ADVERTISEMENT

ಕುಣಿಗಲ್‌ನಲ್ಲಿ ಸಾಹಿತ್ಯ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 9:21 IST
Last Updated 17 ಡಿಸೆಂಬರ್ 2012, 9:21 IST

ಕುಣಿಗಲ್: ನಾಡಿನ ಜನತೆಯ ಆತ್ಮಾಭಿಮಾನ ಮತ್ತು ಮಾನವೀಯ ಮೌಲ್ಯಗಳ ಜಾಗೃತಿಗಾಗಿ ಕಲೆ, ಸಾಹಿತ್ಯ, ಸಂಸ್ಕೃತಿಗಳನ್ನು ಉಳಿಸಿ, ಬೆಳೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಸೋ.ಮು.ಭಾಸ್ಕರಾಚಾರ್ ತಿಳಿಸಿದರು.

ಪಟ್ಟಣದ ಬಯಲು ರಂಗ ಮಂದಿರದಲ್ಲಿ ಈಚೆಗೆ `ಅಭಿನೇತ್ರಿ' ಮಹಿಳಾ ತಂಡವು ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ `ಕನ್ನಡ ಸಾರಸ್ವತ ಲೋಕಕ್ಕೆ ನಮ್ಮ ನಮನ' ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಜೀವನ ಪದ್ಧತಿ ಮನಃಶಾಂತಿಯನ್ನು ಕಸಿದುಕೊಂಡಿದೆ.

ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಭಾರತಿಯರು ಆತ್ಮತೃಪ್ತಿಯಲ್ಲಿ ಮುಂದಿದ್ದಾರೆ. ಇದಕ್ಕೆ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಮುಖ್ಯ ಕಾರಣ ಎಂದರು.

ಅಭಿನೇತ್ರಿ ತಂಡದ ಹಿರಿಯ ಮಾರ್ಗದರ್ಶಕರಾದ ದಾಕ್ಷಾಯಿಣಿ ಜಯರಾಂ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ದಿನೇಶ್ ಕುಮಾರ್, ಗೀತ ರಚನೆಕಾರ ಶೇಷಾದ್ರಿ, ತಂಡದ ನಿರ್ದೇಶಕಿ ಸುಷ್ಮಾ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.
ಕಿರುತೆರೆ ಕಲಾವಿದರಾದ ರಮ್ಯಾ ವಶಿಷ್ಟ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.