದುರಿಗೆ ಅಣೆಕಟ್ಟೆ ಇದೆ, ಸುತ್ತಲೂ ನಾಲ್ಕೈದು ನಾಲೆಗಳಿವೆ. ಜಿಲ್ಲೆಯ ಲಕ್ಷಾಂತರ ಹೆಕ್ಟೇರ್‌ ಭೂಪ್ರದೇಶಕ್ಕೆ ಗ್ರಾಮದ ಸಮೀಪದಲ್ಲೇ ನೀರು ಹರಿದು ಹೋಗುತ್ತದೆ. ಆದರೆ ಮಜ್ಜಿಗೆಪುರಕ್ಕೆ ಮಾತ್ರ ಕಾವೇರಿ ಹರಿದಿಲ್ಲ. ಕೊಳವೆಬಾವಿಗಳು ಮಾತ್ರ ಅವರ ದಾಹ ತಣಿಸುತ್ತಿವೆ. ‘ಸಮುದ್ರದ ನೆಂಟಸ್ತನ, ನೀರಿಗೆ ಬಡತನ’ ಎಂಬಂತಾಗಿದೆ ಈ ಗ್ರಾಮಸ್ಥರ ಬದುಕು. ಇದು ಬರೀ ಮಜ್ಜಿಗೆಪುರ ಗ್ರಾಮದ ಕತೆ ಮಾತ್ರವಲ್ಲ, ಕೆಆರ್‌ಎಸ್‌ ಜಲಾಶಯದಿಂದ ಒಂದೆರಡು ಕಿ.ಮೀ ವ್ಯಾಪ್ತಿಯಲ್ಲಿ ಬರುವ ಹೊಸಉಂಡವಾಡಿ, ಕುಪ್ಪೆದಡ, ಬಸ್ತಿಪುರ, ಹುಲಿಕೆರೆ, ಎಂಎನ್‌ಪಿಎಂ ಕಾಲೊನಿ, ಹೊಂಗಳ್ಳಿ ಮುಂತಾದ ಗ್ರಾಮಸ್ಥರಿಗೆ ಈಗಲೂ ಕುಡಿಯಲು ಕಾವೇರಿ ನೀರು ಸಿಕ್ಕಿಲ್ಲ. ಆಗಾಗ ತಾತ್ಕಾಲಿಕವಾಗಿ ನೀರು ಕೊಟ್ಟಿದ್ದಾರೆ. ಆದರೆ ಶಾಶ್ವರ ಪರಿಹಾರ ಮರೀಚಿಕೆಯಾಗಿದೆ.

‘ಕೆಆರ್‌ಎಸ್‌ ಜಲಾಶಯದಿಂದ ನೀರಿನ ಹರಿವು ಆರಂಭವಾದರೆ ಮೊದಲು ಸಿಗುವ ಭೂ ಪ್ರದೇಶವೇ ಮಜ್ಜಿಗೆಪುರ. ಇಲ್ಲಿಯ ಹಲವು ಗ್ರಾಮಗಳು ಕನ್ನಂಬಾಡಿ ಒಡಲಲ್ಲಿ ಮುಳುಗಿ ಹೋಗಿವೆ. ಮುಳುಗಡೆಯಿಂದ ಆಸ್ತಿ–ಪಾಸ್ತಿ ಕಳೆದುಕೊಂಡ ಜನರು ನದಿ ತಟದಲ್ಲೇ ಜೀವನ ಕಟ್ಟಿಕೊಂಡು ನೀರಾವರಿಯ ಕನಸು ಕಂಡರು. ಆದರೆ ಕುಡಿಯುವುದಕ್ಕೂ ನೀರು ಸಿಗದೇ ಇರುವುದು ಜನರನ್ನು ಕಂಗೆಡಿಸಿದೆ. ಚುನಾವಣೆ ಸಂದರ್ಭದಲ್ಲಿ ಬರುವ ರಾಜಕಾರಣಿಗಳು ನೀರಿನ ಸಂಪರ್ಕ ಕಲ್ಪಿಸುತ್ತೇವೆ ಎಂದು ಹೇಳಿಕೊಂಡೇ ವೋಟು ಗಿಟ್ಟಿಸಿಕೊಳ್ಳುತ್ತಾರೆ’ ಎಂದು ಗ್ರಾಮಸ್ಥರು ದೂರುತ್ತಾರೆ.

ADVERTISEMENT

‘ನಮ್ಮ ತ್ಯಾಗದ ಪ್ರತಿಫಲದಿಂದಾಗಿ ಕನ್ನಂಬಾಡಿ ಜಲಾಶಯ ನಿರ್ಮಾಣ ಮಾಡಲಾಗಿದೆ. ಮಜ್ಜಿಗೆಪುರ, ಹೊಸಹುಂಡವಾಡಿ ಗ್ರಾಮಗಳು ಕೆಆರ್‌ಎಸ್‌ ಜಲಾಶಯದಲ್ಲಿ ಮುಳುಗಿ ಹೋಗಿವೆ. ಹೊಲ ಮನೆ ಕಳೆದುಕೊಂಡ ನಮ್ಮ ಪೂರ್ವಿಕರು ತ್ಯಾಗ ಮಾಡಿದ್ದಾರೆ. ಹೀಗಾಗಿ ನಮಗೆ ಕಾವೇರಿ ನೀರು ಕುಡಿಯುವ ಹಕ್ಕಿದೆ. ಆ ಆಸೆಯಲ್ಲೇ ಜನರು ಹಲವು ತಲೆಮಾರು ಸವೆಸಿದ್ದಾರೆ. ಇನ್ನೂ ನಮಗೆ ನೀರು ಸಿಕ್ಕಿಲ್ಲ. ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ನಮ್ಮ ನೋವು ಅವರ ಮನಸ್ಸಿಗೆ ಮುಟ್ಟಿಲ್ಲ’ ಎಂದು ಗ್ರಾಮಸ್ಥ, ಸಾಹಿತಿ ಮಜ್ಜಿಗೆಪುರ ಶಿವರಾಮು ಹೇಳಿದರು.

ಕಸಬಾ ಹೋಬಳಿಯ ಗೋಳು: ಶ್ರೀರಂಗಪಟ್ಟಣ ಕಸಬಾ ಹೋಬಳಿಯ ಹಳ್ಳಿಗಳಿಗೂ ಕಾವೇರಿ ನೀರು ತಲುಪಿಲ್ಲ. ಚಿಕ್ಕಅಂಕನಹಳ್ಳಿ, ಹುರಳಿಕ್ಯಾತನಹಳ್ಳಿ, ಬೊಂತಗಹಳ್ಳಿ , ಕೊಕ್ಕರೆ ಹುಂಡಿ, ಹೆಬ್ಬಾಡಿ, ಹೆಬ್ಬಾಡಿ ಹುಂಡಿ ಗ್ರಾಮಗಳ ರೈತರು ನೀರಾವರಿ ಹಾಗೂ ಕುಡಿಯುವ ನೀರಿನ ಉದ್ದೇಶಕ್ಕೆ ಕೊಳವೆ ಬಾವಿಯನ್ನೇ ಅವಲಂಬಿಸಿದ್ದಾರೆ.

‘ಜಲಾಶಯದ ಮಡಿಲಲ್ಲೇ ನಮ್ಮ ಜೀವನ ನಡೆಯುತ್ತದೆ. ಆದರೆ ನಮ್ಮ ಗೋಳನ್ನು ಕೇಳುವವರು ಯಾರೂ ಇಲ್ಲ. ಎರಡು ಮೂರು ವರ್ಷಗಳಿಂದ ಜನ, ಜಾನುವಾರುಗಳ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿತ್ತು. ಹೆಚ್ಚು ಮಳೆಯಾದಾಗ ತಮಿಳುನಾಡಿಗೆ ಹರಿದು ಹೋಗುವ ನೀರಿಗೆ ಲೆಕ್ಕವೇ ಇಲ್ಲ. ಬೆಂಗಳೂರಿಗೂ ನೀರು ಹೋಗುತ್ತದೆ. ಆದರೆ ನಮ್ಮ ಹಳ್ಳಿಗಳಿಗೆ ಇನ್ನೂ ಏಕೆ ನೀರು ಸಿಕ್ಕಿಲ್ಲ ಎಂಬ ಯಕ್ಷಪ್ರಶ್ನೆ ಕಾಡುತ್ತಲೇ ಇದೆ’ ಎಂದು ಹಂಪಾಪುರ ಗ್ರಾಮಸ್ಥ ಕಾಳೇಗೌಡ ಹೇಳಿದರು.

ಮಹಾದೇವಪುರ ಸಮಸ್ಯೆ: ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಐತಿಹಾಸಿಕ ಮಹಾದೇವಪುರ ಗ್ರಾಮದಲ್ಲಿ ಅತಿ ಹೆಚ್ಚು ನೀರಿನ ಸಮಸ್ಯೆ ಇದೆ. ಮಾರ್ಚ್‌ ಆರಂಭವಾಗುತ್ತಿದ್ದಂತೆ ಅಲ್ಲಿಯ ಜನರು ಕುಡಿಯುವ ನೀರಿಗಾಗಿ ಪರಡಾಡುವ ಪರಿಸ್ಥಿತಿ ಇದೆ. ಸಿನಿಮಾ ಚಿತ್ರೀಕರಣಕ್ಕೆ ಹೆಸರುವಾಸಿಯಾಗಿರುವ ಈ ಊರು ನೀರಿನ ಸಮಸ್ಯೆಯಿಂದ ಮುಕ್ತವಾಗಿಲ್ಲ.

ಅರೆಕೆರೆ ಹೋಬಳಿ ವ್ಯಾಪ್ತಿಯ ನೇರಳೆಕೆರೆ, ತಡಗವಾಡಿ, ಬಳ್ಳೇಕೆರೆ, ಗಾಮನಹಳ್ಳಿ, ಮಾರಸಿಂಗನಹಳ್ಳಿ, ಕೊರಮೇಗೌಡನ ಕೊಪ್ಪಲು ಗ್ರಾಮಗಳ ಜನರ ಕಾವೇರಿ ಕನಸು ಈಡೇರಿಲ್ಲ. ಶ್ರೀರಂಗಪಟ್ಟಣ ತಾಲ್ಲೂಕಿನ ಗಡಿ, ವಿದ್ಯುತ್‌ ಮಗ್ಗಗಳಿಗೆ ಹೆಸರಾದ ವಾಣಿಜ್ಯ ಕೇಂದ್ರ ಕೊಡಿಯಾಲ ಗ್ರಾಮದ ಜನರೂ ಕಾವೇರಿ ನೀರಿನಿಂದ ವಂಚಿತರಾಗಿದ್ದಾರೆ.

‘ನಮ್ಮ ತಾಲ್ಲೂಕಿನಲ್ಲಿ ಜಲಾಶಯವಿದ್ದರೂ ನಮಗೆ ಅಗತ್ಯಕ್ಕೆ ತಕ್ಕ ನೀರು ಸಿಕ್ಕಿಲ್ಲ. ಎಲ್ಲ ಹೋಬಳಿಗಳಲ್ಲೂ ಕೆಲ ಹಳ್ಳಿಗಳು ನೀರಿನಿಂದ ವಂಚಿತವಾಗಿವೆ. ಕಿರಂಗೂರು ಮಾರ್ಗದಲ್ಲೇ ಪಾಂಡವಪುರಕ್ಕೆ ನೀರು ಹರಿದು ಹೋಗುತ್ತದೆ. ಆದರೆ ಕಿರಂಗೂರು ಗ್ರಾಮಕ್ಕೆ ಇಲ್ಲಿಯವರೆಗೂ ನೀರು ಕೊಟ್ಟಿಲ್ಲ. ಜನಪ್ರತಿನಿಧಿಗಳಿಗೆ ಆ ಇಚ್ಛೆಯೂ ಇಲ್ಲ. ವ್ಯರ್ಥವಾಗಿ ಹರಿಯುವ ನೀರು ಕೊಟ್ಟಿದ್ದರೆ ತಾಲ್ಲೂಕು ಸಂಪೂರ್ಣ ನೀರಾವರಿಗೆ ಒಳಗಾಗುತ್ತಿತ್ತು’ ಎಂದು ರೈತ ಮುಖಂಡ ಕಿರಂಗೂರು ಪಾಪು ಹೇಳಿದರು.

ಶ್ರೀರಂಗಪಟ್ಟಣ ತಾಲ್ಲೂಕು 35,758 ಹೆಕ್ಟೇರ್‌ ಭೂಪ್ರದೇಶ ಹೊಂದಿದೆ. ಅದರಲ್ಲಿ 25,566 ಹೆಕ್ಟೇರ್‌ ಕೃಷಿ ಭೂಮಿ ಇದೆ.  19,349 ಹೆಕ್ಟೇರ್‌ ನೀರಾವರಿಗೆ ಒಳಪಟ್ಟಿದೆ. 5,516 ಹೆಕ್ಟೇರ್‌ ಭೂಮಿ ಮಳೆಯನ್ನೇ ಆಶ್ರಯಿಸಿದೆ.

ಕೆರೆ ತುಂಬಿಸುವ ಯೋಜನೆ ಜಾರಿ

‘ಅರಕೆರೆ ಕೆರೆಯಿಂದ ಏಳು ಹಳ್ಳಿಗಳ ಕೆರೆಗಳಿಗೆ ಕಾವೇರಿ ನೀರು ಪೂರೈಸುವ ಹೊಸ ಯೋಜನೆ ಶೀಘ್ರ ಜಾರಿಯಾಗಲಿದೆ. ಈಗಾಗಲೇ ಕಾವೇರಿ ನೀರಾವರಿ ನಿಗಮ ಸಮ್ಮತಿ ಸೂಚಿಸಿದೆ. ₹ 14 ಕೋಟಿ ವೆಚ್ಚದಲ್ಲಿ ಬಂಗಾರದೊಡ್ಡಿ ನಾಲೆ ಆಧುನೀಕರಣಗೊಳಿಸಲಾಗುವುದು. ವಿರಿಜಾ ನಾಲೆಗಳಿಗೆ ಪಿಕಪ್‌ ನಿರ್ಮಿಸಿ ಸಣ್ಣ ಸಣ್ಣ ಹಳ್ಳಿಗಳಿಗೂ ಕುಡಿಯುವ ನೀರು ಪೂರೈಸಲಾಗುವುದು. ತೀವ್ರ ಸಮಸ್ಯೆ ಇದ್ದ ಹಳ್ಳಿಗಳಿಗೆ ಬಹುಗ್ರಾಮ ಯೋಜನೆ ಅಡಿ ನೀರು ಪೂರೈಸುತ್ತಿದ್ದೇವೆ’ ಎಂದು ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.