ADVERTISEMENT

ಕಬ್ಬಿಗೆ ಮುಂಗಡ ಬೆಲೆ: ರೈತ ಮುಖಂಡರಲ್ಲೇ ಗೊಂದಲ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 8:05 IST
Last Updated 19 ಅಕ್ಟೋಬರ್ 2012, 8:05 IST

ಮಂಡ್ಯ:  ಪ್ರತಿ ಟನ್ ಕಬ್ಬಿಗೆ ಎಷ್ಟು ಮುಂಗಡ ಬೆಲೆ ನಿಗದಿ ಮಾಡಬೇಕು ಎಂಬ ಗೊಂದಲ ರಾಜ್ಯ ಸರ್ಕಾರಕ್ಕೆ ಮಾತ್ರವಲ್ಲ; ರೈತ ಮುಖಂಡರಿಗೂ ಇದೆ. ಒಬ್ಬೊಬ್ಬ ನಾಯಕರು, ಒಂದೊಂದು ಮುಂಗಡ ಬೆಲೆ ಹೇಳುತ್ತಿರುವುದರಿಂದ ರೈತರು ಗೊಂದಲಕ್ಕೆ ಬಿದಿದ್ದಾರೆ.

ಆರಂಭದಲ್ಲಿ ರಾಜ್ಯದೆಲ್ಲೆಡೆಯೂ ಪ್ರತಿ ಟನ್ ಕಬ್ಬಿಗೆ 3 ಸಾವಿರ ರೂಪಾಯಿ ಮುಂಗಡ ಬೆಲೆ ಘೋಷಿಸಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ಈ ಮಾತನ್ನೂ ಪತ್ರಿಕಾಗೋಷ್ಠಿಗಳಲ್ಲಿ ರೈತ ಸಂಘದ ನಾಯಕರೂಗಳು ಹೇಳಿದ್ದರು. 3 ಸಾವಿರ ರೂಪಾಯಿ ಮುಂಗಡ ನೀಡದಿದ್ದರೆ, ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದ್ದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ವಿ.ಅಶೋಕ್, ಪ್ರತಿ ಟನ್ ಕಬ್ಬಿಗೆ 3 ಸಾವಿರ ರೂಪಾಯಿ ಕೊಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಬೆಲೆ ನಿಗದಿಗಾಗಿ ರಚಿಸಿರುವ ಉನ್ನತ ಸಮಿತಿಯ ಮುಂದೆ, 2,800 ರೂಪಾಯಿ ನಿಗದಿ ಮಾಡಬೇಕು ಎಂದು ಎಲ್ಲರೂ ಆಗ್ರಹಿಸಿದ್ದೇವೆ. ಅದಕ್ಕೆ ನಾನು, ಇಂದಿಗೂ ಬದ್ಧನಾಗಿದ್ದೇನೆ. ಆ ಬೆಲೆಯನ್ನೇ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಒತ್ತಾಯಿಸಿದರು.

ರೈತ ಸಂಘದ ವರಿಷ್ಠ ಕೆ.ಎಸ್. ಪುಟ್ಟಣ್ಣಯ್ಯ ಮಾತನಾಡಿ, ಪ್ರತಿ ಟನ್‌ಗೆ ಮುಂಗಡವಾಗಿ 2,500 ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿ ಟನ್ ಕಬ್ಬಿಗೆ 3 ಸಾವಿರ ರೂಪಾಯಿ ನೀಡಬೇಕು. ಕಬ್ಬಿನ ಕಟಾವು ಹಾಗೂ ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆಗಳೇ ಭರಿಸಬೇಕು ಎಂದು ಸಭೆಯಲ್ಲಿ ರೈತ ಸಂಘ ನೀಡಿದ ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.

ಇದನ್ನೇ ಬಂಡವಾಳವಾಗಿಸಿಕೊಂಡ ರಾಜ್ಯ ಸರ್ಕಾರವು ಈಗ, ಮುಂಗಡ ಬೆಲೆಯನ್ನು 2,200 ರೂಪಾಯಿ ಎಂದು ನಿಗದಿ ಮಾಡಿದೆ. ಅದನ್ನು ಹೆಚ್ಚಿಸಬೇಕು ಎಂದು ಮತ್ತೆ ಹೋರಾಟ ಆರಂಭವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.