ADVERTISEMENT

ಚುನಾವಣೆ ನೀತಿಸಂಹಿತೆ ಪಾಲಿಸಿ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 5:35 IST
Last Updated 2 ಏಪ್ರಿಲ್ 2013, 5:35 IST

ಕೃಷ್ಣರಾಜಪೇಟೆ: ರಾಜ್ಯ ವಿಧಾನಸಭೆಗೆ ಮುಂದಿನ ತಿಂಗಳು ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಅದನ್ನು ಕಡ್ಡಾಯವಾಗಿ ಅನುಸರಿಸಬೇಕೆಂದು ಜಿಲ್ಲಾಧಿಕಾರಿ ಡಾ.ಅಜಯ್ ನಾಗಭೂಷಣ್ ಅಧಿಕಾರಿಗಳಿಗೆ ಸೂಚಿಸಿದರು.

ಮಂಡ್ಯ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ತಾಲ್ಲೂಕಿಗೆ ಮೊದಲ ಬಾರಿಗೆ ಸೋಮವಾರ ಆಗಮಿಸಿದ್ದ ಅವರು ಪಟ್ಟಣದ ಮಿನಿವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ಜಿಲ್ಲೆಯಲ್ಲಿ ಮಾದರಿಯಾಗಿ ಚುನಾವಣೆಯನ್ನು ನಿರ್ವಹಿಸಲು ಹಲವು ಕ್ರಮಗಳನ್ನು ರೂಪಿಸಲಾಗಿದೆ. ಯಾವುದೇ ಬಗೆಯ ಚುನಾವಣಾ ಅಕ್ರಮಗಳು ನಡೆಯದಂತೆ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು. ನೀತಿ ಸಂಹಿತೆಗೆ ಭಂಗವಾಗದ ರೀತಿಯಲ್ಲಿ ರಾಜಕಾರಣಿಗಳು ನಡೆದುಕೊಳ್ಳುವಂತೆ ಗಮನ ಹರಿಸಬೇಕು. ಸಾರ್ವಜನಿಕರು ಸಹ ಚುನಾವಣಾ ಅಕ್ರಮಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಈ ಕುರಿತು ದೂರುಗಳಿದ್ದರೆ ನೇರವಾಗಿ ತಮಗೆ ಅಥವಾ 1950 ಸಂಖ್ಯೆಗೆ ಉಚಿತವಾಗಿ ಕರೆಮಾಡಿ ದೂರು ನೀಡಬಹುದು ಎಂದು ಅವರು ತಿಳಿಸಿದರು.

ತಹಶೀಲ್ದಾರ್ ಅಹೋಬಲಯ್ಯ, ಚುನಾವಣಾ ವೀಕ್ಷಕ ವೃಷಭರಾಜೇಂದ್ರ ಮೂರ್ತಿ, ಸರ್ಕಾಲ್ ಇನ್‌ಸ್ಪೆಕ್ಟರ್ ಸಂದೇಶ್‌ಕುಮಾರ್, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ನಾಗರಾಜು ಪಾಲ್ಗೊಂಡಿದ್ದರು. 

ಕಚೇರಿಗಳಿಗೆ ಬೀಗ: ನೀತಿಸಂಹಿತೆ ಜಾರಿಯಲ್ಲಿದ್ದರೂ ಅದನ್ನು ಮೀರಿ ಅಧಿಕೃತ ಸರ್ಕಾರಿ ಕಚೇರಿಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸ್ಥಾಯಿಸಮಿತಿ ಅಧ್ಯಕ್ಷರ ಕೊಠಡಿಗಳಿಗೆ ಜಿಲ್ಲಾಧಿಕಾರಿಗಳು ಬೀಗ ಹಾಕಿಸಿದ ಘಟನೆಯೂ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.