ADVERTISEMENT

ಕೆರೆಗಳಿಗೆ ನೀರು ತುಂಬಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 10:32 IST
Last Updated 6 ಡಿಸೆಂಬರ್ 2013, 10:32 IST

ಮಂಡ್ಯ: ಹೇಮಾವತಿ ಎಡದಂಡೆ ನಾಲೆಯಿಂದ ಕೆರೆ–ಕಟ್ಟೆಗಳಿಗೆ ನೀರು ತುಂಬಿಸಿಕೊಡುವಂತೆ ಹಾಗೂ ಬೇವುಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿ ಪ್ರದೇಶವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ತಾಲ್ಲೂಕಿನ ಬೇವುಕಲ್ಲು ಗ್ರಾಮ ಅಧ್ಯಕ್ಷ ವಿಶ್ವೇಶ್ವರಯ್ಯ ಆಗ್ರಹಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ 11 ಹಳ್ಳಿಗಳು ಸಂಪೂರ್ಣ ಬರಪೀಡಿತ ಪ್ರದೇಶಗಳಾಗಿವೆ. ಮಳೆಯಿಲ್ಲದೆ ಕೆರೆ-ಕಟ್ಟೆಗಳು ಒಣಗಿವೆ. ಕುಡಿಯುವ ನೀರಿಗೆ ಆಸರೆಯಾಗಿದ್ದ ಕೊಳವೆಬಾವಿಗಳು ಬರಿದಾಗಿದೆ. ದನ-ಕರುಗಳಿಗೆ ಕುಡಿಯಲು ನೀರಿಲ್ಲದೆ ಜನರು ಗುಳೆ ಹೋಗುವ ಸ್ಥಿತಿ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹೇಮಾವತಿ ಎಡದಂಡೆ ನಾಲೆ ಸಂಪರ್ಕ ವ್ಯವಸ್ಥೆ ಇದ್ದರೂ ನಾಲೆಯ ಕೊನೆಯ ಭಾಗವಾಗಿರುವುದರಿಂದ ಇಲ್ಲಿಗೆ ನೀರು ತಲುಪುತ್ತಿಲ್ಲ. ಈ ಭಾಗದ ಜನರು ಹಲವು ವರ್ಷಗಳಿಂದ ಈ ಬಗೆಗೆ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಗ್ರಾಮ ವಾಸ್ತವ್ಯಕ್ಕೆ ಇಲ್ಲಿಗೆ ಬಂದಿದ್ದ ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೂ ಈ ಬಗೆಗೆ ಮನವಿ ಮಾಡಿಕೊಳ್ಳಲಾಗಿತ್ತು. ಆ ಬಳಿಕ ಸರ್ವೇ ಕಾರ್ಯ ನಡೆಯಿತೇ ವಿನಾ ನೀರು ತಲುಪಲಿಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಮತ್ತು ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಸೇರಿದಂತೆ ಅನೇಕರ ಗಮನ ಸೆಳೆದಿದ್ದರೂ ಪ್ರಯೋಜನವಾಗಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ತಿಂಗಳಲ್ಲಿ ಕುಡಿಯುವ ನೀರಿಗಾಗಿ  ತೋಡಿಸಿದ 20 ಕೊಳವೆಬಾವಿ ವಿಫಲವಾಗಿದೆ ಎಂದು ಹೇಳಿದರು.

ಸಮಸ್ಯೆ ಇನ್ನಷ್ಟುಉಲ್ಬಣಿಸುವ ಮೊದಲು ಹೇಮಾವತಿ ಎಡದಂಡೆ ನಾಲೆಯಿಂದ ನೀರು ಹರಿಯುವಂತೆ ಕ್ರಮ ಕೈಗೊಂಡು ಕೆರೆ-ಕಟ್ಟೆಗಳನ್ನು ತುಂಬಿಸಬೇಕು. ಇಲ್ಲದಿದ್ದರೆ, ಜಿಲ್ಲಾಧಿಕಾರಿ ಮತ್ತು ಸಂಬಂಧಪಟ್ಟ ಇಲಾಖೆಗಳ ಕಚೇರಿ ಎದುರು ಧರಣಿ ನಡೆಸುವುದಾಗಿ ಎಚ್ಚರಿಸಿದರು.

ಉಪಾಧ್ಯಕ್ಷೆ ವಿಜಯವಾಣಿ, ನರಸಿಂಹಯ್ಯ, ಭೈರಪ್ಪ, ಶಿವಪ್ರಸಾದ್್, ಬಸವೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.