ADVERTISEMENT

ಕೃಷಿಯತ್ತ ಮುಖಮಾಡಿದ ಪ್ಯಾಟೆ ಹುಡುಗ

​ಪ್ರಜಾವಾಣಿ ವಾರ್ತೆ
Published 4 ಜೂನ್ 2012, 5:40 IST
Last Updated 4 ಜೂನ್ 2012, 5:40 IST

ಶ್ರೀರಂಗಪಟ್ಟಣ: ಕೃಷಿ ನಷ್ಟದ ಕಸುಬು ಎಂಬ ಕಾರಣಕ್ಕೆ ಹಳ್ಳಿಗಳಲ್ಲಿ ರೈತರು ಬೇಸಾಯಕ್ಕೆ ಬೆನ್ನು ತೋರಿಸುತ್ತಿರುವ ಕಾಲದಲ್ಲಿ ನಗರ ಪ್ರದೇಶದಲ್ಲಿ ಹುಟ್ಟಿ ಬೆಳೆದ ಯುವ ಉತ್ಸಾಹಿಯೊಬ್ಬರು ಕೃಷಿಯತ್ತ ಮುಖ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಮೈಸೂರಿನ ಸುರೇಶ್ ಎಂಬವರು ತಾಲ್ಲೂಕಿನ ಕಾರೇಕುರ ಗ್ರಾಮದ ಬಳಿ ಒಂದೂವರೆ ಎಕರೆ ಜಮೀನಿನಲ್ಲಿ ಬಾಳೆ, ತೆಂಗು ಮಾವು ಬೆಳೆಯುವ ಜತೆಗೆ ಹಸು, ಕೋಳಿ ಮತ್ತು ಮೀನು ಸಾಕಣೆಗೆ ಮುಂದಾಗಿದ್ದಾರೆ. ಅರ್ಧ ಎಕರೆಯಷ್ಟು ವಿಶಾಲವಾದ ಕೊಳ ನಿರ್ಮಿಸಿ ಕಾಟ್ಲಾ, ರೂಹು ಮತ್ತು ಸಾಮಾನ್ಯ ಗೆಂಡೆ ತಳಿಯ 3 ಸಾವಿರ ಮೀನುಗಳನ್ನು ಸಾಕುತ್ತಿದ್ದಾರೆ.

ಒಂದು ವರ್ಷದ ಹಿಂದೆ ಬಿಟ್ಟಿರುವ ಮೀನು ಮರಿಗಳು ಈಗ ಒಂದೂವರೆ ಕೆ.ಜಿ.ಯಷ್ಟು ಬೆಳೆದಿವೆ. ಕೋಳಿಗಳ ಹಿಕ್ಕೆ ಮೀನಿನ ಕೊಳಕ್ಕೆ ಬೀಳುವಂತೆ ಜಾಲರಿಗಳನ್ನು ಅಳವಡಿಸಿದ್ದಾರೆ. ಸಿದ್ಧ ಆಹಾರದ ಜತೆಗೆ ಕೋಳಿಯ ಹಿಕ್ಕೆಯಿಂದ ಉತ್ಪತ್ತಿಯಾಗುವ ಕೀಟಾಣುಗಳು ಮೀನುಗಳಿಗೆ ನೈಸರ್ಗಿಕ ಆಹಾರವಾಗಿದ್ದು, ಅವುಗಳ ಬೆಳವಣಿಗೆಗೆ ಪೂರಕವಾಗಿದೆ.

  ಸುರೇಶ್ ತಮ್ಮ ತೋಟದಲ್ಲಿ ಗಿರಿರಾಜ, ಬಾತು, ಟರ್ಕಿ ಕೋಳಿಯ ಜತೆಗೆ ನಾಟಿ ಕೋಳಿಗಳನ್ನೂ ಸಾಕುತ್ತಿದ್ದಾರೆ. ನಾಲ್ಕಾರು ಮಿಶ್ರತಳಿಯ ಹಸುಗಳನ್ನು ಕೂಡ ಸಾಕಿದ್ದಾರೆ. ಕೋಳಿ, ಕೋಳಿ ಮೊಟ್ಟೆ ಮತ್ತು ಹಸುವಿನ ಹಾಲನ್ನು ಮೈಸೂರಿನಲ್ಲಿ ಮಾರಾಟ ಮಾಡಿ ಹಣ ಗಳಿಸುತ್ತಿದ್ದಾರೆ.

ಸುರೇಶ್ ಅವರ ತೋಟದಲ್ಲಿ ಸಾವಿರಕ್ಕೂ ಹೆಚ್ಚು ಬಾಳೆ ಗಿಡಗಳಿವೆ. ಜತೆಗೆ ಮಾವು, ಸಪೋಟ, ಹಲಸು, ದಾಳಿಂಬೆ, ಪನ್ನೇರಳೆ, ಜಂಬು ನೇರಳೆ, ಸೀತಾಫಲ ಹಣ್ಣಿನ ಗಿಡಗಳೂ ಉಂಟು. ಬದುಗಳಲ್ಲಿ ತೆಂಗು, ತೇಗ ಮತ್ತು ನೆಲ್ಲಿಯ ಗಿಡಗಳಿದ್ದು ಹುಲಸಾಗಿ ಬೆಳೆಯುತ್ತಿವೆ.

ನಗರ ಜೀವನ ರುಚಿಸಿದ ಸುರೇಶ್ ತಮ್ಮ ಪೂರ್ವಜರು ಮಾಡುತ್ತಿದ್ದ ಬೇಸಾಯ ದತ್ತ ಆಕರ್ಷಿತರಾಗಿದ್ದು ಅದರಲ್ಲಿ ಲಾಭ ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.