ADVERTISEMENT

ಕೋಡೋಕಾಪ್ಟರ್ ತಯಾರಿಸಿದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 23 ಜೂನ್ 2012, 4:15 IST
Last Updated 23 ಜೂನ್ 2012, 4:15 IST
ಕೋಡೋಕಾಪ್ಟರ್ ತಯಾರಿಸಿದ ವಿದ್ಯಾರ್ಥಿಗಳು
ಕೋಡೋಕಾಪ್ಟರ್ ತಯಾರಿಸಿದ ವಿದ್ಯಾರ್ಥಿಗಳು   

ಕೃಷ್ಣರಾಜಪೇಟೆ: ಹೆಲಿಕಾಪ್ಟರ್ ಬಗ್ಗೆ ತಿಳಿದಿರುವ ನಮಗೆ ಕೋಡೋಕಾಫ್ಟರ್‌ನ ಕುರಿತಾಗಿ ಹೆಚ್ಚಿನ ಮಾಹಿತಿ ಲಭ್ಯವಿಲ್ಲದಿರಬಹುದು. ಇದು, ಹೆಲಿಕಾಪ್ಟರ್‌ನಂತೆಯೇ ಕಾರ್ಯ ನಿರ್ವಹಿಸುವ, ಮಾನವ ರಹಿತ ಸಾಧನ.

ಫ್ರಾನ್ಸ್‌ನ ಲೂಯಿಸ್ ಜಾಕೀಸ್ ಬರ್ಗೆಟ್ ಎಂಬಾತ 1907ರಲ್ಲಿ ಇಂತಹ ಯಂತ್ರವನ್ನು ಪ್ರಥಮ ಬಾರಿಗೆ ರೂಪಿಸಿದ ಬಗ್ಗೆ ಮಾಹಿತಿ ಇದೆ. ನೈಸರ್ಗಿಕ ವಿಕೋಪಗಳಾದ ಸುನಾಮಿ, ಭೂಕಂಪ, ನೆರೆ ಹಾವಳಿ, ಅಗ್ನಿ ಆಕಸ್ಮಿಕ ಅಥವಾ ಯುದ್ಧಗಳ ಸಂದರ್ಭದಲ್ಲಿ ಮಾನವ ನೇರವಾಗಿ ತಲುಪಲಾಗದ ಸ್ಥಳಗಳನ್ನು ಸುಲಭವಾಗಿ ತಲುಪಿ ಪರಿಹಾರ ಕಾರ್ಯ, ಮಾಹಿತಿ ಸಂಗ್ರಹಣೆ ಸೇರಿದಂತೆ ನಿಯೋಜಿಸಿದ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವ ಬಹು ಉಪಯೋಗಿ ಯಂತ್ರ ಇದು.

ಅಲ್ಲದೆ, ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಔಷಧ ಸಿಂಪಡಣೆ, ಎತ್ತರದ ಮರಗಳಿಗೆ ತಗುಲಿದ ಸೋಂಕು ನಿವಾರಣಾ ಔಷಧಗಳ ಸಿಂಪಡಣೆ ಕಾರ್ಯಗಳಿಗೂ ಇದನ್ನು ಬಳಕೆ ಮಾಡಲಾಗುತ್ತದೆ.

ಪಟ್ಟಣದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು  ಈ ಕೋಡೋಕಾಪ್ಟರ್‌ನ ಮಾದರಿ ತಯಾರಿಸಿ ಇತ್ತೀಚೆಗೆ ಹಾರಾಟ ನಡೆಸಿದ್ದಾರೆ. ಪ್ರತ್ಯೇಕ ಬ್ಯಾಟರಿ ಚಾಲಿತ ಮೋಟಾರ್‌ಗಳನ್ನು ಅಳವಡಿಸಿದ್ದು, ನಾಲ್ಕು ರೆಕ್ಕೆಗಳನ್ನುಳ್ಳ ಪುಟ್ಟ ಯಂತ್ರ ಇದಾಗಿದೆ.

ರಿಮೋಟ್ ಕಂಟ್ರೋಲ್ ಸಾಧನದ ಮೂಲಕ ಈ ಯಂತ್ರದ ಹಾರಾಟ ಪಥವನ್ನು ಬದಲಿಸಬಹುದಾದ ವ್ಯವಸ್ಥೆ ಇದೆ. ಕಾಲೇಜಿನ ಕೆ.ಎಸ್.ಜಿತೇಂದ್ರ, ಸಿ.ಎಸ್.ಸಂದೀಪ್, ಎಚ್.ಬಿ.ವಿನೋದ್‌ಕುಮಾರ್ ತಂಡ, ಅಧ್ಯಾಪಕರ ಮಾರ್ಗದರ್ಶನದಲ್ಲಿ ಒಂದು ತಿಂಗಳ ಪರಿಶ್ರಮದೊಂದಿಗೆ, 20 ಸಾವಿರ ರೂ. ವೆಚ್ಚದಲ್ಲಿ ತಯಾರಿಸಿದ್ದಾರೆ.

ಈ ಕೋಡೋಕಾಪ್ಟರ್‌ಗೆ 6 ವಾಟ್ ಸಾಮರ್ಥ್ಯದ ನಾಲ್ಕು ಮೋಟಾರ್‌ಗಳನ್ನು ಅಳವಡಿಸಲಾಗಿದೆ. ಇದು, 15 ಮೀ. ಎತ್ತರದಲ್ಲಿ 5 ರಿಂದ 6 ನಿಮಿಷ ಹಾರಾಟ ನಡೆಸಬಲ್ಲದು ಎನ್ನುತ್ತಾರೆ ವಿದ್ಯಾರ್ಥಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.