ADVERTISEMENT

ಕಾಳಸಂತೆಯಲ್ಲಿ ಅಂಗನವಾಡಿ ಮಕ್ಕಳ ಆಹಾರ!

ಪ್ರಜಾವಾಣಿ ವಿಶೇಷ
Published 27 ಜುಲೈ 2012, 8:30 IST
Last Updated 27 ಜುಲೈ 2012, 8:30 IST
ಕಾಳಸಂತೆಯಲ್ಲಿ ಅಂಗನವಾಡಿ ಮಕ್ಕಳ ಆಹಾರ!
ಕಾಳಸಂತೆಯಲ್ಲಿ ಅಂಗನವಾಡಿ ಮಕ್ಕಳ ಆಹಾರ!   

ಶ್ರೀರಂಗಪಟ್ಟಣ: ಅಂಗನವಾಡಿ ಕೇಂದ್ರದ ಮಕ್ಕಳಿಗೆ ಸರ್ಕಾರ ಉಚಿತವಾಗಿ ಕೊಡುವ ಆಹಾರ ಪದಾರ್ಥಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

ಪಟ್ಟಣದಲ್ಲಿ ಹೆಸರು ಕಾಳು, ಕಡಲೆಕಾಳು, ಬೇಳೆ, ಬೆಲ್ಲ ಇತರ ವಸ್ತುಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಮಧ್ಯವರ್ತಿಗಳ ಮೂಲಕ ಮಾರಾಟ ಮಾಡುತ್ತಿರುವ ಅಂಶ ಬಯಲಾಗಿದೆ.

ಹೊನ್ನಪ್ಪ ಬೀದಿಯ ರತ್ನಮ್ಮ ಚಕ್ರಪಾಣಿ ಎಂಬವರಿಗೆ ಪಟ್ಟಣದ ಮಾರ್ಕೆಟ್ ಬೀದಿಯ ಮಹಿಳೆಯೊಬ್ಬರು ಮಂಗಳವಾರ ಒಂದು ಕೆ.ಜಿ. ತೂಕದ ಹೆಸರು ಕಾಳು ಪೊಟ್ಟಣವನ್ನು 50 ರೂಪಾಯಿಗೆ ಮಾರಾಟ ಮಾಡಿದ್ದಾರೆ.

ಪಟ್ಟಣದ ಅಂಗನವಾಡಿ ಕೇಂದ್ರವೊಂದರ ಕಾರ್ಯಕರ್ತೆ ಈ ಪೊಟ್ಟಣವನ್ನು ಮಾರಾಟ ಮಾಡಿ ಹಣ ನೀಡುವಂತೆ ಹೇಳಿದ್ದಾರೆ ಎಂದು ಪೊಟ್ಟಣಗಳನ್ನು ಮಾರಾಟ ಮಾಡುತ್ತಿರುವ ಮಹಿಳೆ ತಿಳಿಸಿದ್ದಾಗಿ ರತ್ನಮ್ಮ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

`ಹೆಸರು ಕಾಳು ಅಷ್ಟೇ ಅಲ್ಲದೆ ಬೇಳೆ, ಬೆಲ್ಲ, ಕಡಲೆ ಕಾಳು ಕೂಡ ಕಡಿಮೆ ಬೆಲೆಗೆ ಸಿಗುತ್ತವೆ. ಬೇಕಿದ್ದರೆ ಮುಂಚಿತವಾಗಿ ಹೇಳಿ. ಅಂಗನವಾಡಿಯಿಂದ ತರಿಸಿಕೊಡುತ್ತೇನೆ~ ಎಂದು ಆ ಮಹಿಳೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಹೀಗೆ ಮಾರಾಟವಾಗಿರುವ ಹೆಸರು ಕಾಳು ಪೊಟ್ಟಣದ ಮೇಲೆ `ಐಸಿಡಿಎಸ್- ಕರ್ನಾಟಕ ಸರ್ಕಾರ~ ಎಂಬ ಮುದ್ರೆ ಇದೆ. `3ರಿಂದ 6 ವರ್ಷದ ಮಕ್ಕಳಿಗೆ ಉಚಿತ ಸರಬರಾಜಿಗಾಗಿ~ ಎಂಬ ಒಕ್ಕಣೆಯೂ ಇದೆ. ಅದರ ಕೆಳಗೆ ಕೋಡ್ ನಂ.128, ಜಿಜಿಎಲ್/ಏಪ್ರಿಲ್ 2012 ಎಂಬುದು ನಮೂದಾಗಿದೆ.

`ಅಂಗನವಾಡಿ ಕೇಂದ್ರದ ಮಕ್ಕಳಿಗೆ ಕೊಡುವ ಆಹಾರದ ನಮೂನೆ ಒಂದು ತಿಂಗಳಿನಿಂದ ಬದಲಾಗಿದೆ. ಪುಡಿ ಆಹಾರದ ಬದಲು ಕಾಳಿನ ರೂಪದಲ್ಲಿ ಆಹಾರ ಸರಬರಾಜು ಮಾಡಲಾಗುತ್ತಿದೆ. ಶ್ರೀರಂಗಪಟ್ಟಣ ಹಾಗೂ ಮಂಡ್ಯ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಮಂಡ್ಯ ತಾಲ್ಲೂಕಿನ ಹಳೇ ಬೂದನೂರು ಗ್ರಾಮದ ಎಂಎಸ್‌ಡಿಸಿ ಹೆಸರಿನ ಮಹಿಳಾ ಸಂಘ ಆಹಾರ ಸರಬರಾಜು ಮಾಡುತ್ತಿದೆ. ಆಹಾರದ ಪೊಟ್ಟಣಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಸಂಗತಿ ನನ್ನ ಗಮನಕ್ಕೆ ಬಂದಿಲ್ಲ. ಪರಿಶೀಲಿಸಿದ ಬಳಿಕ ಸಂಬಂಧಿಸಿದವರ ವಿರುದ್ಧ ಕ್ರಮ ಜರುಗಿಸಲಾಗುವುದು~ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ್ ಹೇಳಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.