ADVERTISEMENT

ಚುನಾವಣಾ ನೀತಿ ಸಂಹಿತೆ ಪಾಲನೆಗೆ ಸೂಚನೆ

ನಿಯೋಜಿತ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿ ರಮಣರೆಡ್ಡಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2016, 9:12 IST
Last Updated 23 ಜನವರಿ 2016, 9:12 IST
ಶ್ರೀರಂಗಪಟ್ಟಣ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ  ಕಾರಣ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣಾ ಕ್ಷೇತ್ರಗಳ ಚುನಾವಣಾಧಿಕಾರಿ ರಮಣರೆಡ್ಡಿ ಮಾತನಾಡಿದರು
ಶ್ರೀರಂಗಪಟ್ಟಣ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಕಾರಣ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣಾ ಕ್ಷೇತ್ರಗಳ ಚುನಾವಣಾಧಿಕಾರಿ ರಮಣರೆಡ್ಡಿ ಮಾತನಾಡಿದರು   

ಶ್ರೀರಂಗಪಟ್ಟಣ: ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಯೋಜಿತ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾಧಿಕಾರಿ ರಮಣರೆಡ್ಡಿ ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಪಕ್ಷಪಾತ ಧೋರಣೆ ಅನುಸರಿಸಬಾರದು. ಚುನಾವಣಾ ಅಧಿಕಾರಿಗಳು ದಿನದ 24 ತಾಸು ತಮ್ಮ ಮೊಬೈಲ್‌ನ್ನು ಚಾಲನೆಯಲ್ಲಿ ಇಟ್ಟಿರಬೇಕು. ಸರ್ಕಾರದ ಯೋಜನೆಗಳನ್ನು ಬಿಂಬಿಸುವ ಜಾಹೀರಾತು ಫಲಕಗಳನ್ನು ಮುಚ್ಚಬೇಕು. ಚುನಾವಣಾ ಉದ್ದೇಶಕ್ಕೆ ನಡೆಯುವ ಸಭೆ, ಸಮಾರಂಭಕ್ಕೆ ಚುನಾವಣಾಧಿಕಾರಿಯ ಅನುಮತಿ ಇರಬೇಕು.

ನೀತಿ ಸಂಹಿತೆ ಜಾರಿಯಲ್ಲಿ ಇರುವ ಅವಧಿಯಲ್ಲಿ ದೇವಾಲಯ ಇತರೆಡೆ ಖಾಸಗಿಯಾಗಿ ಭೋಜನ ಕೂಟ ಏರ್ಪಡಿಸುವವರೂ ಚುನಾವಣಾಧಿಕಾರಿಯಿಂದ ಅನುಮತಿ ಪಡೆಯಬೇಕು. ಧ್ವನಿವರ್ಧಕ, ಬ್ಯಾನರ್‌, ಬಂಟಿಂಕ್‌್ಸ, ಫ್ಲೆಕ್‌್ಸ ಹಾಕುವವರು ಕೂಡ ಕಡ್ಡಾಯವಾಗಿ ಅನುಮತಿ ಪಡೆಯುವಂತೆ ತಿಳಿಸಬೇಕು. ಕರ್ತವ್ಯ ಲೋಪ ಎಸಗುವ ಸಿಬ್ಬಂದಿಯ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಸಿದರು.

ತಹಶೀಲ್ದಾರ್‌ ಎಂ. ದಯಾನಂದ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಅಂಗಡಿಗಳ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮತಗಟ್ಟೆಗಳಿಗೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಬೇಕು. ಮತಗಟ್ಟೆಯ ಕಿಟಕಿ. ಬಾಗಿಲು ಭದ್ರಪಡಿಸಬೇಕು.

ಕುಡಿಯುವ ನೀರು ಹಾಗೂ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳನ್ನು ಇಡಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಚುನಾವಣಾ ಆಯೋಗದ ವೀಕ್ಷಕರು ಭೇಟಿ ನೀಡುವಷ್ಟರಲ್ಲಿ ಸಿದ್ದತೆ ಪೂರ್ಣಗೊಂಡಿರಬೇಕು ಎಂದು ಹೇಳಿದರು.n ಜ.25ರಂದು ಬೆಳಿಗ್ಗೆ 11 ಗಂಟೆಗೆ ತಾಲ್ಲೂಕು ಕಚೇರಿಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ನಡೆಯಲಿದ್ದು, ಪ್ರತಿಜ್ಞಾ ವಿಧಿ ಬೋಧಿಸಲಾಗುವುದು. ತಾಲ್ಲೂಕು ಮಟ್ಟದ ಎಲ್ಲ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.

156 ಮತಗಟ್ಟೆಗಳು: ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವವರು ₹ 1 ಲಕ್ಷ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಅಭ್ಯರ್ಥಿಗಳು ₹ 50 ಸಾವಿರ ಮೀರದಂತೆ ಖರ್ಚು ಮಾಡಬೇಕು. ಪ್ರತಿ ದಿನದ ಖರ್ಚು– ವೆಚ್ಚದ ಬಗ್ಗೆ ಚುನಾವಣಾಧಿಕಾರಿಗೆ ಮಾಹಿತಿ ನೀಡಬೇಕು. ಒಬ್ಬ ಅಭ್ಯರ್ಥಿ 5ಕ್ಕಿಂತ ಹೆಚ್ಚು ವಾಹನಗಳನ್ನು ಬಳಸಬಾರದು. ತಾಲ್ಲೂಕಿನಾದ್ಯಂತ 156 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. 8 ಮಂದಿ ಸೆಕ್ಟರಲ್‌ ಮ್ಯಾಜಿಸ್ಟ್ರೇಟ್‌ಗಳನ್ನು ನಿಯೋಜಿಸಲಾಗಿದೆ.

4 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮಣರೆಡ್ಡಿ, ಕಸಬಾ ಮತ್ತು ಬೆಳಗೊಳ ಹೋಬಳಿಯ ತಾ.ಪಂ. ಮತ ಕ್ಷೇತ್ರಗಳು ಹಾಗೂ ತಡಗವಾಡಿ ತಾ.ಪಂ. ಕ್ಷೇತ್ರಕ್ಕೆ ಡಾ.ಎಚ್‌. ನಾಗರಾಜು ಚುನಾವಣಾ ಅಧಿಕಾರಿಯಾಗಿರುತ್ತಾರೆ. ಅರಕೆರೆ ಮತ್ತು ಕೆ.ಶೆಟ್ಟಹಳ್ಳಿ ಹೋಬಳಿಗಳ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಂ,ಟಿ. ಬೋರಯ್ಯ  ಚುನಾವಣಾಧಿಕಾರಿಯಾಗಿದ್ದಾರೆ ಎಂದು ಡಾ.ಎಚ್‌. ನಾಗರಾಜು ತಿಳಿಸಿದರು.

ನಾಮಪತ್ರ ಸಲ್ಲಿಕೆ ಎಲ್ಲಿ?: ತಾಲ್ಲೂಕಿನ 4 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಉಮೇದುವಾರಿಕೆ ಸಲ್ಲಿಸುವವರು ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಫೆ.1ರಿಂದ 8ರ ವರೆಗೆ, ಬೆಳಿಗ್ಗೆ 11ರಿಂದ ಮಧ್ಯಾಹ್ನ 3 ಗಂಟೆ ಒಳಗೆ ನಾಮಪತ್ರ ಸಲ್ಲಿಸಬೇಕು. ತಾಲ್ಲೂಕಿನ ಬೆಳಗೊಳ, ಕಸಬಾ ಹೋಬಳಿಯ ತಾಲ್ಲೂಕು ಪಂಚಾಯಿತಿ ಮತ ಕ್ಷೇತ್ರಗಳು ಮತ್ತು ತಡಗವಾಡಿ ತಾ.ಪಂ. ಕ್ಷೇತ್ರಕ್ಕೆ ತಾಲ್ಲೂಕು ಕಚೇರಿಯ ಕೋರ್ಟ್‌ ಹಾಲ್‌ನಲ್ಲಿ;

ಅರಕೆರೆ ಮತ್ತು ಕೆ.ಶೆಟ್ಟಹಳ್ಳಿ ಹೋಬಳಿಯ ತಾ.ಪಂ. ಮತ ಕ್ಷೇತ್ರಗಳಿಗೆ ಉಮೇದುವಾರಿಕೆ ಸಲ್ಲಿಸುವವರು ತಾಲ್ಲೂಕು ಕಚೇರಿಯ ತಹಶೀಲ್ದಾರ್‌ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬೇಕು ಎಂದು ತಹಶೀಲ್ದಾರ್‌ ಎಂ. ದಯಾನಂದ ತಿಳಿಸಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಟಿ. ಬೋರಯ್ಯ, ಸಿಪಿಐ ಎಂ.ಕೆ. ದೀಪಕ್‌, ಸಿಡಿಪಿಒ ರಾಜನ್‌, ಲೋಕೋಪಯೋಗಿ ಇಲಾಖೆ ಎಇಇ ಚಂದ್ರಪ್ಪ ಸಭೆಯಲ್ಲಿ ಭಾಗವಹಿಸಿದ್ದರು.

***
ನೀತಿ ಸಂಹಿತೆ ಜಾರಿಯಲ್ಲಿ ಇರುವ ಅವಧಿಯಲ್ಲಿ ದೇವಾಲಯ ಇತರೆಡೆ ಖಾಸಗಿಯಾಗಿ ಭೋಜನ ಕೂಟ ಏರ್ಪಡಿಸುವವರೂ ಚುನಾವಣಾಧಿಕಾರಿಯಿಂದ ಅನುಮತಿ ಪಡೆಯಬೇಕು.
-ರಮಣರೆಡ್ಡಿ
, ಚುನಾವಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.