ADVERTISEMENT

ಕಾಂಕ್ರೀಟೀಕರಣಗೊಳ್ಳಲಿದೆ ನೂರಡಿ ರಸ್ತೆ

ನಗರೋತ್ಥಾನ ಯೋಜನೆ ಅಡಿ ಕಾಮಗಾರಿಗೆ ತಡೆ; ಸಿ.ಎಂ ವಿಶೇಷ ಅನುದಾನದಿಂದ ಅಭಿವೃದ್ಧಿ

ಎಂ.ಎನ್.ಯೋಗೇಶ್‌
Published 11 ಜೂನ್ 2018, 7:15 IST
Last Updated 11 ಜೂನ್ 2018, 7:15 IST
ಕಾಂಕ್ರೀಟ್‌ ರಸ್ತೆಯಾಗಿ ಮಾರ್ಪಾಡು ಮಾಡಲು ಉದ್ದೇಶಿಸಲಾಗಿರುವ ನಗರದ ನೂರಡಿ ರಸ್ತೆ
ಕಾಂಕ್ರೀಟ್‌ ರಸ್ತೆಯಾಗಿ ಮಾರ್ಪಾಡು ಮಾಡಲು ಉದ್ದೇಶಿಸಲಾಗಿರುವ ನಗರದ ನೂರಡಿ ರಸ್ತೆ   

ಮಂಡ್ಯ: ನಗರೋತ್ಥಾನ ಯೋಜನೆ ಯಡಿ ಆರಂಭಗೊಂಡಿದ್ದ ನೂರಡಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ತಾತ್ಕಾಲಿಕ ತಡೆ ಬಿದ್ದಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಇನ್ನಷ್ಟು ಅನುದಾನ ತಂದು ರಸ್ತೆಯನ್ನು ಸಂಪೂರ್ಣವಾಗಿ ಕಾಂಕ್ರೀಟ್‌ ರಸ್ತೆಯನ್ನಾಗಿ ರೂಪಿಸಲು ಚಿಂತನೆ ನಡೆಸಲಾಗಿದೆ.

ನಗರದಲ್ಲಿ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಹೊರತುಪಡಿಸಿದರೆ ನೂರಡಿ ರಸ್ತೆ ವಿಶಾಲವಾಗಿದೆ. ನಗರದ ಸೌಂದರ್ಯ ಹೆಚ್ಚಿಸುವ ಉದ್ದೇಶದಿಂದ ಈ ರಸ್ತೆಗೆ ವಿಶೇಷ ಮೆರುಗು ತುಂಬಲು ಶಾಸಕ ಎಂ.ಶ್ರೀನಿವಾಸ್‌ ಮುಂದಾಗಿದ್ದಾರೆ. ₹ 1.92 ಕೋಟಿ ವೆಚ್ಚದಲ್ಲಿ ರಸ್ತೆ ಡಾಂಬರೀಕರಣಗೊಳಿಸಲು ಕಾಮಗಾ ರಿಗೆ ಚಾಲನೆ ನೀಡಲಾಗಿತ್ತು. ವಿಧಾನ ಸಭಾ ಚುನಾವಣೆ ನೀತಿ ಸಂಹಿತೆ ಆರಂಭಗೊಳ್ಳುವುದಕ್ಕೂ ಮೊದಲು ಮಾರ್ಚ್‌ 12ರಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಕೃಷ್ಣಪ್ಪ ಅವರು ಕಾಮಗಾರಿಗೆ ಚಾಲನೆ ನೀಡಿದ್ದರು.

ಕಾಮಗಾರಿ ಆಮೆಗತಿ ವೇಗದ ಲ್ಲಿತ್ತು. ಮೂರು ತಿಂಗಳಿಂದ ಗುತ್ತಿಗೆ ದಾರರು ರಸ್ತೆಯ ಎರಡೂ ಕಡೆ ಚರಂಡಿ ಕಾಮಗಾರಿಯನ್ನಷ್ಟೇ ಪೂರ್ಣಗೊ ಳಿಸಿದ್ದರು. ರಸ್ತೆ ದುರಸ್ತಿಯನ್ನು ಕೈಗೆತ್ತಿ ಕೊಂಡಿರಲಿಲ್ಲ. ಹಳ್ಳ, ಗುಂಡಿಗಳಿಂದ ತುಂಬಿದ್ದ ರಸ್ತೆಯಲ್ಲಿ ವಾಹನ ಸಂಚಾರರು ಪರದಾಡುವ ಸ್ಥಿತಿ  ಇತ್ತು. ಅದು ಈಗಲೂ ಮುಂದುವರೆದಿದೆ.

ADVERTISEMENT

ಚುನಾವಣೆ ಫಲಿತಾಂಶ ಬಂದ ನಂತರ ನೂತನ ಶಾಸಕ ಎಂ.ಶ್ರೀನಿವಾಸ್‌ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿ ದರು. ನಗರೋತ್ಥಾನ ಯೋಜನೆ ಹಣಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನದ ಹಣ ತಂದು ರಸ್ತೆಯನ್ನು ಸಂಪೂರ್ಣವಾಗಿ ಕಾಂಕ್ರೀಟೀಕರಣ ಮಾಡಲು ಪ್ರಸ್ತಾಪ ಮಾಡಿದರು. ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಒಪ್ಪಿಗೆ ಸೂಚಿಸಿದ್ದಾರೆ.

‘ಕಾಂಕ್ರೀಟ್‌ ಕಾಮಗಾರಿಗೆ ಅಗತ್ಯವಿ ರುವ ಹಣವನ್ನು ವಿಶೇಷ ಯೋಜನೆ ಅಡಿ ನೀಡುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಒಪ್ಪಿಕೊಂಡಿದ್ದಾರೆ. ಸಚಿವ ಸಂಪುಟ ಗೊಂದಲಗಳೆಲ್ಲವೂ ಮುಗಿದ ಕೂಡಲೇ ಹಣ ತಂದು ಕಾಮಗಾರಿ ಆರಂಭಿಸ ಲಾಗುವುದು. ಈಗ ಅಧಿಕಾರಿಗಳಿಗೆ ಯೋಜನೆ ವೆಚ್ಚದ ಮೌಲ್ಯ ಮಾಪನ ಮಾಡುವಂತೆ ಸೂಚನೆ ನೀಡಿದ್ದೇನೆ. ನಗರ ಸೌಂದರ್ಯದ ದೃಷ್ಟಿಯಿಂದ ನೂರು ಅಡಿ ರಸ್ತೆಯನ್ನು ಮಾದರಿ ರಸ್ತೆಯನ್ನಾಗಿಸಲಾಗುವುದು’ ಎಂದು ಶಾಸಕ ಎಂ.ಶ್ರೀನಿವಾಸ್‌ ಹೇಳಿದರು.‌

ಎಲ್ಲಿಂದ ಎಲ್ಲಿಯವರೆಗೆ: ಬೆಸಗರಹಳ್ಳಿ ರಾಮಣ್ಣ ವೃತ್ತದಿಂದ ನೂತನ ಎಂಆರ್‌ಪಿಎಲ್‌ ಪೆಟ್ರೋಲ್‌ ಬಂಕ್‌ ವರೆಗೆ ರಸ್ತೆಯನ್ನು ಸಂಪೂರ್ಣವಾಗಿ ಕಾಂಕ್ರೀಟ್‌ ರಸ್ತೆಯನ್ನಾಗಿ ರೂಪಿಸಲು ಚಿಂತನೆ ನಡೆಸಲಾಗಿದೆ. ಸದ್ಯ ಈಗಿರುವ ರಸ್ತೆ ವಿಭಜಕಗಳನ್ನು ತೆರವುಗೊಳಿಸಿ ಆ ಜಾಗದಲ್ಲಿ ಮೈಸೂರು ನಗರದಲ್ಲಿ ರೂಪಿಸಿರುವಂತೆ ವಿಶೇಷ ವಿಭಜಕಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ರಸ್ತೆಯ ಮಧ್ಯೆ ಹೂಗಿಡ, ಹುಲ್ಲು ಬೆಳೆಸಿ ಸೌಂದರ್ಯ ಕಾಪಾಡಲಾಗುತ್ತದೆ. ಜೊತೆಗೆ ರಸ್ತೆ ನಡುವೆ ಇರುವ ವಿದ್ಯುತ್‌ ಕಂಬಗಳನ್ನು ತೆರವುಗೊಳಿಸಿ ಹೊಸ ತಂತ್ರಜ್ಞಾನದ ವಿದ್ಯುತ್‌ ಕಂಬ ಅಳವಡಿಸಲು ಯೋಜಿಸಲಾಗಿದೆ. ಈ ವಿದ್ಯುತ್‌ ಕಂಬಗಳಲ್ಲಿ ಅಳವಡಿಸುವ ವಿದ್ಯುತ್‌ ದೀಪಗಳು ರಾತ್ರಿಯ ವೇಳೆ ಸ್ವಯಂಚಾಲಿತವಾಗಿ ಝಗಮಗಿಸುವ ಬಣ್ಣಬಣ್ಣದ ದೀಪ ಬೆಳಗಿಸಲಿವೆ.

‘ನನ್ನ ವಾರ್ಡ್‌ ವ್ಯಾಪ್ತಿಯ ರಸ್ತೆಯನ್ನು ಸುಂದರವಾಗಿ ರೂಪಿಸಲು ಶಾಸಕರಿಗೆ ಎಲ್ಲಾ ಸಹಕಾರ ನೀಡಲಾಗುವುದು. ಅವರು ಜಯಗಳಿಸಿದ ಒಂದು ವಾರದಲ್ಲೇ ರಸ್ತೆ ಪರಿಶೀಲನೆ ನಡೆಸಿದ್ದಾರೆ. ಶೀಘ್ರ ರಸ್ತೆಗೆ ಹೊಸ ರೂಪ ಬರಲಿದೆ’ ಎಂದು ನಗರಸಭೆ ಸದಸ್ಯ ಅರುಣ್‌ಕುಮಾರ್‌ ಹೇಳಿದರು.

ಹೊಸಹಳ್ಳಿ ವೃತ್ತದಲ್ಲಿ ಉದ್ಯಾನ

ನೂರಡಿ ರಸ್ತೆಯ ಹೊಸಹಳ್ಳಿ ವೃತ್ತದಲ್ಲಿರುವ ಜಾಗದಲ್ಲಿ ಸಣ್ಣ ಉದ್ಯಾನ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಈ ಜಾಗದಲ್ಲಿದ್ದ ಹಾಪ್‌ಕಾಮ್ಸ್‌ ಮಳಿಗೆಯನ್ನು ನಗರಸಭೆ ತೆರವುಗೊಳಿಸಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಉದ್ದೇಶಿಸಿತ್ತು. ಆದರೆ, ಸ್ಥಳೀಯರು ಇದನ್ನು ವಿರೋಧಿಸಿ ಪ್ರತಿಭಟನೆ, ರಸ್ತೆಯ ಪಕ್ಕದಲ್ಲಿ ಶೌಚಾಲಯ ನಿರ್ಮಾಣವಾಗುವುದು ಬೇಡ ಎಂದು ವಿರೋಧ ವ್ಯಕ್ತಪಡಿಸಿದ್ದರು.

‌ಈ ಗೊಂದಲದಿಂದಾಗಿ ಅಲ್ಲಿ ಯಾವುದೇ ಕಾಮಗಾರಿ ಆರಂಭಿಸಿರಲಿಲ್ಲ. ಈಗ ಅಲ್ಲಿ ಸಣ್ಣ ಉದ್ಯಾನ ನಿರ್ಮಿಸಲು ಉದ್ದೇಶಿಸಲಾಗಿದೆ. ಕಲ್ಲು ಕುರ್ಚಿಗಳನ್ನು ಅಳವಡಿಸಿ ಜನರ ವಿಹಾರಕ್ಕೆ ಅನುಕೂಲ ಮಾಡಿಕೊಡುವುದರ ಜೊತೆಗೆ  ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಚಿಂತನೆ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.