ADVERTISEMENT

ಕೂಗಾಟದೊಳಗೆ ಅಭಿವೃದ್ಧಿ ಚರ್ಚೆ ಗೌಣ: ಆರೋಪ-ಪ್ರತ್ಯಾರೋಪ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 6:10 IST
Last Updated 25 ಜನವರಿ 2012, 6:10 IST

ಮಂಡ್ಯ: ಕಟ್ಟಡ ಕಾಮಗಾರಿಗಳ ಕಳಪೆ ಗುಣಮಟ್ಟ, ಕುಡಿಯುವ ನೀರಿನ ಸರಬರಾಜು ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬ ಸೇರಿದಂತೆ ಹಲವು ಪ್ರಮುಖ ವಿಷಯಗಳು ಚರ್ಚೆಯಾದರೂ ಸದಸ್ಯರ ಕೂಗಾಟ, ಆರೋಪ-ಪ್ರತ್ಯಾರೋಪಕ್ಕೆ ಮಂಗಳವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ವೇದಿಕೆ ಆಯಿತು.

ಸರ್ಕಾರಿ ಅಂಗ ಸಂಸ್ಥೆಗಳಾದ ನಿರ್ಮಿತಿ ಕೇಂದ್ರ, ಭೂಸೇನಾ ನಿಗಮ, ಕೆಆರ್‌ಡಿಸಿಎಲ್ ಮತ್ತು ಪಿಆರ್‌ಇಡಿ ನಿರ್ವಹಿಸುತ್ತಿರುವ ಕಾಮಗಾರಿಗಳು; ಬೇಸಿಗೆ ಸಮೀಪಿಸುತ್ತಿದ್ದರೂ ಕುಡಿಯುವ ನೀರು ಸರಬರಾಜು ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳದ ಅಧಿಕಾರಿಗಳ ಧೋರಣೆಗೆ ಪಕ್ಷಾತೀತವಾಗಿ ಸದಸ್ಯರು ಹರಿಹಾಯ್ದರು.

ಅಧ್ಯಕ್ಷ ಶಿವಣ್ಣ ಅಧ್ಯಕ್ಷೆಯಲ್ಲಿ ಸಭೆ ಆರಂಭವಾದಗಿನಿಂದಲೂ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆದಿತ್ತಾದರೂ, ಸದಸ್ಯರು ಮಾತ್ರ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಕೆಲ ಸದಸ್ಯರು ಪ್ರಸ್ತಾಪಿಸಿದ ವಿಷಯಗಳಿಗೂ ಸಮರ್ಪಕ ಉತ್ತರ ದೊರೆಯಲಿಲ್ಲ. ಮಹಿಳಾ ಸದಸ್ಯರ ಪೈಕಿ ಒಂದಿಬ್ಬರನ್ನು ಹೊರತುಪಡಿಸಿದರೆ ಬೇರ‌್ಯಾರೂ ತುಟಿಬಿಚ್ಚಲಿಲ್ಲ.

ತ್ವರಿತವಾಗಿ ಕೈಗೊಳ್ಳಿ: ಜಿಲ್ಲೆಗೆ 2011-12ನೇ ಸಾಲಿನಲ್ಲಿ ಕುಡಿಯುವ ನೀರು ಸರಬರಾಜು ಕಾಮಗಾರಿಗಳ 32.23 ಕೋಟಿ ರೂ. ಬಿಡುಗಡೆಯಾಗಿದೆ. ಯಾವ ವರ್ಷವು 10 ಕೋಟಿ ರೂ. ಗಿಂತ ಹೆಚ್ಚು ಖರ್ಚಾಗಿಲ್ಲ. ಹೀಗಿರುವಾಗ ಈ ಹಣವನ್ನು ಒಂದೂವರೆ ತಿಂಗಳಲ್ಲಿ ಹೇಗೆ ಬಳಕೆ ಮಾಡ್ತೀರಿ? ಎಂದು ಸದಸ್ಯ ಡಾ. ಶಂಕರೇಗೌಡ ಪ್ರಶ್ನಿಸಿದರು.

ಸದಸ್ಯ ಬಸವರಾಜು ಮಾತನಾಡಿ, ಈ ವಿಷಯದಲ್ಲಿ ಇನ್ನೂ ಟೆಂಡರ್ ಪ್ರೋಷೆಸ್‌ನಲ್ಲೇ ಇದೆ. ಈಗ ಎಷ್ಟು ಹಣ ಖರ್ಚಾಗಿದೆ ಎಂಬ ವಿವರವಿಲ್ಲ. 3-4 ಬಾರಿ ಟೆಂಡರ್ ಆಗುವ ವೇಳೆಗೆ ಟೆಂಡರ್ ಆಯುಷ್ಯ ಮುಗಿದಿರುತ್ತದೆ.

ಹೀಗಿರುವಾಗ ಇಷ್ಟು ಕಡಿಮೆ ಅವಧಿಯಲ್ಲಿ ಹಣವನ್ನು ಸಮರ್ಪಕವಾಗಿ ಬಳಸಿಕೊಂಡು ಕಾಮಗಾರಿಗಳನ್ನು ಮುಗಿಸಲು ಸಾಧ್ಯವಿಲ್ಲ. ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ತರಾಟೆಗೆ ತೆಗೆದುಕೊಂಡರು.

ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಮಾದಪ್ಪ ಮಾತನಾಡಿ, ಎಂಜಿನಿಯರ್‌ಗಳ ಸ್ಥಳ ಪರಿಶೀಲಿಸುತ್ತಿಲ್ಲ. ನಾವುಗಳೇ ಒತ್ತಡ ಹಾಕಿ ಕೆಲಸ ಮಾಡಿಸಬೇಕಿದೆ. ಮಾಹಿತಿ ಕೇಳೋಣವೆಂದರೆ, ಮೊಬೈಲ್ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಿಪಂ ಯೋಜನಾ ನಿರ್ದೇಶಕ ಶಂಕರರಾಜು ಮಾತನಾಡಿ, ಸರ್ಕಾರ ನೀಡಿದ ಹಣವನ್ನು ಸಕಾಲದಲ್ಲಿ ಬಳಸಿಕೊಳ್ಳಬೇಕು. ಇಲ್ಲದಿದ್ದರೆ ಕಾರ್ಯಪಾಲಕ ಎಂಜಿನಿಯರ್ ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳೂ ಹೊಣೆ ಆಗಬೇಕಾಗುತ್ತದೆ. ಹೀಗಾಗದಂತೆ ಎಚ್ಚರವಹಿಸಿ ಎಂದು ತಾಕೀತು ಮಾಡಿದರು.

ಎಲ್ಲವೂ ಕಳಪೆ: ನಿರ್ಮಿತಿ ಕೇಂದ್ರ, ಭೂ ಸೇನಾ ನಿಗಮ, ಕೆಆರ್‌ಡಿಸಿಎಲ್, ಪಿಆರ್‌ಇಡಿ ನಿರ್ವಹಿಸುತ್ತಿರುವ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಕಟ್ಟಡಗಳು ಕುಸಿದು ಬೀಳುವ ಸ್ಥಿತಿಯಲ್ಲಿವೆ. ಕಿಟಕಿ, ಬಾಗಿಲುಗಳು ಕಿತ್ತು ಬರುತ್ತಿವೆ ಎಂದು ಸದಸ್ಯರಾದ ಕೆಂಪೂಗೌಡ, ಜೆ.ಇ.ಚಂದ್ರಕಲಾ, ಸತೀಶ್, ಮಂಜುಳಾ ಆಕ್ರೋಶ ವ್ಯಕ್ತಪಡಿಸಿದರು.

ಎಂಜಿನಿಯರ್‌ಗಳು ಪಕ್ಷ ಮಾನವರಾಗಿದ್ದಾರೆ. ಅವರು ವಿಶ್ವ ಮಾನವರಾಗಬೇಕು. ನಿರ್ಮಿತಿ ಕೇಂದ್ರ, ಭೂ ಸೇನಾ ನಿಗಮದವರು ದಲ್ಲಾಳಿಗಳ ರೀತಿ ಆಗಿದ್ದಾರೆ. ಕಳಪೆ ಗುಣಮಟ್ಟದ ಬಗೆಗೆ ಪ್ರಸ್ತಾಪಿಸುತ್ತಲೇ ಬಂದಿದ್ದರೂ ಇದನ್ನು ಅಧಿಕಾರಿಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ಸದಸ್ಯ ಕೆಂಪೂಗೌಡ ಆಕ್ರೋಶ ವ್ಯಕ್ತಪಡಿಸಿದರು.

ಜಿಪಂನ ಶಂಕರರಾಜು ಮಾತನಾಡಿ, ಯಾವುದೇ ಕಾರಣಕ್ಕೂ ಕಾಮಗಾರಿಗಳನ್ನು ಉಪ ಗುತ್ತಿಗೆ ನೀಡುವಂತಿಲ್ಲ. ಒಂದು ವೇಳೆ ಕಳಪೆ ಕಾಮಗಾರಿ ನಡೆದಿರುವ ಬಗೆಗೆ ದೂರು ಬಂದರೆ, ತಾಂತ್ರಿಕ ಸಮಿತಿಯಿಂದ ಪರಿಶೀಲನೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಿ.ಮಾದಪ್ಪ, ಮಂಜೇಗೌಡ, ಶ್ರೀನಿವಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.