ADVERTISEMENT

ಕುಚೇಷ್ಟೆಯ ಕೃಷಿ ಬಜೆಟ್ ಒಪ್ಪುವುದಿಲ್ಲ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 7:05 IST
Last Updated 18 ಫೆಬ್ರುವರಿ 2011, 7:05 IST

ಶ್ರೀರಂಗಪಟ್ಟಣ:  ರಾಜ್ಯ ಸರ್ಕಾರ ಈ ಬಾರಿ ಮಂಡಿಸಲು ಉದ್ದೇಶಿಸಿರುವ ಕೃಷಿ ಬಜೆಟ್ ಅನ್ನು ಸ್ವಾಗತಿಸಿರುವ ರೈತ ಸಂಘದ ಚುಕ್ಕಿ ನಂಜುಂಡಸ್ವಾಮಿ ಅದು ಕುಚೇಷ್ಟೆಯ ಬಜೆಟ್ ಆದರೆ ಸುತಾರಾಂ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಗುರುವಾರ ಮೈಸೂರಿಗೆ ತೆರಳುವ ಮಾರ್ಗಮಧ್ಯೆ ಇಲ್ಲಿಗೆ ಸಮೀಪದ ಲೋಕಪಾವನಿ ನದಿ ಸೇತುವೆ ಬಳಿ ಸ್ಥಳೀಯ ರೈತ ಮುಖಂಡರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಸುದಿಗಾರರ ಜತೆ ಮಾತನಾಡಿದರು. ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಬೇಕು ಎಂದು ರೈತಸಂಘ ಮೊದಲಿಂದಲೂ ಒತ್ತಾಯಿಸುತ್ತ ಬಂದಿದೆ.

ಬಿಜೆಪಿ ಸರ್ಕಾರ ಈ ದಿಸೆಯಲ್ಲಿ ಮೊದಲ ಹೆಜ್ಜೆ ಇಟ್ಟಿದೆ. ಆದರೆ ಕೃಷಿ ಬಜೆಟ್ ಹೆಸರಿನಲ್ಲಿ ಬಂಡವಾಳ ಹೂಡಲು ಅವಕಾಶ ನೀಡಬಾರದು. ಬಜೆಟ್ ರೈತರ ಹತೋಟಿಯಲ್ಲಿ ಇರಬೇಕು. ರೈತರ ಪ್ರಗತಿಗೆ ಪೂರಕ ಅಂಶಗಳನ್ನು ಒಳಗೊಂಡ ಆಯವ್ಯಯವನ್ನು ನಾವು ನಿರೀಕ್ಷಿಸಿದ್ದೇವೆ. ಈ ಕುರಿತು ಫೆ.14ರಂದು ಮುಖ್ಯಮಂತ್ರಿಗಳ ಜತೆ ರೈತ ಸಂಘದ ಮುಖಂಡರು ಚರ್ಚೆ ನಡೆಸಿದ್ದಾರೆ ಎಂದು ತಿಳಿಸಿದರು.

ದಕ್ಷಿಣ ಏಶಿಯಾ ದೇಶಗಳ ರೈತ ಸಂಘಟನೆಯ ನಿಯೋಗ ಮೈಸೂರಿಗೆ ತೆರಳಿತು. ಶ್ರೀಲಂಕಾದ ಶರತ್ ಫೆರ್ನಾಂಡೊ, ಬಾಂಗ್ಲಾ ದೇಶದ ಬದ್ರುಲ್ ಆಲಂ, ನೇಪಾಳದ ಬಿ.ಎನ್ಕೋಬಾ, ಪಚ್ಚೆ ನಂಜುಂಡಸ್ವಾಮಿ ಹಾಗೂ ತಮಿಳುನಾಡಿ, ಹರಿಯಾಣ, ಪಂಜಾಬ್ ರಾಜ್ಯಗಳ ಪ್ರತಿನಿಧಿಗಳು ಇದ್ದರು. ಇದಕ್ಕೂ ಮುನ್ನ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ, ಮಂಜೇಶ್‌ಗೌಡ, ಕೆಂಪೇಗೌಡ, ಕೃಷ್ಣೇಗೌಡ, ಪಾಂಡು, ನಾಗೇಂದ್ರಸ್ವಾಮಿ, ಮಹದೇವು ಇತರರು ನಿಯೋಗದ ಸದಸ್ಯರನ್ನು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.