ADVERTISEMENT

ಜನರನ್ನು ನೆಮ್ಮದಿಯಾಗಿಡುವುದೇ ನಿಜವಾದ ರಾಜಕಾರಣ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 10:15 IST
Last Updated 15 ಅಕ್ಟೋಬರ್ 2011, 10:15 IST

ನಾಗಮಂಗಲ: ನಿಜವಾದ ರಾಜಕಾರಣ ವೆಂದರೆ ನಮ್ಮನ್ನು ಆಯ್ಕೆ ಮಾಡಿದ ಜನರನ್ನು ನೆಮ್ಮದಿಯಾಗಿಡುವುದು ಎಂದು ತಾಲ್ಲೂಕಿನ ಶಾಸಕ ಕೆ.ಸುರೇಶ್‌ಗೌಡ ಅಭಿಪ್ರಾಯಪಟ್ಟರು.

ಅವರು ಶುಕ್ರವಾರ ಪಟ್ಟಣದ ಎಸ್.ಎಲ್.ಎನ್ ಸಮುದಾಯಭವನದಲ್ಲಿ ವಿವಿಧ ಬ್ಲಾಕ್ ಕಾಂಗ್ರೆಸ್ ಸಮಿತಿಗಳು ಆಯೋಜಿಸಿದ್ದ ನಾಗಮಂಗಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.

ಕಳೆದ ಮೂರೂವರೆ ವರ್ಷಗಳಲ್ಲಿ ತಾಲ್ಲೂಕು ಅತ್ಯಂತ ನೆಮ್ಮದಿಯಿಂದ ಕೂಡಿತ್ತು. ವಿರೋಧ ಪಕ್ಷದಲ್ಲಿದ್ದರು ತಾಲ್ಲೂಕಿನಾದ್ಯಂತ 120 ಬೋರ್‌ವೆಲ್ ಕೊರೆಸಿ ಕುಡಿಯುವ ನೀರಿಗೆ ತಾತ್ಕಾಲಿಕ ಪರಿಹಾರ ನೀಡಿದ್ದೇನೆ.

ಮಾರ್ಕೋನಹಳ್ಳಿಯಿಂದ 200 ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯುವ ನೀರಿನ ಶಾಶ್ವತ ಪರಿಹಾರದ ಯೋಜನೆ ಪ್ರಾರಂಭದ ಹಂತದಲ್ಲಿದೆ. ನಿರಂತರ ಜ್ಯೋತಿ ಯೋಜನೆ ತಾಲ್ಲೂಕಿಗೆ ತರಲಾಗಿದೆ. ವಿರೋಧ ಪಕ್ಷದ ಯಾವುದೇ ಕಾರ್ಯಕರ್ತನ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡಿಸಿಲ್ಲ. ಆದರೆ ಇತ್ತೀಚೆಗೆ ನನ್ನ ಮೇಲೆ ಕಲ್ಲು ಹೊಡೆಸಲಾಯಿತು. ಆದರೆ ನನ್ನ ಪಕ್ಷದ ಬಡಪಾಯಿ ಕಾರ್ಯಕರ್ತರನ್ನು ತಪ್ಪಿಗೆ ಗುರಿ ಮಾಡಲಾಗಿದೆ. 15 ವರ್ಷಗಳ ಹಿಂದಿನ ರಾಜಕಾರಣ ತಾಲ್ಲೂಕಿನಲ್ಲಿ ಮರುಕಳಿಸಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮಾತನಾಡಿ, ತಾಲ್ಲೂಕು ಕಂಡ ರಾಜಕೀಯ ನಾಯಕರಲ್ಲಿ ಸುರೇಶ್‌ಗೌಡ ಒಬ್ಬ ಸಜ್ಜನಿಕೆಯ ರಾಜಕಾರಣಿ. ಶಾಂತಿಯಿಂದ ಜನರನ್ನು ಒಲಿಸಿಕೊಳ್ಳುವ ಮನೋಭಾವ ಉಳ್ಳವರು. ತಾಲ್ಲೂಕಿಗೆ ಏನಾದರು ಅಭಿವೃದ್ಧಿ ಕಾರ್ಯ ಮಾಡುವ ಮನಸ್ಥಿತಿ ಉಳ್ಳವರು. ಇಂತಹ ನಾಯಕನ ಮೇಲೆ ಹಲ್ಲೆ ನಡೆಸಿರುವುದು ಖಂಡನಾರ್ಹ. ಸೇಡಿನ ರಾಜಕಾರಣ ಮಾಡುವವರು ಎಂದೂ ಉಳಿದಿಲ್ಲ ಎಂಬುದಕ್ಕೆ ರಾಜಕಾರಣದಲ್ಲಿ ಅನೇಕ ನಿದರ್ಶನಗಳಿವೆ. ಇನ್ನಾದರು ವಿರೋಧಿಗಳು ತಮ್ಮ ತಪ್ಪು ಅರಿತು ಬದಲಾಗಲಿ ಎಂದು ಅಭಿಪ್ರಾಯಿಸಿದರು.

ಕೆ.ಆರ್.ಪೇಟೆ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿದರು. ಇದೇ ವೇಳೆ ತಾಲ್ಲೂಕಿನ ದೇವರಮಾವಿನಕೆರೆ ಗ್ರಾಮದ ಬಿ.ಜೆ.ಪಿ ಮುಖಂಡರಾದ ಮಹೇಶ ತಮ್ಮ ಹಲವಾರು ಸ್ನೇಹಿತರೊಂದಿಗೆ ಹಾಗು ಕರಿಕ್ಯಾತನಹಳ್ಳಿಯ ಜೆ.ಡಿ.ಎಸ್ ಯುವ ಮುಖಂಡರಾದ ಮೋಹನ್‌ಕುಮಾರ್, ಸುನಿಲ್‌ಕುಮಾರ್, ಕೆ.ಸುರೇಶ್ ಮತ್ತು ತಿರುಗನಹಳ್ಳಿಯ ಜೆ.ಡಿ.ಎಸ್ ಮುಖಂಡ ಶಿವರಾಮು ತಮ್ಮ ಹಲವು ಸ್ನೇಹಿತರೊಂದಿಗೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.

ಕಾರ್ಯಕ್ರಮಕ್ಕೆ ಮುನ್ನ ಸಿದ್ದರಾಮಯ್ಯ ಹಾಗೂ ಸುರೇಶ್‌ಗೌಡರನ್ನು ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ನಾಗಮಂಗಲ ಗಡಿ ಭಾಗವಾದ ಗೊಂದೀಹಳ್ಳಿಯಿಂದ ಬೈಕ್ ರ‌್ಯಾಲಿಯ ಮೂಲಕ ಕರೆತಂದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಸ್.ಆತ್ಮಾನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಎಚ್.ಟಿ.ಕೃಷ್ಣಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ಹುಚ್ಚೇಗೌಡ, ಚಂದ್ರೇಗೌಡ, ಡಿ.ಶಿವಲಿಂಗಯ್ಯ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ ಹಾಗು ತಾಲ್ಲೂಕು ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಮುಖಂಡರಾದ ಬಿ.ಸಿ.ಮೋಹನ್‌ಕುಮಾರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.