ADVERTISEMENT

ಡಿ.ಸಿಯಿಂದ ಪಿ.ಸಿವರೆಗೆ ಮಹಿಳೆಯರೇ

ಡಿ.ಸಿ ಎನ್‌.ಮಂಜುಶ್ರೀ, ಎಸ್ಪಿ ಜಿ.ರಾಧಿಕಾ ಸೇರಿ ವಿವಿಧ ಇಲಾಖೆಗಳ ಮುಖ್ಯಸ್ಥರು ಪ್ರಮೀಳೆಯರು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 9:00 IST
Last Updated 8 ಮಾರ್ಚ್ 2018, 9:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಡ್ಯ: ಇತಿಹಾಸದಲ್ಲಿ ಮೊದಲ ಬಾರಿಗೆ ಜಿಲ್ಲೆ ಅತೀ ಹೆಚ್ಚು ಮಹಿಳಾ ಅಧಿಕಾರಿಗಳನ್ನು ಹೊಂದಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೇರಿ ವಿವಿಧ ಇಲಾಖೆಗಳನ್ನು ಮುನ್ನಡೆಸುವ ಮುಖ್ಯಸ್ಥ ಸ್ಥಾನಗಳನ್ನು ನಿರ್ವಹಿಸುತ್ತಿರುವ ಮಹಿಳೆಯರು ರಾಜ್ಯದ ಗಮನಸೆಳೆದಿದ್ದಾರೆ.

ಎನ್‌.ಮಂಜುಶ್ರೀ ಅವರು  ಏಳು ತಿಂಗಳಿಂದ ಜಿಲ್ಲಾಧಿಕಾರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆ ತಡೆಗೆ ದಿಟ್ಟ ನಿರ್ಧಾರ ಕೈಗೊಂಡ ಅವರು ರಾಜಕೀಯ ಪ್ರಭಾವಗಳನ್ನು ಲೆಕ್ಕಿಸದೆ ನಿಯಮಾನುಸಾರ ಕಾರ್ಯ ನಿರ್ವಹಿಸಿ ಜಿಲ್ಲೆಯಾದ್ಯಂತ ಹೆಸರು ವಾಸಿಯಾಗಿದ್ದಾರೆ. ಜಿ.ರಾಧಿಕಾ ಅವರು ಎಂಟೂವರೆ ತಿಂಗಳಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಜಿ.ರಾಧಿಕಾ ಅವರು ಜಿಲ್ಲೆಯ ಸಂಪೂರ್ಣ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಎಎಸ್‌ಪಿ ಆಗಿ ಲಾವಣ್ಯಾ ಕಾರ್ಯನಿರ್ವಹಿಸುತ್ತಾರೆ.

ಕೃಷಿ ಇಲಾಖೆಯಲ್ಲಿ ಜಂಟಿ ನಿರ್ದೇಶಕಿ ಕಾರ್ಯ ನಿರ್ವಹಿಸುತ್ತಿರುವ ರಾಜಾ ಸುಲೋಚನಾ ಅವರು ಜಿಲ್ಲೆಯ ಕೃಷಿ ಚಟುವಟಿಕೆಯ ಸಂಪೂರ್ಣ ಚಿತ್ರಣ ಹೊಂದಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕಿಯಾಗಿ ಕುಮುದಾ ಶರತ್‌ ಕಾರ್ಯ ನಿರ್ವಹಿಸುತ್ತಿದ್ದು ಪಡಿತರ ಚೀಟಿ ವಿತರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ADVERTISEMENT

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿಯಾಗಿರುವ ಬಿ.ಮಾಲತಿ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗೆ ಸರ್ಕಾರದ ಸೌಲಭ್ಯ ನೀಡುವಲ್ಲಿ ಶ್ರಮಿಸುತ್ತಿದ್ದಾರೆ. ರೇಷ್ಮೆ ಇಲಾಖೆ ಉಪ ನಿರ್ದೇಶಕಿ ಪ್ರತಿಭಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಾಂಡವಪುರ ವಿಭಾಗದ ಉಪ ವಿಭಾಗಾಧಿಕಾರಿಯಾಗಿ ಯಶೋದಾ ಕೆಲಸ ಮಾಡುತ್ತಿದ್ದಾರೆ. ಕೃಷಿ ಇಲಾಖೆಯ ಮಂಡ್ಯ ತಾಲ್ಲೂಕು ಸಹಾಯಕ ನಿರ್ದೇಶಕಿಯಾಗಿ ಕೆ.ಸಿ.ಸುಷ್ಮಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿಯಾಗಿ ಶಾಂತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಎಪಿಎಂಸಿ ಮಾರುಕಟ್ಟೆ ಕಾರ್ಯದರ್ಶಿಯಾಗಿ ಪುಷ್ಪಾವತಿ ಇದ್ದಾರೆ.

ಪೊಲೀಸ್‌ ಇಲಾಖೆ: ಎಸ್ಪಿ, ಎಎಸ್ಪಿ ಮಾತ್ರವಲ್ಲಿದೆ ಸಬ್‌ ಇನ್‌ಸ್ಪೆಕ್ಟರ್‌ಗಳು, ಕಾನ್‌ಸ್ಟೆಬಲ್‌ಗಳು ಸೇರಿ 150ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿ ಇಲಾಖೆಯಲ್ಲಿ ಇದ್ದಾರೆ. ಮಹಿಳಾ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಜಯಲಕ್ಷ್ಮಿ, ಟ್ರಾಫಿಕ್‌–2 ಠಾಣೆಯ ಎಸ್‌ಐ ಶಿವಮ್ಮ, ಅರೆಕೆರೆ ಠಾಣೆಯ ಎಸ್‌ಐ ಭವಿತಾ, ಶಿವಳ್ಳಿ ಠಾಣೆಯ ಎಸ್‌ಐ ಜಯಲಕ್ಷ್ಮಿ, ಪಾಂಡವಪುರ ಠಾಣೆಯ ಎಸ್‌ಐ ಸುಮಾರಾಣಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಬಕಾರಿ ಇಲಾಖೆ: ಅಬಕಾರಿ ಇಲಾಖೆಯಲ್ಲಿ 15ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿ ಇದ್ದಾರೆ. ಮದ್ದೂರು ವಿಭಾಗದ ಸಬ್‌ ಇನ್‌ಸ್ಪೆಕ್ಟರ್‌ ಕಾಮಾಕ್ಷಿ ಉತ್ತಯ್ಯ, ಶ್ರೀರಂಗಪಟ್ಟಣ ವಿಭಾಗದ ಶೈಲಜಾ, ಕೆ.ಆರ್‌.ಪೇಟೆ ವಿಭಾಗದ ಭವ್ಯಾ ,ಗಾರ್ಡ್‌ ಗಳಾಗಿ ಮಂಗಳಗೌರಿ ಹಾಗೂ ವಿಜಯಲಕ್ಷ್ಮಿ ಕೆಲಸ ಮಾಡುತ್ತಿದ್ದಾರೆ. 

ಕೆಎಎಸ್‌ಆರ್‌ಟಿಸಿಯಲ್ಲಿ ಸಂಚಾರ ನಿಯಂತ್ರಕರು, ನಿರ್ವಾಹಕರು, ಕಚೇರಿ ಸಿಬ್ಬಂದಿ ಸೇರಿ 119 ಮಂದಿ ಮಹಿಳಾ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಜಿಲ್ಲಾಧಿಕಾರಿ: ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ ಬೆಂಗಳೂರಿನವರು ತಂದೆ; ನರಸಿಂಹಯ್ಯ, ತಾಯಿ; ಸುಶೀಲಾ. 2010ನೇ ಬ್ಯಾಚ್‌ನಲ್ಲಿ ಅವರು ಐಎಎಸ್‌ ಅಧಿಕಾರಿಯಾಗಿ ಹೊರಹೊಮ್ಮಿದರು.

ಆರಂಭದಲ್ಲಿ ರಾಯಚೂರಿನಲ್ಲಿ ಎಸಿಯಾಗಿ ಅವರು ಕಾರ್ಯ ನಿರ್ವಹಿಸಿದ ಅವರು ನಂತರ ಜಿತ್ರದುರ್ಗ ಜಿಲ್ಲಾ ಪಂಚಾಯಿತಿಯ ಸಿಇಒ ಆಗಿ ನೇಮಕಗೊಂಡರು. ಏಕಕಾಲದಲ್ಲಿ ಬೆಂಗಳೂರು ನಗರ ಹಾಗೂ ಗ್ರಾಮೀಣ ಎರಡೂ ಜಿಲ್ಲೆಗಳ ಸಿಇಒ ಆಗಿ ಕಾರ್ಯ ನಿರ್ವಹಣೆ ಮಾಡಿ ದಾಖಲೆ ಸೃಷ್ಟಿಸಿದವರು ಮಂಜುಶ್ರೀ. ಜಲ ಸಂರಕ್ಷಣೆ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಅವರು ಕೊಳವೆಬಾವಿ ಪುನಶ್ಚೇತನಕ್ಕೆ ಅಪಾರ ಕೆಲಸ ಮಾಡಿದ್ದಾರೆ. ಅದಕ್ಕಾಗಿ ಅವರು ರಾಷ್ಟ್ರೀಯ ಪ್ರಶಸ್ತಿ ಗರಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ.

‘ಹೆಣ್ಣನ್ನು ಹೆಣ್ಣಿನಂತೆಯೇ ಗುರುತಿಸಿ ಗೌರವ ಕೊಡುವ ಗುಣ ಬೆಳೆಸಿಕೊಳ್ಳಬೇಕು. ಮಹಿಳೆ ಅಧಿಕಾರಿಯಾದರೆ ಮಾತ್ರ ಸಾಧನೆಯಲ್ಲ, ತಾಯಿಯಾಗಿಯೂ ಸಾಕಷ್ಟು ಸಾಧನೆ ಮಾಡುತ್ತಾಳೆ. ಅವಳಲ್ಲಿ ಇರುವ ಮಿತಿಗಳು ಅವಳ ಶಕ್ತಿಗಳು’ ಎಂದು ಮಂಜುಶ್ರೀ ಹೇಳಿದರು.

ಕಂಪ್ಯೂಟರ್‌ ಎಂಜಿನಿಯರ್‌ ಆಗಿದ್ದ ಎಸ್ಪಿ: ಕಂಪ್ಯೂಟರ್‌ ಸೈನ್ಸ್‌ನಲ್ಲಿ ಬಿ.ಇ ಪದವಿ ಪಡೆದಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರು ಪುಣೆಯ ನ್ಯಾಷನಲ್‌ ಇನ್ಶುರೆನ್ಸ್‌ ಕಂಪನಿಯಲ್ಲಿ ಐಟಿ ಅಧಿಕಾರಿ ಆಗಿದ್ದರು. ವ್ಯವಸ್ಥಾಪಕಿ ಹುದ್ದೆಗೇರುವ ಹಂತದಲ್ಲಿದ್ದ ಅವರು ನಾಗರಿಕಾ ಸೇವೆ ಪರೀಕ್ಷೆ ಎದುರಿಸುವ ಉದ್ದೇಶದಿಮದ ಐಟಿ ಕೆಲಸಕ್ಕೆ 2009ರಲ್ಲಿ ರಾಜೀನಾಮೆ ನೀಡಿದರು.

2012ರ ಬ್ಯಾಚ್‌ನಲ್ಲಿ ಅವರು ಐಪಿಎಸ್ ತೇರ್ಗಡೆ ಹೊಂದಿದರು. ಆರಂಭದಲ್ಲಿ ಉಡುಪಿ ಜಿಲ್ಲೆಯಲ್ಲಿ ತರಬೇತಿ ಅಧಿಕಾರಿಯಾಗಿದ್ದರು. ಚಿಕ್ಕಬಳ್ಳಾಪುರದಲ್ಲಿ ಎಎಸ್ಪಿಯಾಗಿ, ಇಂಟೆಲಿಜೆನ್ಸ್‌ ಎಸ್ಪಿಯಾಗಿ, ಬೆಳಗಾವಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ರಾಧಿಕಾ ಅವರು ಬೆಂಗಳೂರಿನವರು. ತಾಯಿ; ಮಂಜುಳಾ, ತಂದೆ: ದಿವಂಗತ ಗಂಗಪ್ಪ. ಪತಿ ಡಾ.ಜಯಚಂದ್ರ ನಾಯಕ್‌ ವೈದ್ಯರು. ಅವರಿಗೆ ನಿಹಾರಿಕಾ ಎಂಬ ಮಗಳಿದ್ದಾಳೆ.

‘ಮಹಿಳೆಗೆ ವಿಶ್ವಾಸ, ಸ್ವಾಭಿಮಾನ ಬಲು ಮುಖ್ಯ. ಮಹಿಳೆ ಶೈಕ್ಷಣಿವಾಗಿ ತಳಪಾಯವನ್ನು ಗಟ್ಟಿ ಮಾಡಿಕೊಂಡರೆ ಯಾವ ಕ್ಷೇತ್ರವೇ ಆದರೂ ಯಶಸ್ವಿ ಮಹಿಳೆಯಾಗಬಹುದು’ ಎಂದು ಜಿ.ರಾಧಿಕಾ ಹೇಳಿದರು. ಇಬ್ಬರು ಚಾಲಕಿಯರು

ಅಬಕಾರಿ ಇಲಾಖೆಯಲ್ಲಿ ಇಬ್ಬರು ಮಹಿಳಾ ಚಾಲಕಿಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಭಾಗಾಧಿಕಾರಿ ವಾಹನದ ಚಾಲಕಿಯಾಗಿ ಮಾಲಾ ಕೆಲಸ ಮಾಡುತ್ತಿದ್ದಾರೆ. ಇಲಾಖೆಯ ಡಿಎಸ್‌ಪಿ ವಾಹನ ಚಾಲಕಿಯಾಗಿ ಶೋಭಾ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.