ADVERTISEMENT

ಕ್ರೀಡೆಗಳು ಸೌಹಾರ್ದತೆ ಮೂಡಿಸಲಿ

ಜಾತ್ರಾ ಮಹೋತ್ಸವದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2014, 6:11 IST
Last Updated 14 ಮಾರ್ಚ್ 2014, 6:11 IST

ನಾಗಮಂಗಲ: ಕ್ರೀಡೆಗಳು ಮನಸುಗಳನ್ನು ಒಂದು ಗೂಡಿಸುವ, ಪರಸ್ಪರರಲ್ಲಿ ಸೌಹಾರ್ದತೆ ಮೂಡಿಸುವ ವೇದಿಕೆಗಳಾಗಬೇಕು ಎಂದು ಆದಿಚುಂಚನಗಿರಿ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಬಿಜಿಎಸ್ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಾಲಿಬಾಲ್ ಟೂರ್ನಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವಜನತೆ ಕೇವಲ ಪಠ್ಯದ ವಿಷಯಗಳಿಗಷ್ಟೇ ಸೀಮಿತರಾಗಿ ಪುಸ್ತಕದ ಹುಳುಗಳಾಗುತ್ತಿದ್ದಾರೆ. ವಿದ್ಯೆಯ ಜತೆ ಜತೆಗೆ ಕ್ರೀಡೆಯ ಅವಶ್ಯಕತೆಯೂ ಇದೆ ಎನ್ನುವ ಮನೋಭಾವ ದೂರವಾಗುತ್ತಿದೆ. ವಿದ್ಯೆ ಮತ್ತು ಕ್ರೀಡೆ ಎರಡೂ ಸಮಾನಾಂತರವಾಗಿ ಚಲಿಸಿದಾಗ ವ್ಯಕ್ತಿ ಭೌತಿಕವಾಗಿ, ಬೌದ್ಧಿಕವಾಗಿ ಅಭಿವೃದ್ಧಿ ಕಾಣುತ್ತಾನೆ ಎಂದರು.

ಪ್ರಸ್ತುತ ಸನ್ನಿವೇಶದಲ್ಲಿ ಯುವಪೀಳಿಗೆ ಕ್ರೀಡೆಯಿಂದ ವಿಮುಖರಾಗಲು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಪೋಷಕರು ಕಾರಣ. ವಿದ್ಯಾರ್ಥಿ ದಿಸೆಯಿಂದಲೇ ಅವರನ್ನು ಅಂಕಗಳಿಸುವ ಯಂತ್ರಗಳನ್ನಾಗಿ ತಯಾರು ಮಾಡುತ್ತಿದ್ದಾರೆ. ಕ್ರೀಡೆಗಳ ಮೇಲೆ ವಿದ್ಯಾರ್ಥಿಗಳಿಗಿರುವ ಅಭಿಲಾಷೆಯನ್ನು ಬಲವಂತವಾಗಿ ಹತ್ತಿಕ್ಕುವ ಕೆಲಸದಲ್ಲಿ ಪೋಷಕರು ತೊಡಗಿದ್ದಾರೆ. ಪೋಷಕರು ತಮ್ಮ ಮಕ್ಕಳಲ್ಲಿರುವ ಕ್ರೀಡೆಯ ಅಭಿರುಚಿಯನ್ನು ಪೋಷಿಸಬೇಕು ಎಂದು ಕಿವಿಮಾತು ಹೇಳಿದರು.

ಬೆಂಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ, ಮಂಡ್ಯ, ಹಾಸನ, ತುರುವೆಕೆರೆ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಹಲವಾರು ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.