ADVERTISEMENT

`ಜಾತಿ ಸಂಕೋಲೆಯಿಂದ ಮುಕ್ತರಾಗಿ'

​ಪ್ರಜಾವಾಣಿ ವಾರ್ತೆ
Published 7 ಜೂನ್ 2013, 6:13 IST
Last Updated 7 ಜೂನ್ 2013, 6:13 IST

ಮಂಡ್ಯ: ಪ್ರತಿಯೊಬ್ಬರ ಮನುಷ್ಯನ ವೈಚಾರಿಕ ಮತ್ತು ತಾತ್ವಿಕ ಪರಿಧಿಯನ್ನು ವಿಸ್ತರಿಸುವಲ್ಲಿ ಸಾಹಿತಿ ದೇವನೂರ ಮಹಾದೇವ ಅವರ `ಎದೆಗೆ ಬಿದ್ದ ಅಕ್ಷರ' ಕೃತಿ ಸಫಲತೆ ಕಂಡಿದೆ ಎಂದು ಗುಲ್ಬರ್ಗ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಅಪ್ಪಗೆರೆ ಸೋಮಶೇಖರ್ ಹೇಳಿದರು.

ಕರ್ನಾಟಕ ಜನಶಕ್ತಿ, ನಾವು ಕಲ್ಚರಲ್ ಕಮ್ಯುನಿಟಿ, ರಂಗಪಯಣ ಸಂಘಟನೆಗಳು ಜೊತೆಗೂಡಿ ಗುರುವಾರ ನಗರದ `ಪುಸ್ತಕ ಮನೆ'ಯಲ್ಲಿ ಏರ್ಪಡಿಸಿದ್ದ ದೇವನೂರ ಮಹಾದೇವ ಅವರ `ಎದೆಗೆ ಬಿದ್ದ ಅಕ್ಷರ' ಕೃತಿ ಕುರಿತ ಸಂವಾದದಲ್ಲಿ ಕೃತಿ ಕುರಿತು  ಮಾತನಾಡಿದರು.
ಗಾಂಧೀಜಿ, ಅಂಬೇಡ್ಕರ್ ಅವರ ಚಿಂತನೆಗಳನ್ನು ಬೆಸೆಯುವ ಮೂಲಕ ಇವತ್ತಿನ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ದೇವನೂರ ಅವರು ಮಾಡಿದ್ದಾರೆ ಎಂದರು.

ದಲಿತರೂ ಸೇರಿದಂತೆ ಪ್ರತಿಯೊಬ್ಬರೂ `ಜಾತಿ'ಯ ಸಂಕೋಲೆಯಿಂದ ಹೊರಬಂದು, ಮನುಷ್ಯನನ್ನು ಮನುಷ್ಯನ ಹಾಗೇ ಕಾಣುವಂತಾಗಬೇಕು. ಆಗ ಮಾತ್ರವೇ ಸಮಾಜದ ಅಂತಃಸಾಕ್ಷಿಯನ್ನು ಕಿತ್ತು ತಿನ್ನುತ್ತಿರುವ `ಜಾತಿ' ಎಂಬ ಭೂತದಿಂದ ಬಿಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕೃಷ್ಣರಾಜಪೇಟೆ ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಉಮಾಶಂಕರ್ ಮಾತನಾಡಿ, `ಪ್ರತಿ ವ್ಯಕ್ತಿ ಬುದ್ಧಿಯಿಂದ ಯೋಚಿಸುವ ಬದಲು ಮನಸ್ಸಿನಿಂದ ಆಲೋಚಿಸಿದ್ದೇ ಆದರೆ, ಬಂಡೆಯ ಮೇಲೂ ಚಿಗುರನ್ನು ಕಾಣಬಹುದು' ಎಂಬ ಭರವಸೆ ವ್ಯಕ್ತಪಡಿಸಿದರು.
ದೇವನೂರ ಅವರು, ಇಡೀ ಕೃತಿಯಲ್ಲಿ ಮನುಷ್ಯ-ಮನುಷ್ಯರ ಸಂಬಂಧಗಳ ಹುಡುಕಾಟ ನಡೆಸುವುದರ ಜೊತೆಗೆ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಚಿತ್ರಿಸಿದ್ದಾರೆ. ಓದುಗನಿಗೂ ಕೂಡ ಇದೇ ಅನುಭವ ಆಗುವುದರಿಂದ ಕೃತಿಯಲ್ಲಿನ ಪಾತ್ರಗಳು ಮತ್ತೆ ಮತ್ತೆ ಕಾಡುವುದರ ಜೊತೆಗೆ ಹೆಚ್ಚು ಆಪ್ತವೆನಿಸುತ್ತದೆ ಎಂದರು.

ನಂತರ ನಡೆದ ಸಂವಾದದಲ್ಲಿ, ತಮ್ಮ ಸಾಹಿತ್ಯದ ಮೂಲಕ ಮನಶುದ್ಧಿ, ಸಮಾಜದ ಶುದ್ಧಿ ಬಗೆಗೆ ಹೇಳುವ ಸಾಹಿತಿ ದೇವನೂರ ಮಹಾದೇವ ಅವರು ಚುನಾವಣೆ ವೇಳೆ ಭ್ರಷ್ಟ ಮುಖ್ಯಮಂತ್ರಿ ಜೊತೆಗೆ ವೇದಿಕೆ ಹಂಚಿಕೊಂಡಿದ್ದಲ್ಲದೇ, ಪಾದಯಾತ್ರೆಯಲ್ಲೂ ಹೆಜ್ಜೆ ಹಾಕಿದ್ದು ಏಕೆ? ಎಲ್ಲರಂತೆ `ಯುಗ ಧರ್ಮ'ಕ್ಕೆ ದೇವನೂರ ಅವರು ಸಿಕ್ಕರೇ? ಎನ್ನುವ ಪ್ರಶ್ನೆ ತೂರಿಬಂತು. ಕರ್ನಾಟಕ ಜನಶಕ್ತಿಯ ಮುತ್ತುರಾಜು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.