ADVERTISEMENT

ಜಿಲ್ಲೆಯಾದ್ಯಂತ ಬಂದ್ ಸಂಪೂರ್ಣ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 8:00 IST
Last Updated 7 ಅಕ್ಟೋಬರ್ 2012, 8:00 IST

ಶ್ರೀರಂಗಪಟ್ಟಣ: ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಶನಿವಾರ ಪಟ್ಟಣ ಹಾಗೂ ಗಂಜಾಂ ವಿವಿಧ ಸಂಘಟನೆಗಳ ಕಾರ್ಯಕರ್ತರು ಬಂದ್ ಆಚರಿಸಿ ಬೃಹತ್ ಪ್ರತಿಭಟನೆ ನಡೆಸಿದರು.ಮಿನಿ ವಿಧಾನಸೌಧದಿಂದ ಕುವೆಂಪು ವೃತ್ತದ ವರೆಗೆ ಕುದುರೆ, ಎತ್ತಿನ ಗಾಡಿ ಸಹಿತ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬೆಂಗಳೂರು- ಮೈಸೂರು ಹೆದ್ದಾರಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿದರು.

ಪ್ರಧಾನಮಂತ್ರಿ ಮನಮೋಹನಸಿಂಗ್, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಪ್ರತಿಕೃತಿ ದಹಿಸಿ ಅಕ್ರೋಶ ವ್ಯಕ್ತಪಡಿಸಿದರು. ಶಾಸಕ ರಮೇಶ ಬಂಡಿಸಿದ್ದೇಗೌಡ, ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಸ್.ನಂಜುಂಡೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್.ಲಿಂಗರಾಜು, ಕೆಪಿಸಿಸಿ ಸದಸ್ಯ ಎಂ.ಭಾಸ್ಕರ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆ.ಬಲರಾಂ, ಪುರಸಭೆ ಅಧ್ಯಕ್ಷೆ ಭಾಗ್ಯಮ್ಮ ಕೃಷ್ಣಪ್ಪ ನೇತೃತ್ವದಲ್ಲಿ ಪ್ರತಿಭಟನಾಕಾರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು.

  ಪಟ್ಟಣ ರಾಜ ಒಡೆಯರ್ ಬೀದಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸರ್ಕಲ್, ಗಂಜಾಂಗಳಲ್ಲಿ ಅಂಗಡಿ ಮುಂಗಟ್ಟುಗಳು ಹಾಗೂ ಸರ್ಕಾರಿ ಕಚೇರಿಗಳು ಸಂಪೂರ್ಣ ಮುಚ್ಚಿದ್ದವು. ಬ್ಯಾಂಕ್‌ಗಳಲ್ಲಿ ಕೂಡ ಯಾವುದೇ ವ್ಯವಹಾರ ನಡೆಯಲಿಲ್ಲ. ಜನ ಜಂಗುಳಿಯಿಂದ ಕೂಡಿರುತ್ತಿದ್ದ ಶನಿವಾರದ ಸಂತೆ ಬಿಕೋ ಎನ್ನುತ್ತಿತ್ತು. ಮುಸ್ಲಿಂ ಯುವ ವೇದಿಕೆ, ಶ್ರೀರಂಗ ಆಟೋ ಚಾಲಕರ ಸಂಘ, ನಿಮಿಷಾಂಬ ಆಟೋ ಸಂಘ, ನಾಯಕರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

  ಡಾ.ರಾಜಕುಮಾರ್ ಅಭಿಮಾನಿಗಳು: ಡಾ.ರಾಜಕುಮಾರ್ ಅಭಿಮಾನಿಗಳು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಡಾ.ರಾಜಕುಮಾರ್ ಕಟೌಟ್‌ನ್ನು ಆಟೋದಲ್ಲಿ ಕೂರಿಸಿ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಿದರು. ದಾರಿಯುದ್ದಕ್ಕೂ ಕೇಂದ್ರ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸ್ಟುಡಿಯೋ ಭೀಮ, ಕುಬೇರ್‌ಸಿಂಗ್, ಜಬ್ಬಾರ್ ಸಾಬ್, ಇಬ್ರಾಹಿಂ, ದೀಪು, ಗುರುನಾಥ್, ಅಜಯಕುಮಾರ್, ಶಹೀನಾ ಬೇಗಂ, ರಘು ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

  ಬಾಬುರಾಯನಕೊಪ್ಪಲು: ತಾಲ್ಲೂಕಿನ ಬಾಬುರಾಯನಕೊಪ್ಪಲು ಗ್ರಾಮಸ್ಥರು ಶನಿವಾರ ಹೆದ್ದಾರಿ ತಡೆ ನಡೆಸಿದರು. ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಯಲ್ಲೇ ಅಡುಗೆ ಮಾಡಿ ಊಟ ಮಾಡಿದರು. ಮರೀಗೌಡ, ಸಂದೇಶ್, ಎಸ್.ದೇವರಾಜು, ರಾಮಲಿಂಗೇಗೌಡ, ಬಿ.ಎಸ್.ರಮೇಶ್, ಜವರೇಗೌಡ, ಬಿ.ಎಂ.ಸುಬ್ರಹ್ಮಣ್ಯ, ಶ್ರೀನಿವಾಸು, ನಾರಾಯಣ, ಸುನಿಲ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಗ್ರಾಮದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ಆಚರಿಸಿದರು.

ಬಂದ್‌ಗೆ ಉತ್ತಮ ಪ್ರತಿಕ್ರಿಯೆ
ಪಾಂಡವಪುರ: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಿರುವುದನ್ನು ವಿರೋಧಿಸಿ ವಿವಿಧ ಸಂಘಟನೆ, ರೈತರು ಶನಿವಾರ ಕರೆ ನೀಡಿದ್ದ ಬಂದ್‌ಸಂಪೂರ್ಣ ಬಂದ್ ಯಶಸ್ವಿಯಾಗಿದೆ.

  ಪಟ್ಟಣದಲ್ಲಿ ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ವಾಹನ, ಜನ ಸಂಚಾರವಿಲ್ಲದೇ ಪಟ್ಟಣ ಬಿಕೋ ಎನ್ನುತ್ತಿತ್ತು. ಪ್ರತಿಭಟನಾಕಾರರು ರಸ್ತೆಗಳಲ್ಲಿ ಟೈರುಗಳಿಗೆ ಬೆಂಕಿ ಹಚ್ಚಿದರು. ಜಯಲಲಿತಾ ವಿರುದ್ದ ಘೋಷಣೆ ಕೂಗಿದರು. ಪೆಟ್ರೋಲ್ ಬಂಕುಗಳು, ಸರ್ಕಾರಿ ಕಚೇರಿಗಳು, ಬ್ಯಾಂಕುಗಳು, ಶಾಲಾ ಕಾಲೇಜುಗಳು ಮುಚ್ಚಿದ್ದವು. ತಮಿಳು ಕಾಲೋನಿಯ ಜನತೆ ಖಾಲಿ ಕೊಡ ಹೊತ್ತು ಪ್ರತಿಭಟನೆ ನಡೆಸಿದರು.

ತಹಶೀಲ್ದಾರ್‌ಗೆ ಘೇರಾವ್: ಪ್ರತಿಭಟನಾಕಾರರು ತಾಲ್ಲೂಕು ಕಚೇರಿಗೆ ತೆರಳಿ ಕಾರ್ಯಾಲಯವನ್ನು ಬಂದ್ ಮಾಡುವಂತೆ ತಹಶೀಲ್ದಾರ್ ಬಿ.ಸಿ.ಶಿವಾನಂದಮೂರ್ತಿ ಅವರಿಗೆ ತಾಕೀತು ಮಾಡಿದರು. ಆಗ ವಾಗ್ವಾದ ನಡೆಯಿತು. ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಕೆ.ಗೌಡೇಗೌಡ, ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್, ರೈತ ಸಂಘದ ಮುಖಂಡ ಅಮೃತಿ ರಾಜಶೇಖರ್, ಕಾಂಗ್ರೆಸ್ ಮುಖಂಡ ಹಾರೋಹಳ್ಳಿ ರಮೇಶ್ ಮಧ್ಯೆ ಪ್ರವೇಶಿಸಿ ಕಚೇರಿಯನ್ನ ಬಂದ್ ಮಾಡಿಸಿದರು.

ತಾಲ್ಲೂಕಿನ ಮೇಲುಕೋಟೆ, ಜಕ್ಕನಹಳ್ಳಿ, ಬೆಳ್ಳಾಳೆ, ಚಿನಕುರಳಿ, ಕೆ.ಬೆಟ್ಟಹಳ್ಳಿ, ಎಲೆಕೆರೆಹ್ಯಾಂಡ್‌ಪೋಸ್ಟ್, ಹರವು, ಅರಳಕುಪ್ಪೆ, ಕ್ಯಾತನಹಳ್ಳಿ, ರೈಲ್ವೆನಿಲ್ದಾಣ, ಹರಳಹಳ್ಳಿ, ಚಿಕ್ಕಾಡೆ, ಚಿಕ್ಕಬ್ಯಾಡರಹಳ್ಳಿ ವೃತ್ತಗಳಲ್ಲಿ ಪ್ರತಿಭಟನೆಗಳು ನಡೆದವು.

ಕಾವೇರಿ ಹಿತರಕ್ಷಣಾ ಸಮಿತಿ ವತಿಯಿಂದ ಅಧ್ಯಕ್ಷ ಸಿ.ಅಣ್ಣೇಗೌಡ ಅವರ ನೇತೃತ್ವದಲ್ಲಿ ಪಟ್ಟಣದ ಐದು ದೀಪ ವೃತ್ತದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಧರಣಿ ಸತ್ಯಾಗ್ರಹ ನಡೆಯಿತು. ಜಿಲ್ಲಾ ಪಂಚಾಯಿತಿ ಸದಸ್ಯ ಎ.ಎಲ್.ಕೆಂಪೂಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ.ರಾಮಕೃಷ್ಣ, ಹಾರೋಹಳ್ಳಿ ರಮೇಶ್, ರೈತ ಸಂಘದ ಮುಖಂಡರಾದ ಕೆನ್ನಾಳುನಾಗರಾಜು, ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್, ಮನ್‌ಮುಲ್ ಮಾಜಿ ಅಧ್ಯಕ್ಷ ಕೆ.ವೈರಮುಡಿಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಾಳೀಗೆಗೌಡ, ಸದಸ್ಯ ಕೆ.ಕೆ.ಗೌಡೇಗೌಡ ಇದ್ದರು.

ಭಾರತೀನಗರ: ಬಂದ್ ಯಶಸ್ವಿ
ಭಾರತೀನಗರ: `
ಕರ್ನಾಟಕ ಬಂದ್~ಗೆ ಭಾರತೀನಗರದಲ್ಲಿ ಉತ್ತಮ ಪತ್ರಿಕ್ರಿಯೆ ವ್ಯಕ್ತವಾಯಿತು.
ಜೆಡಿಎಸ್, ರಾಜ್ಯ ರೈತಸಂಘ, ವರ್ತಕರ ಸಂಘ, ಕಬ್ಬು ಬೆಳೆಗಾರರ ಒಕ್ಕೂಟ, ಕರ್ನಾಟಕ ರಕ್ಷಣಾ ವೇದಿಕೆ, ಟೈಲರ್ಸ್‌ ಅಸೋಸಿಯೇಶನ್, ವಿಶ್ವೇಶ್ವರಯ್ಯ ಗೂಡ್ಸ್ ಆಟೋಚಾಲಕರ ಸಂಘ, ಸ್ಫೂರ್ತಿ ಪತ್ತಿನ ಸಹಕಾರ ಬ್ಯಾಂಕ್ ಸೇರಿದಂತೆ ವಿವಿಧ ಸಂಘಟನೆಗಳು ಪಟ್ಟಣದ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಹಲಗೂರು ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ರಸ್ತೆಯಲ್ಲೇ ಕುಳಿತು ಧರಣಿ ನಡೆಸಿದರು. ಅಂಗಡಿ ಮುಂಗಟ್ಟುಗಳು, ಶಾಲಾ ಕಾಲೇಜುಗಳು, ಚಿತ್ರ ಮಂದಿರಗಳು ಮುಚ್ಚಿದ್ದವು.

ಜೆಡಿಎಸ್ ತಾಲ್ಲೂಕು ಕಾರ್ಯಾಧ್ಯಕ್ಷ ಹೊನ್ನಲಗೆರೆ ವೆಂಕಟೇಶ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಅಣ್ಣೂರು ನವೀನ್, ಮುಖಂಡರಾದ ಎ.ಟಿ.ಬಲ್ಲೇಗೌಡ, ಎಂ.ಕೆ.ರಾಜಣ್ಣ, ಮರಿಮಾದೇಗೌಡ, ತಿಪ್ಪೂರುಕೃಷ್ಣ, ಸುರೇಶ್, ಬಲ್ಲೇಗೌಡ, ಮಣಿಗೆರೆ ಪ್ರಕಾಶ್, ಕರವೇ ಹೋಬಳಿ ಘಟಕದ ಅಧ್ಯಕ್ಷ ಮಣಿಗೆರೆರಾಮಚಂದ್ರೇಗೌಡ,

ಬಿದರಹೊಸಹಳ್ಳಿ ಪುಟ್ಟರಾಜು, ಮಧು, ಬೋರೇಗೌಡ, ರೈತ ಸಂಘದ ಶಂಕರೇಗೌಡ, ಮಹೇಂದ್ರ, ರಾಮಲಿಂಗೇಗೌಡ, ರವಿಕುಮಾರ್, ವರ್ತಕರ ಸಂಘದ ರಾಮೇಗೌಡ, ಶಿವಣ್ಣ, ಹಾಗಲಹಳ್ಳಿ ಬಸವರಾಜು, ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೆ.ಎಲ್.ಶಿವರಾಮು, ಶೆಟ್ಟಹಳ್ಳಿ ಶಿವರಾಜು, ಮುಖಂಡರಾದ ಎಸ್.ಕೃಷ್ಣಪ್ಪ, ಶೆಟ್ಟಹಳ್ಳಿಬೋರೇಗೌಡ, ಸಿದ್ದರಾಮು, ಬಸವರಾಜು, ಡಿ.ಸಿ.ಪ್ರಸನ್ನಕುಮಾರ್, ಪ್ರಕಾಶ್, ನಾಗರಾಜು, ಟೈಲರ್ಸ್‌ ಸಂಘದ ಅಧ್ಯಕ್ಷ ಸಿದ್ದರಾಜು ಇದ್ದರು.

ಬಂದ್‌ಗೆ ಕೆ.ಆರ್.ಪೇಟೆ ಬೆಂಬಲ
ಕೃಷ್ಣರಾಜಪೇಟೆ:
ಕರ್ನಾಟಕ ಬಂದ್‌ಗೆ ಶನಿವಾರ ತಾಲ್ಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ತಾಲ್ಲೂಕು ಕೇಂದ್ರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ಅಂಗಡಿಗಳು ಮುಚ್ಚಿದ್ದವು, ವಾಹನ ಸಂಚಾರ ಇರಲಿಲ್ಲ. ಪಟ್ಟಣದಲ್ಲಿ ಶನಿವಾರದ ಸಂತೆಯನ್ನು ರದ್ದುಗೊಳಿಸಲಾಗಿತ್ತು. ಶಾಲಾಕಾಲೇಜು, ಚಿತ್ರಮಂದಿರ, ಪೆಟ್ರೋಲ್‌ಬಂಕ್, ಹೋಟೆಲ್, ಬ್ಯಾಂಕ್, ಔಷಧಿ ಅಂಗಡಿ, ಸರ್ಕಾರಿ ಕಚೇರಿಗಳು ಬಂದ್ ಆಗಿದ್ದವು. 

ಸ್ವಾಮೀಜಿ ಸಾರಥ್ಯ : ಬಾಳೆಹೊನ್ನೂರಿನ ರಂಭಾಪುರಿ ಪೀಠದ ತಾಲ್ಲೂಕಿನ ತೆಂಡೆಕೆರೆ ಖಾಸಾ ಶಾಖಾಮಠದ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಪಟ್ಟಣದ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

ಕನ್ನಡಪರ ಸಂಘಟನೆಗಳ ಪಾದಯಾತ್ರೆ: ತಾಲ್ಲೂಕಿನ ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ತಾಲ್ಲೂಕಿನ ಹರಿಹರಪುರದಿಂದ ತಾಲ್ಲೂಕು ಕೇಂದ್ರಕ್ಕೆ ಪಾದಯಾತ್ರೆ ನಡೆಯಿತು. ಹರಿಹರಪುರದ ಭುವನೇಶ್ವರಿ ದೇವಾಯದ ಬಳಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಜಿಲ್ಲಾ ಕನ್ನಡ ಸೇನೆ ಅಧ್ಯಕ್ಷ ಹ.ತಿ.ಶ್ರೀನಿವಾಸ್, ಕರವೇ (ಶಿವರಾಮೇಗೌಡ ಬಣ) ತಾಲ್ಲೂಕು ಅಧ್ಯಕ್ಷ ಜಗದೀಶ್ ಇದ್ದರು.

ವಿವಿಧ ಸಂಘಟನೆಗಳ ಬೆಂಬಲ : ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಆರ್.ಕೆ.ಕುಮಾರ್ ನೇತೃತ್ವದಲ್ಲಿ ತಾಲ್ಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ಅರೆ ಬೆತ್ತಲೆ ಮೆರವಣಿಗೆ ನಡೆಸಿದರು. ರಾಜ್ಯ ರೈತಸಂಘ, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ), ಜಯಕರ್ನಾಟಕ ಸಂಘಟನೆ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ತಾಲ್ಲೂಕು ಔಷಧಿ ಮಾರಾಟಗಾರರ ಸಂಘ, ಟೈಲರ್ಸ್‌ ಅಸೋಸಿಯೇಷನ್, ಸ್ಕೂಟರ್ ಮೆಕಾನಿಕ್‌ಗಳ ಸಂಘ, ರಾಜಸ್ಥಾನ್

ಸಮಾಜ, ಫೋಟೋಗ್ರಾಫರ್ಸ್ ಅಸೋಸಿಯೇಷನ್, ತಾಲ್ಲೂಕು ವಕೀಲರ ಸಂಘ, ಆಟೋ ಚಾಲಕರ ಮತ್ತು ಮಾಲೀಕರ ಸಂಘ, ತಾಲ್ಲೂಕು ರಂಗಭೂಮಿ ಕಲಾವಿದರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಟ್ಟಣದಲ್ಲಿ ಪ್ರತ್ಯೇಕ ಮೆರವಣಿಗೆ ನಡೆಸಿ, ತಹಶೀಲ್ದಾರ್ ಡಾ.ಎಚ್.ಎಲ್.ನಾಗರಾಜ್ ಅವರಿಗೆ ಮನವಿಪತ್ರ ಸಲ್ಲಿಸಿದರು.

ಅಂಚೆ ಕಚೇರಿಗೆ ಮುತ್ತಿಗೆ
ಮದ್ದೂರು:
ಕರ್ನಾಟಕ ಬಂದ್ ತಾಲ್ಲೂಕಿನಾದ್ಯಂತ ಯಶಸ್ವಿಯಾಗಿದೆ. ಪಟ್ಟಣದ ಔಷಧಿ ಮಳಿಗೆಗಳು, ಅಂಗಡಿಗಳು, ಚಿತ್ರಮಂದಿಗಳು, ಸರ್ಕಾರಿ ಕಚೇರಿಗಳು ಬ್ಯಾಂಕುಗಳು ಮುಚ್ಚಿದ್ದವು. ಬಸ್ಸುಗಳು ರಸ್ತೆಗಿಳಿಯಲಿಲ್ಲ.

ಹೆದ್ದಾರಿ ತಡೆ: ಟಿಬಿ ವೃತ್ತದಲ್ಲಿ ಹೆದ್ದಾರಿ ಹೆದ್ದಾರಿ ತಡೆ ನಡೆಯಿತು. ಶಾಸಕಿ ಕಲ್ಪನ ಸಿದ್ದರಾಜು, ಮಾಜಿ ಶಾಸಕ ಡಿ.ಸಿ.ತಮ್ಮಣ್ಣ, ಇತರರು ಇದ್ದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಎಲ್. ತಮ್ಮಣ್ಣಗೌಡ, ಮಾಜಿ ಅಧ್ಯಕ್ಷ ಕೆ.ದಾಸೇಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಪಿ.ಯೋಗೇಶ್, ಮುಖಂಡರಾದ ನಗರಕೆರೆ ಸಂದೀಪ್, ಗಿರೀಶ್, ಮೃತ್ಯುಂಜಯ, ಕೆ.ಟಿ.ಸುರೇಶ್, ಎಂ.ಡಿ.ಮಹಾಲಿಂಗಯ್ಯ, ಹಳೇಹಳ್ಳಿ ರಾಮಕೃಷ್ಣ, ಎಂ.ಶಿವನಂಜಯ್ಯ, ಚಿಕ್ಕಮರಿಯಪ್ಪ ಭಾಗವಹಿಸಿದ್ದರು.

ಮುತ್ತಿಗೆ: ಪಟ್ಟಣದ ಅಂಚೆ ಮತ್ತು ದೂರವಾಣಿ ಕಚೇರಿಗೆ ವರ್ತಕರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಶಾಸಕಿ ಕಲ್ಪನ ಸಿದ್ದರಾಜು, ಜೆಡಿಎಸ್ ಅಧ್ಯಕ್ಷ ಅಜ್ಜಹಳ್ಳಿರಾಮಕೃಷ್ಣ, ಪುರಸಭಾ ಸದಸ್ಯೆ ಕಮರುನ್ನಿಸಾ, ಮುಖಂಡರಾದ  ಆದಿಲ್ ಆಲಿಖಾನ್, ಶ್ರೀಕಂಠು, ಯಶವಂತಗೌಡ, ಸುಕುರ್, ರಾಮಚಂದ್ರು, ಪುಟ್ಟಸ್ವಾಮಿ, ಶಿವಣ್ಣ, ಜಾವೀದ್‌ಖಾನ್,  ನಗರಕೆರೆ ಪ್ರಸನ್ನ ಇದ್ದರು.

ಬೃಹತ್ ಪ್ರತಿಭಟನೆ: ವರ್ತಕರು ಪಟ್ಟಣದ ಉಗ್ರನರಸಿಂಹಸ್ವಾಮಿ ದೇಗುಲದಿಂದ ಟಿ.ಬಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.


ವರ್ತಕರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿಶೆಟ್ಟಿ, ಜೈನರ ಸಂಘದ ಅಧ್ಯಕ್ಷ ಗೌತಮ್‌ಚಂದ್, ರಾಜಸ್ತಾನಿ ವರ್ತಕರ ಸಂಘದ ಅಧ್ಯಕ್ಷ ಭರತಕುಮಾರ್, ಮದ್ದೂರು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್‌ಕುಮಾರ್, ಎಚ್.ಬಿ.ಸ್ವಾಮಿ, ವೀರಭದ್ರಸ್ವಾಮಿ, ಮಧು, ಜಯಂತಿಲಾಲ್ ಪಟೇಲ್, ಮರಿಯಾಚಾರಿ, ಮದನ್, ವಸಂತ್, ಲಕ್ಷ್ಮಣ್, ಗುರುಸ್ವಾಮಿ, ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ  ಸುರೇಂದ್ರಬಾಬು, ಕಾರ್ಯದರ್ಶಿ ಯೋಗೇಶ್, ಕುಮಾರ್, ಅಶೋಕ್, ಶೇಖರ್, ಸುರೇಶ್‌ಕಾರಂತ, ಕೃಷ್ಣಪ್ಪ, ಅಶೋಕ್, ರಾಜು, ಪ್ರಯೋಗಾಲಯ ತಂತ್ರಜ್ಞರಾದ ಪಾರ್ಥ, ಧನಂಜಯ ಇತರರು ಇದ್ದರು.

ರೈಲು ತಡೆ: ಗೆಜ್ಜಲಗೆರೆ ಗ್ರಾಮಸ್ಥರು ರೈಲು ತಡೆದು ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ಗ್ರಾಮಸ್ಥರ ರೈಲು ತಡೆ ಸುದ್ದಿ ತಿಳಿದ ರೈಲ್ವೆ ಇಲಾಖೆ ಪ್ಯಾಸೆಂಜರ್ ರೈಲನ್ನು ಹನಕೆರೆ ಬಳಿ ನಿಲ್ಲಿಸಿ, ರೈಲು ಮತ್ತೇ ಮೈಸೂರಿಗೆ ವಾಪಾಸ್ಸಾಗುವ ವ್ಯವಸ್ಥೆ ಮಾಡಲಾಯಿತು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ವಿ.ಅಶೋಕ್, ಜಿಲ್ಲಾಧ್ಯಕ್ಷ ಕೆ.ನರಸರಾಜು, ತಾಲ್ಲೂಕು ಅಧ್ಯಕ್ಷ ವಿಶ್ವನಾಥ್, ರೈತ ನಾಯಕಿ ಸುನಂದ ಜಯರಾಂ, ಮುಖಂಡರಾದ ಕೆ.ನಾಗರಾಜು, ಜಿ.ಎ.ಶಂಕರ್, ರಾಮಲಿಂಗಯ್ಯ, ಚಂದ್ರು, ಸೋಮಶೇಖರ್, ರಾಮು, ಹರೀಶ್, ಕಿಟ್ಟಿ, ಜಯರಾಂ, ಶಿವರಾಮು, ಮರಿಸ್ವಾಮಿ, ದೊರೆಸ್ವಾಮಿ, ಸುರೇಶ್, ಆತ್ಮಾನಂದ ಸೇರಿದಂತೆ ಹಲವರು ಭಾಗವಹಿಸಿದ್ದರು.

ಚಡ್ಡಿ ಮೆರವಣಿಗೆ: ಸಮೀಪದ ಶಿವಪುರ ಧ್ವಜಸತ್ಯಾಗ್ರಹಸೌಧದಿಂದ ಶನಿವಾರ ತಮಿಳುನಾಡಿಗೆ ನೀರು ಬಿಡುಗಡೆ ಖಂಡಿಸಿ ಜಿ.ಮಾದೇಗೌಡ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಮಂಡ್ಯಕ್ಕೆ ಚಡ್ಡಿ ಮೆರವಣಿಗೆ ನಡೆಸಿದರು. ಮಾಜಿ ಶಾಸಕ ಮಧು ಜಿ.ಮಾದೇಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ರಾಜೀವ್, ಮುಖಂಡರಾದ ಬಸವರಾಜು, ಶಿವಲಿಂಗೇಗೌಡ ದೊಡ್ಡೇಗೌಡ, ಕೆ.ಸಿ.ಪ್ರಕಾಶ್, ಭರತೇಶ್, ಮಾಚಹಳ್ಳಿ ಕುಮಾರ್, ಪ್ರಸನ್ನ, ಪುರುಷೋತ್ತಮ್, ಇತರರು ಭಾಗವಹಿಸಿದ್ದರು.

ಬೈಕ್ ರ‌್ಯಾಲಿ: ಸಮೀಪದ ಶಿವಪುರ ಧ್ವಜಸತ್ಯಾಗ್ರಹಸೌಧದಿಂದ ಟಿ.ಬಿ ವೃತ್ತದವರೆಗೆ ದ್ವಿಚಕ್ರ ವಾಹನ ರಿಪೇರಿಗಾರರ ಸಂಘದ ಸದಸ್ಯರು ಬೈಕ್ ರ‌್ಯಾಲಿ ನಡೆಸಿದರು. ಸಂಘದ ಅಧ್ಯಕ್ಷ ದೌಲತ್‌ಪಾಷ, ಮುಸೀರ್ ಅಹಮದ್, ಮಹಮದ್ ಸಾದಿಕ್, ಮುಲ್ತಾಕ್, ಜಬೀವುಲ್ಲಾ, ಅಕ್ರಮ, ಫೈರೋಜ್, ಖಲಿಂಪಾಷ, ಮುಜೀರ್, ನಜೀದ್‌ಖಾನ್ ಇತರರು ಇದ್ದರು. 

 ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಬೇಕು ಎಂದು  ರೈತ ಮತ್ತು ಕೃಷಿ ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ದೇಶಹಳ್ಳಿ ಆರ್.ಮೋಹನಕುಮಾರ್ ಆಗ್ರಹಿಸಿದ್ದಾರೆ.

ಟೆಂಪೋ ಮೆರವಣಿಗೆ: ಟೆಂಪೋ ಮಾಲೀಕರ ಸಂಘದ ವತಿಯಿಂದ ಸಮೀಪದ ಶಿವಪುರ ಧ್ವಜಸತ್ಯಾಗ್ರಹಸೌಧದಿಂದ ಟಿಬಿ ವೃತ್ತದವರೆಗೆ ಟೆಂಪೋಗಳ ಮೆರವಣಿಗೆ ನಡೆಯಿತು. ಸಂಘದ ಅಧ್ಯಕ್ಷ ಬಸವರಾಜು, ಕಾರ್ಯದರ್ಶಿ ಪುಟ್ಟಸ್ವಮಿ, ಇಂದ್ರೇಶ್, ರವಿ, ಶಂಕರ್, ವೆಂಕಟೇಶ್, ದ್ವಾರಕೀಶ್ ನೇತೃತ್ವ ವಹಿಸಿದ್ದರು.

ಪವರ್‌ಸೆಲ್ ಕಾರ್ಮಿಕರ ಸಂಘ: ಸೋಮನಹಳ್ಳಿ ಪವರ್‌ಸೆಲ್ ಕಾರ್ಮಿಕರು ಕಾರ್ಖಾನೆ ಆವರಣದಿಂದ ಟಿಬಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸಂಘದ ಅಧ್ಯಕ್ಷ ಮಹದೇವಸ್ವಾಮಿ, ರಾಜು, ದಯಾನಂದ, ಶಿವಕುಮಾರ್, ಗಾಯತ್ರಿ, ಲಕ್ಷಮ್ಮ, ಶಶಿ, ಉದಯ್ ಪಾಲ್ಗೊಂಡಿದ್ದರು.

ಬೈಕ್ ರ‌್ಯಾಲಿ: ತಾಲ್ಲೂಕು ಜೀವ ವಿಮಾ ಪ್ರತಿನಿಧಿಗಳ ಸಂಘದ ಸದಸ್ಯರು ಪಟ್ಟಣದಲ್ಲಿ ಬೈಕ್ ರ‌್ಯಾಲಿ ನಡೆಸಿದರು.  ಸಂಘದ ಅಧ್ಯಕ್ಷ ಧನಪಾಲಶೆಟ್ಟಿ, ಕಾರ್ಯದರ್ಶಿ ಪ್ರದೀಪ್, ಸದಸ್ಯರಾದ ಕೃಷ್ಣೇಗೌಡ, ಜಯರಾಂ, ತೀರ್ಥಚಾರ್, ವಾಸು, ಅರಸು, ಬಿಳಿಗೌಡ, ಜಯರಾಂ, ಇತರರು ಇದ್ದರು.

ನಿಡಘಟ್ಟ: ಸಮೀಪದ ನಿಡಘಟ್ಟ ಬಳಿ ಗ್ರಾಮಸ್ಥರು ಹೆದ್ದಾರಿಯಲ್ಲಿ ಅಡುಗೆ ಮಾಡುವ ಮೂಲಕ ಹೆದ್ದಾರಿ ತಡೆ ಪ್ರತಿಭಟನೆ ನಡೆಸಿದರು. ಮುಖಂಡರಾದ ಗ್ರಾಮಪಂಚಾಯಿತಿ ಅಧ್ಯಕ್ಷ ಬೋಜಯ್ಯ, ಮುಖಂಡರಾದ ಪ್ರಸನ್ನ, ಕದಲೂರು ರವಿ, ದುಂಡನಹಳ್ಳಿ ರಾಜೇಗೌಡ, ರಾಜು, ಎನ್.ಎಂ.ಪ್ರಕಾಶ್, ಬಸವರಾಜು, ರವಿ, ಪ್ರಸನ್ನ, ಮಹದೇವು, ಮೀನಾಕ್ಷಿ, ನಾಗೇಶ್, ಬಸವರಾಜುಸೇರಿದಂತೆ ಹಲವರು ಭಾಗವಹಿಸಿದ್ದರು.

ಕೆ.ಹೊನ್ನಲಗೆರೆ: ಇಲ್ಲಿ ಕರೆ ನೀಡಲಾಗಿದ್ದ ಬಂದ್ ಯಶಸ್ವಿಯಾಗಿದೆ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲಲಿತಾ ಪ್ರಕಾಶ್ ಅವರ ನೇತೃತ್ವದಲ್ಲಿ ಗ್ರಾಮಸ್ಥರು ರಸ್ತೆ ತಡೆ ಪ್ರತಿಭಟನೆ ನಡೆಸಿದರು. ನಂತರ ಜಯಲಲಿತಾ ಅಣಕು ಶವಯಾತ್ರೆ ಮೂಲಕ ಶಿವಪುರ ಸತ್ಯಾಗ್ರಹಸೌಧಕ್ಕೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಟ್ಟು, ಸದಸ್ಯ ಕೆಂಗಲ್‌ಗೌಡ, ಮುಖಂಡರಾದ ಆರ್.ಸಿ.ಶಿವಲಿಂಗೇಗೌಡ, ಮಹೇಂದ್ರ, ಕೆಂಪಣ್ಣ, ಶಿವಮಾಧು, ಪ್ರಕಾಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಕೆಸ್ತೂರು: ಇಲ್ಲಿ ಕರೆ ನೀಡಲಾಗಿದ್ದ ಬಂದ್ ಯಶಸ್ವಿಯಾಗಿದೆ. ರಸ್ತೆಯಲ್ಲಿ ಅಡುಗೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು.  ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆನಂದ್, ಸದಸ್ಯರಾದ ಚಂದ್ರಹಾಸ್, ಜಗದೀಶ್, ಮುಖಂಡರಾದ ಸುರೇಶ್, ರಮೇಶ್, ಶ್ರೀನಿವಾಸ್, ರಾಜು, ನಿಂಗಪ್ಪ ಇತರರು ಭಾಗವಹಿಸಿದ್ದರು.

ಗೊಲ್ಲರದೊಡ್ಡಿ: ಇಲ್ಲಿನ ಗ್ರಾಮಸ್ಥರು ರಸ್ತೆಯಲ್ಲಿ ಅಡುಗೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ರೈತಸಂಘದ ಮುಖಂಡರಾದ ಅಶೋಕ್, ಜಗದೀಶ್, ದಾಸಪ್ಪ, ಸೀನಪ್ಪ, ಜಿ.ಪ್ರಕಾಶ್, ದೀಪು, ಉಮೇಶ್, ಜಿ.ಬಿ.ನಾಗರಾಜು ನೇತೃತ್ವವಹಿಸಿದ್ದರು.

ಬೆಸಗರಹಳ್ಳಿ: ಇಲ್ಲಿ ಕರೆ ನೀಡಲಾಗಿದ್ದ ಬಂದ್ ಯಶಸ್ವಿಯಾಗಿದೆ. ನಂತರ ನಡೆದ ಪ್ರತಿಭಟನಾ ಮೆರವಣಿಯಲ್ಲಿ ಕೆ.ಬಿ.ರಾಮಕೃಷ್ಣ, ಕೋಣಸಾಲೆ ಮಧು, ಎ.ಶಂಕರ್, ವಾಸು, ಫೈರೋಜ್ ಇತರರು ಇದ್ದರು.

ಕಾವೇರಿ: ಗೆಜ್ಜಲಗೆರೆ ಬಳಿ ಆಹೋ ರಾತ್ರಿ ರೈಲು ತಡೆ

ಮದ್ದೂರು: ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ಖಂಡಿಸಿ ರೈತಸಂಘದ ಕಾರ್ಯಕರ್ತರು ರೈಲು ಹಳಿಯ ಮೇಲೆ ಹಾಸಿಗೆ ಹಾಸಿ, ಸೊಳ್ಳೆಪರದೆ ಕಟ್ಟಿ ಮಲಗುವ ಮೂಲಕ ಆಹೋ ರಾತ್ರಿ ರೈಲು ತಡೆ ಚಳವಳಿಗೆ ಸಮೀಪದ ಗೆಜ್ಜಲಗೆರೆ ಬಳಿ ಶನಿವಾರ ಸಂಜೆ ಚಾಲನೆ ನೀಡಿದರು.

`ನಾಳೆಯು ರೈಲು ತಡೆ ಚಳವಳಿ ಮುಂದುವರಿಯಲಿದ್ದು, ಜಲಾಶಯದಿಂದ ನೀರು ಹರಿಸುವುದನ್ನು ನಿಲ್ಲಿಸುವವರೆಗೂ ನಮ್ಮ ಪ್ರತಿಭಟನೆ ಮುಂದುವರಿಯಲಿದೆ~ ಎಂದು ರಾಜ್ಯ ರೈತಸಂಘದ ಅಧ್ಯಕ್ಷ ವಿ.ಅಶೋಕ್ `ಪ್ರಜಾವಾಣಿ~ಗೆ ತಿಳಿಸಿದರು.

ಸಂಘದ ಜಿಲ್ಲಾಧ್ಯಕ್ಷ ಕೋಣಸಾಲೆ ನರಸರಾಜು, ತಾಲ್ಲೂಕು ಅಧ್ಯಕ್ಷ ವಿಶ್ವನಾಥ್, ಮುಖಂಡರಾದ ಜಿ.ಎ.ಶಂಕರ್, ಚಂದ್ರು, ರಾಮಲಿಂಗಯ್ಯ, ಜಿ.ಅಶೋಕ್, ಸೀತರಾಮು, ವೀರಪ್ಪ ಇತರರು ಪಾಲ್ಗೊಂಡಿದ್ದಾರೆ.

ಬಂದ್: ನಾಗಮಂಗಲದಲ್ಲಿ ಉತ್ತಮ ಬೆಂಬಲ
ನಾಗಮಂಗಲ:
ಕರ್ನಾಟಕ ಬಂದ್‌ಗೆ ನಾಗಮಂಗಲ ಪಟ್ಟಣದಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು. 
ಪಟ್ಟಣದಲ್ಲಿ ಅಂಗಡಿಗಳು, ಮುಂಗಟ್ಟುಗಳು ಮುಚ್ಚಿದ್ದವು. ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣದ) ಕಾರ್ಯಾಧ್ಯಕ್ಷ ಸುಗ್ಗಿಶಂಕರ್ ಹಾಗೂ ಅಧ್ಯಕ್ಷ ಮಂಜುನಾಥ ನೇತೃತ್ವದಲ್ಲಿ ಶ್ರೀರಂಗಪಟ್ಟಣ ಬೀದರ್ ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಯಿತು.

ಬಸ್ ಸಂಚಾರ ಸ್ಥಗಿತಗೊಂಡಿತ್ತು.  ತಮಿಳುನಾಡಿಗೆ ನೀರು ಹರಿಸುತ್ತಿರುವಕ್ರಮವನ್ನು ಖಂಡಿಸಿ ಕರವೇ ಕಾರ್ಯಕರ್ತರು ಎಮ್ಮೆ ಕರುಗಳೊಂದಿಗೆ ಮೆರವಣಿಗೆ ನಡೆಸಿ ಅವುಗಳಿಗೆ ತಂಪು ಪಾನೀಯ ಕುಡಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಂಜುನಾಥ್‌ಗೌಡ, ಮುತ್ಸಂದ್ರ ಕಿಟ್ಟಿ ತ್ಯಾಪೇನಹಳ್ಳಿ ಶ್ರೀನಿವಾಸ್, ಬಿ.ಆರ್.ಕುಮಾರ್, ಜವರೇಗೌಡ, ಮುಸ್ಲಿಂ ಯುವಕರಾದ ದಸ್ತಗೀರ್, ಎಜಾಜ್, ಅಯೂಬ್ ಇನಾಯತ್, ನೂರ್‌ಅಹಮದ್, ಝಫ್ರುಲ್ಲಾ, ಖಲೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT