ADVERTISEMENT

ಕೆ.ಹೊನ್ನಲಗೆರೆ: ವಿಜ್ಞಾನ ಜಾತ್ರೆ ಇಂದಿನಿಂದ

ವಿಜ್ಞಾನ ಲೋಕದ ವೈಶಿಷ್ಟ್ಯಗಳ ಅನಾವರಣಕ್ಕೆ ವೇದಿಕೆ ಸಜ್ಜು; ಎರಡು ದಿನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2016, 6:42 IST
Last Updated 15 ನವೆಂಬರ್ 2016, 6:42 IST
ಮದ್ದೂರು ತಾಲ್ಲೂಕು ಆರ್‌.ಕೆ.ವಿದ್ಯಾಸಂಸ್ಥೆಯಲ್ಲಿ ವಿಜ್ಞಾನ ಜಾತ್ರೆ ಅಂಗವಾಗಿ ನಡೆಯುವ ವಸ್ತು ಪ್ರದರ್ಶನ ಸಂವಾದ ಕಾರ್ಯಕ್ರಮಕ್ಕೆ ಸೋಮವಾರ ಬೃಹತ್‌ ವೇದಿಕೆ ಸಿದ್ಧಗೊಳಿಸುವ ಕಾರ್ಯ ಆರಂಭಗೊಂಡಿತು
ಮದ್ದೂರು ತಾಲ್ಲೂಕು ಆರ್‌.ಕೆ.ವಿದ್ಯಾಸಂಸ್ಥೆಯಲ್ಲಿ ವಿಜ್ಞಾನ ಜಾತ್ರೆ ಅಂಗವಾಗಿ ನಡೆಯುವ ವಸ್ತು ಪ್ರದರ್ಶನ ಸಂವಾದ ಕಾರ್ಯಕ್ರಮಕ್ಕೆ ಸೋಮವಾರ ಬೃಹತ್‌ ವೇದಿಕೆ ಸಿದ್ಧಗೊಳಿಸುವ ಕಾರ್ಯ ಆರಂಭಗೊಂಡಿತು   

ಮದ್ದೂರು:  ತಾಲ್ಲೂಕಿನ ಕೆ.ಹೊನ್ನಲಗೆರೆ ಗ್ರಾಮದ ಆರ್.ಕೆ.ವಿದ್ಯಾಸಂಸ್ಥೆ ಆವರಣ ದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ನೇತೃತ್ವದಲ್ಲಿ ನ.15 ಹಾಗೂ 16ರಂದು ಜಿಲ್ಲಾಮಟ್ಟದ ‘ವಿಜ್ಞಾನ ಜಾತ್ರೆ’ ನಡೆಯಲಿದ್ದು, ಸಕಲ ಸಿದ್ಧತೆಗಳೊಂದಿಗೆ ವಿಜ್ಞಾನ ಲೋಕದ ವೈಶಿಷ್ಟ್ಯಗಳು ಅನಾವರಣಗೊಳ್ಳುತ್ತಿವೆ.

‘ಸಮಗ್ರ ಅಭಿವೃದ್ಧಿಗೆ ವಿಜ್ಞಾನ ಮತ್ತು ಗಣಿತ’ ಪ್ರಧಾನ ವಿಷಯದಡಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ವಿಭಾಗ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ವಿಜ್ಞಾನ ವಸ್ತುಪ್ರದರ್ಶನ ನಡೆಯಲಿದೆ. ಶಿಕ್ಷಣ ಇಲಾಖೆಯಿಂದ ಹಾಗೂ ಆರ್‌.ಕೆ.ವಿದ್ಯಾಸಂಸ್ಥೆಯಿಂದ ಪ್ರತ್ಯೇಕವಾಗಿ ನಗದು ಪುರಸ್ಕಾರ ನೀಡಲಾಗುತ್ತಿದೆ.

ಈಗಾಗಲೇ ‘ವಿಜ್ಞಾನ ಜಾತ್ರೆ’ಯ ಯಶಸ್ಸಿಗಾಗಿ ಇಡೀ ವಿದ್ಯಾಸಂಸ್ಥೆಯ ಸಿಬ್ಬಂದಿ ಅವಿರತ ಶ್ರಮಿಸುತ್ತಿದೆ. ವಿದ್ಯಾ ಸಂಸ್ಥೆ ಆವರಣದಲ್ಲಿ 20 x 20ಅಡಿ ವಿಸ್ತೀರ್ಣದ ಬೃಹತ್‌ ಆಕರ್ಷಕ ವೇದಿಕೆ ಸಿದ್ಧಪಡಿಸಲಾಗಿದೆ. ಇದಲ್ಲದೇ ಒಂದು ಸಾವಿರ ಮಂದಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ  ಆಯೋಜಿಸಲಾಗಿದೆ. ಜನರಿಗೆ ಹಳ್ಳಿಗಾಡಿನ ತಿನಿಸುಗಳೊಂದಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬರುವ ನೂರಾರು ವಿಜ್ಞಾನ ಮಾದರಿಗಳ ಪ್ರದರ್ಶನಕ್ಕೆ 20 ಕೊಠಡಿಗಳನ್ನು ಸಜ್ಜುಗೊಳಿಸಲಾಗಿದೆ. 

‘ಇದೇ ಮೊದಲ ಬಾರಿಗೆ ಬೃಹತ್‌ ಪ್ರಮಾಣದಲ್ಲಿ ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗದ ವಿಜ್ಞಾನ ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ವಿಜ್ಞಾನಸಕ್ತರಿಗೆ ಅಗತ್ಯ ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಸಂಸ್ಥೆ ಆಡಳಿತಾಧಿಕಾರಿ ಹ.ನಿ. ಶಿವಣ್ಣೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. 

ಅಂಗಾಗ ಮಾದರಿ: ಜೆಎಸ್ಎಸ್ ವೈದ್ಯಕೀಯ ಮಹಾವಿದ್ಯಾಲಯದಿಂದ ಮಾನವನ ದೇಹದ ವಿವಿಧ ಅಂಗಾಂಗಳ 100ಕ್ಕೂ ಹೆಚ್ಚು ನೈಜ ಮಾದರಿಗಳನ್ನು ಪ್ರದರ್ಶಿಸುತ್ತಿರುವುದು ಈ ವಿಜ್ಞಾನ ಜಾತ್ರೆಯ ವೈಶಿಷ್ಟ್ಯವಾಗಿದೆ.

ಬೆಂಗಳೂರಿನ ಜವಾಹರ್‌ ನೆಹರೂ ತಾರಾಲಯದಿಂದ ಸೌರವ್ಯೂಹ ಸೇರಿ ದಂತೆ ವಿವಿಧ ಅಂತರಿಕ್ಷ ಸಾಧನೆಯ ಮಾದರಿಗಳು ಜಾತ್ರೆಯಲ್ಲಿ ಪ್ರದರ್ಶನ ಗೊಳ್ಳುತ್ತಿವೆ.  ನವೀಕರಿಸಬಹುದಾದ ಇಂಧನಗಳ ಅಭಿವೃದ್ಧಿ ನಿಗಮದಿಂದ ಸಂಚಾರ ವಸ್ತು ಪ್ರದರ್ಶನ ನಡೆಯಲಿದೆ. ಇದಲ್ಲದೇ ಮಂಡ್ಯ ವಿ.ಸಿ ಫಾರಂ ಕೃಷಿ ವಿಜ್ಞಾನ ಕಾಲೇಜಿನಿಂದ ರೈತರಿಗೆ ಉಪಯುಕ್ತವಾಗುವ ಅಗತ್ಯ ಆಧುನಿಕ ತಂತ್ರಜ್ಞಾನ ಕುರಿತು ಕೃಷಿ ಮಾದರಿಗಳು ಪಾಲ್ಗೊಳ್ಳುತ್ತಿರುವುದು ವಿಜ್ಞಾನ ಜಾತ್ರೆಯ ಮೆರಗು ಹೆಚ್ಚಿಸಿದೆ.

ವಿಜ್ಞಾನಿ ಸಂವಾದ: ಬೆಂಗಳೂರಿನ ಇಸ್ರೋ ಹಾಗೂ ಭಾರತೀಯ ವಿಜ್ಞಾನ ಮಂದಿರದ ವಿಜ್ಞಾನಿಗಳಾದ ಡಾ.ಸಿ.ಡಿ. ಪ್ರಸಾದ್, ಡಾ.ಹರೀಶ್ ಆರ್.ಭಟ್ ಅವರೊಡನೆ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳ ವಿಶೇಷ ಸಂವಾದ ಏರ್ಪಡಿಸಲಾಗಿದೆ.

ಜಿಲ್ಲೆಯ ನುರಿತ ವಿಜ್ಞಾನ ಅಧ್ಯಾಪಕರಿಂದ ‘ವಿಜ್ಞಾನ ಪವಾಡ ರಹಸ್ಯ ಬಯಲು’ ಕಾರ್ಯಕ್ರಮ ಆಯೋಜಿಸಿದೆ. ‘ವಿಜ್ಞಾನ ಜಾತ್ರೆ’ಯಲ್ಲಿ ಪಾಲ್ಗೊಳ್ಳುವ ಎಲ್ಲ ಸ್ಪರ್ಧಿಗಳಿಗೆ, ಶಿಕ್ಷಕರಿಗೆ, ವಿಜ್ಞಾನಾಸಕ್ತರಿಗೆ  ಮಂಡ್ಯ ಹಾಗೂ ಮದ್ದೂರಿನಿಂದ ಕೆ.ಹೊನ್ನಲಗೆರೆಗೆ ಹೋಗಿ ಬರಲು ಸೂಕ್ತ ಬಸ್‌ ವ್ಯವಸ್ಥೆ ಕಲ್ಪಿಸಿದೆ. ವಿವರಕ್ಕೆ  ಆಡಳಿತಾಧಿಕಾರಿ ಶಿವಣ್ಣೇಗೌಡ ಮೊ: 73497 79263 ಅವರನ್ನು ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.