ADVERTISEMENT

ತಂಬಾಕು ಸೇವನೆಗೆ ತಡೆ: ಕಠಿಣ ಕ್ರಮ ಅಗತ್ಯ

ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಅಭಿಮತ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 11:37 IST
Last Updated 1 ಜೂನ್ 2018, 11:37 IST

ಮಂಡ್ಯ: ತಂಬಾಕು ಸೇವನೆ ನಿರ್ಮೂಲನೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದ್ದು, ಸರ್ಕಾರ ಹಾಗೂ ಸಂಘ–ಸಂಸ್ಥೆಗಳು ಜಾಗೃತಿ ಮೂಡಿಸಬೇಕಾಗಿದೆ ಎಂದು ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಹೇಳಿದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ನಗರದ ಮಾಂಡವ್ಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಂಬಾಕು ಸೇವನೆಯು ವಿಶ್ವವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಹೀಗಾಗಿ ಸರ್ಕಾರ ಹಾಗೂ ಸಂಘ–ಸಂಸ್ಥೆಗಳು ಸೂಕ್ತ ಜಾಗೃತಿ ಮೂಡಿಸಬೇಕಿದೆ ಎಂದರು.

ADVERTISEMENT

ಕಂಪೆನಿಗಳು ಲಾಭದ ದೃಷ್ಟಿಯಿಂದ ಹೆಚ್ಚು ತಂಬಾಕು ಉತ್ಪಾದನೆ ಮಾಡುತ್ತಿವೆ. ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರ ಎಂಬ ಒಂದು ಸಾಲಿನ ಘೋಷವಾಕ್ಯವನ್ನು ಅಳವಡಿಸಿ ಮಾರುಕಟ್ಟೆಯಲ್ಲಿ ರಾಜಾರೋಷವಾಗಿ ಮಾರಾಟವಾಗುತ್ತಿದೆ. ಸರ್ಕಾರ ತಂಬಾಕು ಮಾರಾಟ ತಡೆಯಲು ಯಾವುದೇ ಕಠಿಣ ಕ್ರಮಗಳನ್ನು ಜರುಗಿಸದೇ ಇರುವುದು ಆತಂಕಕಾರಿ ಎಂದರು.

ಯುವಜನತೆ ತಂಬಾಕು ಸೇವನೆ ಯಂತಹ ದುಶ್ಚಟಗಳಿಗೆ ಬಲಿಯಾದರೆ ಅದರಿಂದ ಹೊರಬರುವುದು ಕಷ್ಟವಾಗುತ್ತದೆ. ಹೀಗಾಗಿ ದುಶ್ಚಟಗಳಿಗೆ ಗುರಿಯಾಗುವ ಮುನ್ನವೇ ಅದರಿಂದ ದೂರ ಇರುವುದು ಸೂಕ್ತ.

ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಶಿಕ್ಷಣಾಧಿಕಾರಿ ಶಿವಾನಂದ್ ಮಾತನಾಡಿ, ‘ತಂಬಾಕು ಸೇವನೆಯ ವಿರುದ್ಧ ಭಾರತ ಮಾತ್ರವಲ್ಲದೇ, ಇಡೀ ವಿಶ್ವವೇ ಹೋರಾಟ ಮಾಡುತ್ತಿವೆ. ಇದರ ಸೇವನೆಯಿಂದ ದುಷ್ಪರಿಣಾಮಗಳು ಹೆಚ್ಚುತ್ತಿದ್ದು, ವೈವಿಧ್ಯಮಯ ಜೀವನ ಶೈಲಿಯಿಂದಾಗಿ ತಂಬಾಕು ಸೇವನೆಗೆ ಪರಿಹಾರ ಕಾಣುತ್ತಿಲ್ಲ. ಜಾಗೃತಿ ಹಾಗೂ ತಿಳಿವಳಿಕೆಯಿಂದ ಮಾತ್ರ ದುಶ್ಚಟಗಳಿಂದ ದೂರವಿಡಲು ಸಾಧ್ಯ’ ಎಂದರು.

ಮಾಂಡವ್ಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ವಿ.ಕೆ.ಕೃಷ್ಣಪ್ಪ, ಮಾಂಡವ್ಯ ಪದವಿ ಕಾಲೇಜು ಪ್ರಾಂಶುಪಾಲ ಜಿ.ವಿ.ರಮೇಶ್, ರೆಡ್‌ಕ್ರಾಸ್‌ ಸಂಸ್ಥೆಯ ಶಿವಲಿಂಗಯ್ಯ, ಪ್ರಸನ್ನಕುಮಾರ್, ಜಗದೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.