ADVERTISEMENT

ಜಿಲ್ಲೆಯಾದ್ಯಂತ 186 ಮಿ.ಮೀ. ಮಳೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 5:47 IST
Last Updated 4 ಸೆಪ್ಟೆಂಬರ್ 2013, 5:47 IST
ಶ್ರೀರಂಗಪಟ್ಟಣದಲ್ಲಿ ಮಂಗಳವಾರ ಸುರಿದ ಧಾರಾಕಾರ ಮಳೆಯಿಂದಾಗಿ ಪೊಲೀಸ್ ವಸತಿಗೃಹಗಳಿಗೆ ನೀರು ನುಗ್ಗಿತು
ಶ್ರೀರಂಗಪಟ್ಟಣದಲ್ಲಿ ಮಂಗಳವಾರ ಸುರಿದ ಧಾರಾಕಾರ ಮಳೆಯಿಂದಾಗಿ ಪೊಲೀಸ್ ವಸತಿಗೃಹಗಳಿಗೆ ನೀರು ನುಗ್ಗಿತು   

ಮಂಡ್ಯ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಂಗಳವಾರ ಧಾರಾಕಾರ ಮಳೆಯಾಗಿದೆ. ಗುಡುಗು ಸಹಿತ ಎರಡೂ ಗಂಟೆಗೂ ಹೆಚ್ಚು ಕಾಲ ಸುರಿಯಿತು. ನಂತರ ಜಿಟಿ, ಜಿಟಿ ಹನಿಯಿತು.

ಕಳೆದರೆಡು ದಿನಗಳಲ್ಲಿ (ಸೆ. 1 ಮತ್ತು 2) ಜಿಲ್ಲೆಯಲ್ಲಿ ಒಟ್ಟು 185.6 ಮಿ.ಮೀ. ಮಳೆ ಸುರಿದಿದೆ. ಈ ಅವಧಿಯಲ್ಲಿ ನಾಗಮಂಗಲ ತಾಲ್ಲೂಕಿನಲ್ಲಿ ಗರಿಷ್ಠ ಒಟ್ಟು 96.4 ಮಿ.ಮೀ. ಮಳೆ ಸುರಿದಿದ್ದರೆ, ಪಾಂಡವಪುರ ತಾಲ್ಲೂಕಿನಲ್ಲಿ 3.2 ಮಿ.ಮೀ ಮಳೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಘಟದ (ಕೆಎಸ್‌ಎನ್‌ಡಿಎಂಸಿ) ಮೂಲಗಳು ತಿಳಿಸಿವೆ.

ನಗರದಲ್ಲಿ ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಆರಂಭವಾದ ಮಳೆ ಬಹುವೊತ್ತು ಸುರಿಯಿತು. ಮಹಾವೀರ ವೃತ್ತ, ಸುಭಾಷ್ ನಗರ, ಶಂಕರಮಠ, ಹಾಲಹಳ್ಳಿ ಸೇರಿದಂತೆ ಹಲವು ಬಡಾವಣೆಗಳಲ್ಲಿ ಚರಂಡಿ ನೀರು ರಸ್ತೆಯಲ್ಲಿ ಹರಿಯಿತು.

ಸಂಜೆ ಮಳೆಯಾಗಿದ್ದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು, ದೂರದೂರಿನ ನಾಗರಿಕರು ಮನೆಗೆ ತೆರಳು ಪ್ರಯಾಸಪಡಬೇಕಾಯಿತು. ಸಹಜವಾಗಿಯೇ ಆಟೋಗಳಿಗೆ ಬೇಡಿಕೆ ಹೆಚ್ಚಿತ್ತು.

ಸೆ. 1ರಂದು ಕೃಷ್ಣರಾಜಪೇಟೆಯಲ್ಲಿ 14.6 ಮಿ.ಮೀ, ಮದ್ದೂರು -8.4 ಮಿ.ಮೀ., ಮಳವಳ್ಳಿ -12.6 ಮಿ.ಮೀ., ಮಂಡ್ಯ -16.4 ಮಿ.ಮೀ., ಹಾಗೂ ನಾಗಮಂಗಲದಲ್ಲಿ -68.4 ಮಿ.ಮೀ. ಮಳೆ ಸುರಿದಿತ್ತು. ಸೆ. 2ರಂದು ನಾಗಮಂಗಲದಲ್ಲಿ 28 ಮಿ.ಮೀ., ಮಳವಳ್ಳಿ -11.4 ಮಿ.ಮೀ., ಶ್ರೀರಂಗಪಟ್ಟಣ -18.9 ಮಿ.ಮೀ., ಪಾಂಡವಪುರ -3.2 ಮಿ.ಮೀ., ಕೃಷ್ಣರಾಜಪೇಟೆ -0.5 ಮಿ.ಮೀ., ಮದ್ದೂರು - 3 ಮಿ.ಮೀ.,  ಮಳೆ ಸುರಿದಿದೆ ಎಂದು ಕೆಎಸ್‌ಎನ್‌ಡಿಎಂಸಿ ಮೂಲಗಳು ತಿಳಿಸಿವೆ.

ಕುಸಿದ ಕಾಂಪೌಂಡ್, ಎಮ್ಮೆ ಸಾವು
ನಾಗಮಂಗಲ: ಸಮೀಪದ ಭದ್ರಿಕೊಪ್ಪಲಿನಲ್ಲಿ ಸೋಮವಾರ ರಾತ್ರಿ ಧಾರಾಕಾರ ಮಳೆಯಿಂದಾಗಿ ಕಾಂಪೌಂಡ್ ಕುಸಿದಿದ್ದು, ಒಂದು ಎಮ್ಮೆ ಸಾವನ್ನಪ್ಪಿದೆ. ಎಮ್ಮೆಕರು ತೀವ್ರ ಗಾಯಗೊಂಡಿದೆ.

ಭದ್ರಿಕೊಪ್ಪಲಿನ ನಿವಾಸಿ ಮಾಯಮ್ಮ ಎಂಬುವವರಿಗೆ ಸೇರಿದ ಎಮ್ಮೆ ಸತ್ತಿದೆ. ಸುಬ್ರಹ್ಮಣ್ಯಾಚಾರ್ ಎಂಬುವವರ ಮನೆಯ ಕಾಂಪೌಂಡ್ ಶಿಥಿಲಗೊಂಡಿದ್ದು, ಸೋಮವಾರ ರಾತ್ರಿ ಸುರಿದ ಮಳೆಗೆ ಕಾಂಪೌಂಡ್ ಎಮ್ಮೆ ಹಾಗೂ ಎಮ್ಮೆಕರು ಮೇಲೆ ಬಿದ್ದು ಅನಾಹುತ ಸಂಭವಿಸಿದೆ.

ಮನೆಗೆ ನುಗ್ಗಿದ ನೀರು, ಪರದಾಟ
ಶ್ರೀರಂಗಪಟ್ಟಣ: ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆ ಮಂಗಳವಾರ ಸಂಜೆ ಧಾರಾಕಾರ ಮಳೆ ಸುರಿಯಿತು.
ಪಟ್ಟಣದ ಪೊಲೀಸ್ ವಸತಿ ಗೃಹ, ಬೂದಿಗುಂಡಿ, ರಂಗನಾಥನಗರ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ವಾಟರ್ ಗೇಟ್ ಬಳಿ ಚರಂಡಿಗಳ ನೀರು ಉಕ್ಕಿ ರಸ್ತೆಗೆ ಹರಿದ ಪರಿಣಾಮ ವಾಹನಗಳ ಸಂಚಾರಕ್ಕೆ ಕೆಲಕಾಲ ತೊಡಕಾಗಿತ್ತು. ಪೊಲೀಸ್ ವಸತಿಗೃಹ ಬಳಿ ನಿಲ್ಲಿಸಿದ್ದ ಬೈಕುಗಳು ಭಾಗಶಃ ನೀರಿನಲ್ಲಿ ಮುಳುಗಿದವು. ಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ಅವ್ಯವಸ್ಥೆ ಉಂಟಾಗಿದೆ. ಸಣ್ಣ ಮಳೆ ಬಿದ್ದರೂ ಇಲ್ಲಿ ನೀರು ಮಡುಗಟ್ಟು ನಿಲ್ಲುತ್ತದೆ. ಸ್ಥಳೀಯ ಪುರಸಭೆ ಇತ್ತ ಗಮನ ಹರಿಸುತ್ತಿಲ್ಲ. ಹಲವು ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದೇವೆ ಎಂದು ಪೊಲೀಸರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ಬೆಳಗೊಳ, ಕೆ.ಶೆಟ್ಟಹಳ್ಳಿ, ಕಸಬಾ ಹಾಗೂ ಅರಕೆರೆ ಹೋಬಳಿಗಳಲ್ಲಿ ಕೂಡ ಮಂಗಳವಾರ ಧಾರಾಕಾರ ಮಳೆ ಸುರಿದಿದೆ.

ಮಳವಳ್ಳಿ: ಜನಜೀವನ ಅಸ್ತವ್ಯಸ್ತ
ಮಳವಳ್ಳಿ: ಪಟ್ಟಣದಲ್ಲಿ ಮಂಗಳವಾರ ಸಂಜೆ ರಭಸದಿಂದ ಮಳೆ ಬಂದು ಸಾರ್ವಜನಿಕರು ಪರದಾಡುವಂತಾಯಿತು.
ಸಂಜೆ 5 ಗಂಟೆಗೆ ಪ್ರಾರಂಭವಾದ ರಾತ್ರಿಯಾದರೂ ಸುರಿಯುತ್ತಲೇ ಇತ್ತು. ಸಂಜೆ ಸರ್ಕಾರಿ ಕಚೇರಿ, ಶಾಲಾ, ಕಾಲೇಜುಗಳ ಅವಧಿ ಮುಗಿದಿದ್ದರಿಂದ ಕೆಲವರು ಕಚೇರಿ, ಕೆಲವರು ಬಸ್ ನಿಲ್ದಾಣ ಅಂಗಡಿ ಮುಂಗಟ್ಟುಗಳ ಮುಂದೆ ನಿಂತು ಆಶ್ರಯಪಡೆಯಬೇಕಾಯಿತು.

ಕೆಲವು ದಿನಗಳಿಂದ ಮಳೆಯಲ್ಲದೆ ತೀವ್ರ ಬಿಸಿಲಿನ ತಾಪ ಹೆಚ್ಚಾಗಿದ್ದು ಸೋಮವಾರ ರಾತ್ರಿ 3 ಸೆಂ.ಮೀ ಹಾಗೂ ಮಂಗಳವಾರ ಬಿದ್ದ ಮಳೆ ತಾಪವನ್ನು ತಣ್ಣಗಾಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.