ADVERTISEMENT

ಕಾಡಾನೆ ದಾಳಿ: ಕಬ್ಬು, ಬಾಳೆ, ತೆಂಗು ನಾಶ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 9:45 IST
Last Updated 14 ಸೆಪ್ಟೆಂಬರ್ 2011, 9:45 IST

ಹಲಗೂರು: ಇಲ್ಲಿಗೆ ಸಮೀಪದ  ಧನಗೂರು ಮೀಸಲು ಅರಣ್ಯದ ಕಡೆಯಿಂದ ಸೋಮವಾರ ತಡರಾತ್ರಿ ನಾಡಿಗೆ ಲಗ್ಗೆ ಹಾಕಿದ ಕಾಡಾನೆ ಹಿಂಡು ಬಾಳೆ, ತೆಂಗು, ಕಬ್ಬು ಇತ್ಯಾದಿ ಬೆಳೆಗಳನ್ನು ಧ್ವಂಸಗೊಳಿಸಿದ್ದು, ಇದರಿಂದಾಗಿ ಧನಗೂರು, ಹಲಸಹಳ್ಳಿ ಸುತ್ತಲಿನ ಜನರು ಭಯಭೀತರಾಗಿದ್ದಾರೆ.

ಧನಗೂರಿನ ಮುನ್ನಾಭಾಯಿ ಅವರ ಬಾಳೆ, ತೆಂಗಿನ ತೋಟ, ಮುನೀರ್ ಅವರ ಬಾಳೆ ತೋಟ, ಹಲಸಹಳ್ಳಿಯ ರಾಚಯ್ಯ ಅವರ ಕಟಾವು ಹಂತದ ಕಬ್ಬು, ತಾಳೆಹಳ್ಳದ ರಾಜು ಅವರ ಕಬ್ಬಿನ ಗದ್ದೆ, ಪ್ರಿಯದರ್ಶಿನಿ ಎಸ್ಟೇಟ್‌ನ ಬಾಳೆತೋಟವನ್ನು ಆನೆಗಳು ಹಾಳು ಮಾಡಿವೆ.

ಈಚೆಗೆ ದಡಮಹಳ್ಳಿ ಸುತ್ತಲಿನ ಪ್ರದೇಶದಲ್ಲಿ ಕಾಣಿಸಿಕೊಮಡು ಜನರಲ್ಲಿ ಆತಂಕ ಮೂಡಿಸಿದ್ದ ಐದು ಗಜಗಳ ಹಿಂಡು ಈ ದಾಳಿ ನಡೆಸಿದೆ. ಬಸವನಬೆಟ್ಟ -ಮುತ್ತತ್ತಿ ಅರಣ್ಯ, ಧನಗೂರು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಬೀಡು ಬಿಡುವ ಆನೆಗಳು ಹಲವು ಬಾರಿ ಗ್ರಾಮಗಳಿಗೆ ನುಗ್ಗಿವೆ.  ಈ ಹಿಂಡಿನಲ್ಲಿ ಮರಿಯಾನೆ ಸೇರಿದಂತೆ ನಾಲ್ಕು ಹೆಣ್ಣಾನೆಗಳಿದ್ದು, ಈವರೆಗೆ ಮನುಷ್ಯರ ಮೇಲೆ ಹಲ್ಲೆ ನಡೆಸದಿರುವುದೇ ಸಮಾಧಾನದ ಸಂಗತಿ.

 ಆನೆ ಹಿಂಡನ್ನು ಕಾಡಿಗೆ ಅಟ್ಟಲು ಅರಣ್ಯ ಸಿಬ್ಬಂದಿ ಮಂಗಳವಾರ ಬೆಳಿಗ್ಗೆಯಿಂದಲೂ ಶ್ರಮಿಸುತ್ತ್ದ್ದಿದು ಸಂಜೆಯಾದರೂ ಸಾಧ್ಯವಾಗಿರಲಿಲ್ಲ. ಅರಣ್ಯ ವಲಯಾಧಿಕಾರಿ ಎಂ.ಇ.ರಮೇಶ್, ಪಾರೆಸ್ಟರ್ ಡಿ.ದೇವರಾಜು, ನಾಗೇಂದ್ರಪ್ರಸಾದ್ ಸೇರಿದಂತೆ 30ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಆಕ್ರೋಶ: ಕಾಡಾನೆ ನಾಡಿಗೆ ಬಂದು ಬೆಳೆ ನಷ್ಟಮಾಡಿದಾಗ ಸ್ಥಳಕ್ಕೆ ಆಗಮಿಸುವ ಅರಣ್ಯಾಧಿಕಾರಿಗಳು, ಬೆಳೆ ಕಳೆದುಕೊಂಡವರಿಗೆ ತಕ್ಷಣ ಪರಿಹಾರ, ಆನೆ ದಾಳಿ ನಿಯಂತ್ರಣಕ್ಕೆ ಕಂದಕ, ಸೋಲಾರ್ ಬೇಲಿ ಅಳವಡಿಕೆ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಭರವಸೆ ನೀಡುತ್ತಾರೆ. ಆದರೆ ವಾಸ್ತವವಾಗಿ ಯಾವುದೇ ಯೋಜನೆ ಜಾರಿಗೊಳಿಸುವುದಿಲ್ಲ. ಈಚೆಗೆ ಭೇಟಿ ನೀಡಿದ ರಾಜ್ಯ ಮತ್ತು ಜಿಲ್ಲಾ ಅರಣ್ಯಾಧಿಕಾರಿಗಳು ನೀಡಿದ ಭರವಸೆ ಸಹ ಮಣ್ಣುಗೂಡಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಆನೆ ದಾಳಿಗೆ ತಡೆಗೆ ಕ್ರಮ, ಬೆಳೆ ಕಳೆದುಕೊಂಡವರಿಗೆ ತಕ್ಷಣ ಪರಿಹಾರ ಒದಗಿಸದಿದ್ದರೆ ಬೀದಿಗಿಳಿದು       ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.