ADVERTISEMENT

ತೆರೆದ ಮ್ಯಾನ್‌ಹೋಲ್: ನಾಗರಿಕರಿಗೆ ತಳಮಳ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 7:50 IST
Last Updated 10 ಅಕ್ಟೋಬರ್ 2011, 7:50 IST

ಮಂಡ್ಯ: ಇದು, ನಗರದ ರಸ್ತೆಗಳ ದುಃಸ್ಥಿತಿ. ಒಂದು ಕಡೆ ಪ್ರಮುಖ ರಸ್ತೆಗಳು ಹಳ್ಳ, ತಗ್ಗುಗಳಿಂದ ಕೂಡಿ ಬಳಸಲಾಗದ ಸ್ಥಿತಿ ಇದ್ದರೆ, ತೆರೆದ ಮ್ಯಾನ್‌ಹೋಲ್‌ಗಳು ಇನ್ನೊಂದು ರೀತಿಯಲ್ಲಿ ವಾಹನ ಚಾಲಕರಿಗೆ ಅಪಾಯ ತಂದೊಡ್ಡುತ್ತಿವೆ.

ನಗರದ ಕೇಂದ್ರ ಭಾಗದಲ್ಲಿಯೇ ಮುಖ್ಯ ರಸ್ತೆಗಳಲ್ಲಿ ತೆರೆದುಕೊಂಡಿರುವ ತೆರೆದ ಮ್ಯಾನ್‌ಹೋಲ್‌ಗಳು ಇದ್ದು, ಕಳೆದ ಒಂದು ತಿಂಗಳಿಗೂ ಹೆಚ್ಚು ಅವಧಿಗೂ ಹೆಚ್ಚು ಕಾಲ ಈ ಮ್ಯಾನ್‌ಹೋಲ್ ತೆರೆದುಕೊಂಡಿದ್ದರೂ ಕನಿಷ್ಠ ಅದನ್ನು ಸುಃಸ್ಥಿತಿಗೆ ತರಲು ನಗರಸಭೆ ಮುಂದಾಗಿಲ್ಲ.

ದ್ವಿಚಕ್ರ ವಾಹನಗಳ ಅಪಘಾತಕ್ಕೂ ಕಾರಣವಾಗಿರುವ ಈ ತೆರೆದ ಮ್ಯಾನ್‌ಹೋಲ್‌ಗಳ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ನಗರಸಭೆಯ ಅಧಿಕಾರಿಗಳು ತಕ್ಷಣಕ್ಕೆ ಹುಡುಕಿ ಕೊಂಡಿರುವ ಸುಲಭ ಮಾರ್ಗ ಚಪ್ಪಡಿ ಕಲ್ಲುಗಳನ್ನು ಎಳೆಯು ವುದು. ಇದು ಮ್ಯಾನ್‌ಹೋಲ್ ಸಮಸ್ಯೆಗೆ ತಾತ್ಕಾಲಿಕ ಪರಿ ಹಾರ ಒದಗಿಸಿದರೂ ದಿನನಿತ್ಯ ಈ ರಸ್ತೆಗಳಲ್ಲಿ ಸಂಚರಿಸುವ ವಾಹನಗಳ ಚಾಲಕರಿಗೆ ಸಮಸ್ಯೆಯಾಗಿದೆ. ಹಲವು ಬಾರಿ ಅಪಘಾತಗಳಿಗೂ ಕಾರಣವಾಗುತ್ತಿದೆ.

ಅಶೋಕನಗರದಲ್ಲಿ ರೈಲ್ವೆ ಗೇಟ್ ರಸ್ತೆ, ವಿವೇಕಾನಂದ ರಸ್ತೆ ಮತ್ತು ನೂರಡಿ ರಸ್ತೆ ಸೇರುವ ಡಾ. ಬೆಸಗರಹಳ್ಳಿ ರಾಮಣ್ಣ ವೃತ್ತ, ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತಗ ಳಲ್ಲಿಯೇ ಇಂಥ ಪರಿಸ್ಥಿತಿ ಇದೆ. ಇನ್ನು ಬಡಾವಣೆಗಳಲ್ಲಿ ಇಂಥ ಪ್ರಕರಣಗಳು ಗಮನಕ್ಕೂ ಬರುವುದಿಲ್ಲ. ಆದರೆ, ಇಂಥ ಪಟ್ಟಣದಲ್ಲಿ ಎಷ್ಟು ತೆರೆದ ಮ್ಯಾನ್‌ಹೋಲ್‌ಗಳಿವೆ ಎಂಬುದರ ಬಗೆಗೆ ನಗರಸಭೆಗೂ ಖಚಿತ ಮಾಹಿತಿ ಇಲ್ಲ. ಒಬ್ಬ ಸದಸ್ಯರ ಪ್ರಕಾರ, 40 ರಿಂದ 50 ಇರಬಹುದು. ಇನ್ನೊಬ್ಬರ ಪ್ರಕಾರ 350ಕ್ಕೂ ಹೆಚ್ಚು ಮ್ಯಾನ್‌ಹೋಲ್‌ಗಳಿವೆ.

ಈ ಕುರಿತು `ಪ್ರಜಾವಾಣಿ~ ಸಂಪರ್ಕಿಸಿದಾಗ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಗೌರೀಶ್ ಅವರು, ಈ ಮ್ಯಾನ್‌ಹೋಲ್‌ಗಳು ತೆರೆದುಕೊಂಡಿರುವುದು ನಗರಸಭೆಯ ಗಮ ನಕ್ಕೂ ಬಂದಿವೆ. ಅವುಗಳನ್ನು ಗುರುತಿಸಲಾಗಿದೆ. ಮುಂದಿನ 15- 20 ದಿನದಲ್ಲಿ ಸರಿಪಡಿಸಲಾಗುವುದು ಎನ್ನುತ್ತಾರೆ.

ಮೊದಲು ಮ್ಯಾನ್‌ಹೋಲ್‌ಗಳಿಗೆ ಕಬ್ಬಿಣದ ಮುಚ್ಚಳ ಹಾಕಲಾಗಿತ್ತು. ಇವುಗಳ ಕಳವು ಪ್ರಕರಣ ಹೆಚ್ಚಿದ ಬಳಿಕ ಕಾಂಕ್ರೀಟ್‌ನಿಂದ ಮಾಡಿದ ಮುಚ್ಚಳ ಹಾಕಲಾಗುತ್ತದೆ ಎನ್ನುತ್ತಾರೆ ನಗರಸಭೆ ಸದಸ್ಯ ಶಿವಪ್ರಕಾಶ್‌ಬಾಬು. `ಎಲ್ಲ ವಾರ್ಡ್‌ಗಳಲ್ಲಿಯೂ ಇಂಥ ಸಮಸ್ಯೆ ಇದೆ. ನನ್ನ ವಾರ್ಡ್‌ನಲ್ಲಿಯೇ ನಾಲ್ಕನ್ನು ಗುರುತಿಸಲಾಗಿದೆ~ ಎನ್ನುತ್ತಾರೆ ಅವರು.

ನಗರಸಭೆಯ ಮಾಸಿಕ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದೆ. ಅಧ್ಯಕ್ಷರು ಮತ್ತು ಆಯುಕ್ತರ ಗಮನಕ್ಕೂ ತರಲಾಗಿದೆ. ಮುಚ್ಚಳಗಳಿಗೆ ಆರ್ಡರ್ ಕೊಟ್ಟಿದ್ದೇವೆ. ಹಾಕಿ ಕೊಡುತ್ತೇವೆ ಎಂದು ಭರವಸೆ ನೀಡುತ್ತಾರೆ. ಇನ್ನು ಆಗಿಲ್ಲ. ಮುಚ್ಚುಳಗಳು ಬಂದ ಕೂಡಲೇ ಈ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು.

ಆದರೆ, ನಗರದಲ್ಲಿ ಬಹುತೇಕ ಸಮಸ್ಯೆಗಳ ಬಗೆಗೆ ನಾಗರಿಕರೂ ಗಮನ ಸೆಳೆದರು ನಗರಸಭೆ ಗಮನ ಹರಿಸದ ಹಿನ್ನೆಲೆಯಲ್ಲಿ ಈ ಸಮಸ್ಯೆಗೆ ತಕ್ಷಣದಲ್ಲಿ ಪರಿಹಾರ ದೊರಕುವ ನಿರೀಕ್ಷೆ ಕಾಣುತ್ತಿಲ್ಲ.

ನಗರದ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮುಖ್ಯ ಮಂತ್ರಿಗಳ ನಗರ ಮತ್ತು ಪಟ್ಟಣ ಅಭಿವೃದ್ಧಿ ಯೋಜನೆಯಡಿ ರೂ.30 ಕೋಟಿ ಮಂಜೂರಾಗಿದೆ. ನಗರಸಭೆ ಈಗಾಗಲೇ ಇದರಲ್ಲಿ ಯಶಸ್ವಿಯಾಗಿ ಸುಮಾರು ರೂ. 18 ಕೋಟಿ ವೆಚ್ಚವನ್ನು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.