ADVERTISEMENT

ಜೆಡಿಎಸ್‌ನಲ್ಲಿ ಉಸಿರುಗಟ್ಟುವ ವಾತಾವರಣ: ಸಿದ್ದರಾಮಯ್ಯ

ಎಚ್‌.ಡಿ.ದೇವೇಗೌಡ, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 10:10 IST
Last Updated 21 ಏಪ್ರಿಲ್ 2018, 10:10 IST

ನಾಗಮಂಗಲ: 'ಜೆಡಿಎಸ್‌ನಲ್ಲಿ ಉಸಿರು ಗಟ್ಟುವ ವಾತಾವರಣವಿದೆ. ಆ ಪಕ್ಷದ ವರಿಷ್ಠರ ಕಿರುಕುಳ ಸಹಿಸಿಕೊಂಡು ಸ್ವಾಭಿಮಾನಿಯಾದ ಯಾವುದೇ ನಾಯಕ ಅಲ್ಲಿರಲು ಸಾಧ್ಯವಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ’ಜೆಡಿಎಸ್ ಮುಖಂಡರ ಸ್ವಾರ್ಥ ರಾಜಕಾರಣ, ಕಿರುಕುಳ ಸಹಿಸದ ಹಲವು ಮುಖಂಡರು ಆ ಪಕ್ಷ ತ್ಯಜಿಸಿದ್ದಾರೆ. ಇಂಥದೇ ಪರಿಸ್ಥಿತಿ ನನಗೂ ಎದುರಾಗಿತ್ತು. ದೇವೇಗೌಡರು ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡಲು ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದರು. ಆ ಪಕ್ಷದಲ್ಲಿ ಮುಖಂಡರು ಕೋಲೆಬಸವನ ರೀತಿಯಲ್ಲಿ ಇರಬೇಕು. ಎಲ್ಲದಕ್ಕೂ ತಲೆಯಾಡಿ ಸಿಕೊಂಡಿರಬೇಕು. ಯಾವುದಕ್ಕೂ ಮುಕ್ತ ವಾತಾವರಣ ಇಲ್ಲ’ ಎಂದು ಹೇಳಿದರು.

‘ದೇವೇಗೌಡರಿಗೆ ತಮ್ಮ ಮಕ್ಕಳಲ್ಲದೆ ಬೇರೆ ಯಾರೂ ಕಣ್ಣಿಗೆ ಕಾಣುವುದಿಲ್ಲ. ಕುಮಾರಸ್ವಾಮಿ ಕೋಮುವಾದಿಗಳ ಜೊತೆ ಕೈಜೋಡಿಸುವಾಗ ದೇವೇಗೌಡರು, ಬಿಜೆಪಿ ಜೊತೆ ಸರ್ಕಾರ ರಚಿಸುವುದಾದರೆ ಕುಮಾರಸ್ವಾಮಿ ನನ್ನ ಹೆಣದ ಮೇಲೆ ಸರ್ಕಾರ ರಚಿಸಲಿ ಎಂದರು. ಆದರೆ, ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಕುಮಾರ ಉತ್ತಮ ಮುಖ್ಯಮಂತ್ರಿ ಎಂದು ಕೊಂಡಾಡಿದರು. ಅವರ ಇಬ್ಬಗೆಯ ನೀತಿಯಿಂದ ಅಲ್ಲಿಯ ಮುಖಂಡರು ರೋಸಿ ಹೋಗಿದ್ದಾರೆ. ಹೀಗಾಗಿ ಬೇರೆ ಪಕ್ಷಗಳಿಗೆ ಸೇರುತ್ತಿದ್ದಾರೆ' ಎಂದರು.

ADVERTISEMENT

‘ದೇವೇಗೌಡರು ಸದಾ ತಮ್ಮ ಕೊನೆ ಆಸೆಯ ಬಗ್ಗೆ ಮಾತನಾಡುತ್ತಾರೆ. ಕುಮಾರಸ್ವಾಮಿಯನ್ನು ರಾಜ್ಯದ ಮುಖ್ಯ ಮಂತ್ರಿ ಮಾಡದೆ ವಿರಮಿಸು ವುದಿಲ್ಲ ಎನ್ನುತ್ತಾರೆ. ಆದರೆ, ಕುಮಾರಸ್ವಾಮಿ ಬಿಟ್ಟು ಜೆಡಿಎಸ್‌ನಲ್ಲಿ ಬೇರೆ ಯಾವ ಮುಖಂಡರೂ ಅವರ ಕಣ್ಣಿಗೆ ಕಾಣುವುದಿಲ್ಲವೆ, ಇಂಥಾ ಪಕ್ಷದಲ್ಲಿ ಸ್ವಾಭಿಮಾನಿಯಾದ ಮುಖಂಡರು ಇರಬೇಕಾ' ಎಂದು ಪ್ರಶ್ನಿಸಿದರು.

‘ದೇವೇಗೌಡರು ತಮ್ಮ ಸ್ವಾರ್ಥ ಕ್ಕಾಗಿ ಎಸ್.ಆರ್.ಬೊಮ್ಮಾಯಿ ಸರ್ಕಾರ ಬೀಳಿಸಿದರು. ರಾಮಕೃಷ್ಣ ಹೆಗಡೆ ಅವರನ್ನು ಪಕ್ಷದಿಂದ ಉಚ್ಚಾಟಿಸಿದರು. ಕೆ.ಎನ್.ನಾಗೇಗೌಡ, ಭೈರೇಗೌಡ, ವೈ.ಕೆ.ರಾಮಯ್ಯ, ಬಚ್ಚೇಗೌಡ ಮುಂತಾದ ಮುಖಂಡರಿಗೆ ಮೋಸ ಮಾಡಿದರು'  ವಾಗ್ದಾಳಿ ನಡೆಸಿದರು.

ಜೆಡಿಎಸ್‌– ಬಿಜೆಪಿ ಒಳಒಪ್ಪಂದ

‘ಜೆಡಿಎಸ್‌ ಹಾಗೂ ಬಿಜೆಪಿ ನಡುವೆ ಒಳಒಪ್ಪಂದ ಆಗಿದೆ’ ಎಂದು ಸಿದ್ದರಾಮಯ್ಯ ಆರೋಪಿಸಿದರು. ಈ ಚುನಾವಣೆಯಲ್ಲಿ ದೇವೇಗೌಡರು, ಕುಮಾರಸ್ವಾಮಿ ಅವರು ಬಿಜೆಪಿ ವಿರುದ್ಧ ತುಟಿ ಬಿಚ್ಚುತ್ತಿಲ್ಲ. ಅತ್ತ ಅಮಿತ್ ಶಾ, ನರೇಂದ್ರ ಮೋದಿ ಜೆಡಿಎಸ್ ವಿರುದ್ಧ ಮಾತನಾಡುತ್ತಿಲ್ಲ. ಆದರೆ, ಎರಡೂ ಪಕ್ಷದವರು ನನ್ನನ್ನು ಗುರಿಯಾಗಿಸಿಕೊಂಡು ಸಲ್ಲದ ಆರೋಪ ಮಾಡುತ್ತಿದ್ದಾರೆ. ಇದರಿಂದ ಎರಡೂ ಪಕ್ಷಗಳ ನಡುವೆ ಆಗಿರುವ ಒಳಒಪ್ಪಂದ ತಿಳಿಯುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.