ADVERTISEMENT

ದುರಸ್ತಿ ಕಾಣದ ನಾಲೆ: ಸಂಕಷ್ಟದಲ್ಲಿ ರೈತ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 4:45 IST
Last Updated 16 ಅಕ್ಟೋಬರ್ 2012, 4:45 IST
ದುರಸ್ತಿ ಕಾಣದ ನಾಲೆ: ಸಂಕಷ್ಟದಲ್ಲಿ ರೈತ
ದುರಸ್ತಿ ಕಾಣದ ನಾಲೆ: ಸಂಕಷ್ಟದಲ್ಲಿ ರೈತ   

ಮಂಡ್ಯ: ಕೃಷ್ಣರಾಜಸಾಗರ ಜಲಾಶಯ ವ್ಯಾಪ್ತಿಯ ನಾಲೆಗಳು ಹಾಳಾಗಿವೆ ಎಂಬ ಕೂಗು ಕೇಳಿ ಬರುತ್ತಲೇ ಇದೆ. ಅದು ನಿಜವೆಂಬಂತೆ, ಕಳೆದ ಒಂದು ವಾರದಲ್ಲಿ ವಿವಿಧ ನಾಲೆಗಳು ಆರು ಕಡೆ ಒಡೆದಿವೆ. ಪರಿಣಾಮ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಬೆಳೆ ಹಾನಿಯಾಗಿದೆ.

ಒಂದರಿಂದ ಮೂರು ಶತಮಾನಗಳ ಹಿಂದೆ ಈ ನಾಲೆಗಳು ನಿರ್ಮಾಣವಾಗಿವೆ. ಕೆಲವು ನಾಲೆಗಳು 2 ದಶಕಗಳಿಂದ ದುರಸ್ತಿಯನ್ನೇ ಕಂಡಿಲ್ಲ. ಇನ್ನು ಕೆಲವು ನಾಲೆಗಳ ದುರಸ್ತಿ ಮಾಡಲಾಗಿದೆಯಾದರೂ, ಗುಣಮಟ್ಟದ ಕೊರತೆಯಿಂದಾಗಿ ಅವೂ ಹಾಳಾಗಿವೆ.

ಮಳೆ ಕೊರತೆಯಿಂದ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದಾಗಲೂ, ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದಲ್ಲಿರುವ ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ತಾಲ್ಲೂಕಿನ ರೈತರು ಒಂದಷ್ಟು ನೆಮ್ಮದಿಯಿಂದ ಇದ್ದರು.

ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಹರಿಯಲು ಆರಂಭಿಸಿದಾಗ, ಅವರೂ ಆತಂಕಕ್ಕೆ ಈಡಾಗಿದ್ದರು. ಆ ಆತಂಕ ದೂರವಾಗುವ ಮೊದಲೇ, ನಾಲೆಗಳು ಒಂದರ ಮೇಲೊಂದು ಒಡೆಯುತ್ತಿರುವುದರಿಂದ ರೈತರು ಆತಂಕ ದುಪ್ಪಟ್ಟಾಗಿದೆ.

ಅ.10 ರಂದು ಕೆಆರ್‌ಎಸ್ ಜಲಾಶಯದ ಸುತ್ತ-ಮುತ್ತಲೂ ಮಳೆ ಸುರಿದಾಗ ವಿರಿಜಾ ನಾಲೆಯು ನಾಲ್ಕು ಕಡೆ, ಆರ್‌ಬಿಎಲ್‌ಎಲ್, ದೇವರಾಯ ನಾಲೆಯು ತಲಾ ಒಂದು ಕಡೆ ಒಡೆದಿತ್ತು. ಆ.14 ರಂದು ಸುರಿದಿರುವ ಮಳೆಗೆ ಚಿಕ್ಕದೇವರಾಯ ನಾಲೆಯ ಏರಿ ಕಿತ್ತು ಹೋಗಿದೆ. 

ನಾಲೆಯ ಏರಿಗಳು ಕಿತ್ತು ಹೋಗಿರುವುದರಿಂದ ನೀರು 700 ಎಕರೆಗೂ ಹೆಚ್ಚು ಪ್ರದೇಶಕ್ಕೆ ನೀರು ನುಗ್ಗಿದೆ. ಬೆಳೆದು ನಿಂತಿದ್ದ ಬತ್ತ, ಕಬ್ಬು, ರಾಗಿ ಮುಂತಾದ ಬೆಳೆಗಳು ಕೊಚ್ಚಿಕೊಂಡು ಹೋಗಿವೆ. ತೆಂಗು, ಅಡಕೆ ಮರಗಳು ನೆಲಕ್ಕೆ ಉರುಳಿವೆ.

ನಾಲೆಗಳು ಒಡೆದಿರುವುದರಿಂದ ಆದ ನಷ್ಟದ ಬಗೆಗೆ ಸಮೀಕ್ಷೆ ನಡೆಸಲು ಕಂದಾಯ, ನೀರಾವರಿ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಲಾಗಿದೆ. ಅದರ ವರದಿಯೂ ಬರಲಿದೆ. ಲಕ್ಷಾಂತರ ರೂಪಾಯಿಯ ಬೆಳೆ ನಷ್ಟವಾಗಿದ್ದರೂ, ಪರಿಹಾರ ಸಿಗುವುದು ಸಾವಿರ ರೂಪಾಯಿ ಲೆಕ್ಕದಲ್ಲಿ ಮಾತ್ರ.

ಕೆಆರ್‌ಎಸ್ ಜಲಾಶಯ ವ್ಯಾಪ್ತಿಯ ಬಹುತೇಕ ನಾಲೆಗಳ ಲೈನಿಂಗ್ ಕಿತ್ತು ಹೋಗಿದೆ. ಕೆಲವು ಕಡೆಗಳಲ್ಲಿ ತ್ಯಾಜ್ಯ ವಸ್ತುಗಳಿಂದ ತುಂಬಿ ಹೋಗಿವೆ. ಸಣ್ಣ ಗಿಡಗಳೂ ಬೆಳೆದು ನಿಂತಿದ್ದು, ಇಡೀ ನಾಲೆಯನ್ನೇ ಆವರಿಸಿಕೊಂಡಿವೆ.
ಮಳೆ ಸುರಿದಾಗ ಹೆಚ್ಚಿನ ಪ್ರಮಾಣದಲ್ಲಿ ಬರುವ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದ್ದರಿಂದ ನಾಲೆಗಳಿಗೆ ಧಕ್ಕೆಯಾಗುತ್ತಿದೆ.

ನೀರು ಪೋಲು: ನಾಲೆಗಳು ಹಾಳಾಗಿರುವುದರ ಪರಿಣಾಮ ಸಾಕಷ್ಟು ನೀರು ಪೋಲಾಗುತ್ತಿದೆ. ಲೈನಿಂಗ್ ಸರಿಯಾಗಿ ಇಲ್ಲದಿರುವುದರಿಂದ ಅಲ್ಲಿನ ಭೂಮಿಯೂ ನೀರನ್ನು ಕುಡಿಯುತ್ತಿದೆ. ಸೋರಿಕೆಯಾಗಿ ನದಿಯನ್ನೂ ಸೇರುತ್ತಿದೆ. ಒಡೆದಿರುವ ನಾಲೆಗಳ ದುರಸ್ತಿ ಕೈಗೊಂಡಿರುವುದರಿಂದ ನಾಲೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ.

ದುರಸ್ತಿಗೆ ಹಣ: ಕೆಆರ್‌ಎಸ್ ಜಲಾಶಯ ವ್ಯಾಪ್ತಿಯ ನಾಲೆಗಳ ದುರಸ್ತಿಗೆ ರೂ.350 ಕೋಟಿ ತೆಗೆದಿರಿಸಲಾಗಿದೆ. ಇದಕ್ಕೆ ಈಚೆಗೆ ಸಚಿವ ಸಂಪುಟ ಸಭೆಯಲ್ಲಿಯೂ ಅನುಮೋದನೆ ನೀಡಲಾಗಿದೆ. ಆದರೆ, ಕಾಮಗಾರಿ ಯಾವಾಗ ಆರಂಭಿಸಬೇಕು ಎನ್ನುವುದು ನಿರ್ಧಾರವಾಗಿಲ್ಲ. ನಾಲೆ ದುರಸ್ತಿಗೆ ಆರು ತಿಂಗಳ ಮೊದಲೇ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಕಬ್ಬು ಬೆಳೆದಿರುವ ರೈತರು ಸಂಕಷ್ಟಕ್ಕೆ ಈಡಾಗುತ್ತಾರೆ.

ಜನವರಿಯಲ್ಲಿಯೇ ನಾಲೆ ದುರಸ್ತಿ ಕುರಿತು ಕರಪತ್ರಗಳನ್ನು ಹಂಚಬೇಕಿತ್ತು. ಆದರೆ ಘೋಷಿಸಿಲ್ಲ. ಈಗ ಮಾಡಲು ಮುಂದಾದರೆ ಬೆಳೆ ಬೆಳೆದಿರುವ ರೈತರಿಗೆ ತೊಂದರೆಯಾಗಲಿದೆ ಎನ್ನುತ್ತಾರೆ ರೈತ ಸಂಘದ ವರಿಷ್ಠ ಕೆ.ಎಸ್. ಪುಟ್ಟಣ್ಣಯ್ಯ.

ಮೊದಲ ಹಂತದಲ್ಲಿ ವಿಶ್ವೇಶ್ವರಯ್ಯ ನಾಲೆ ಹೊರತುಪಡಿಸಿ ಉಳಿದ ನಾಲೆಗಳನ್ನು ದುರಸ್ತಿ ಮಾಡಬೇಕು. ಎರಡನೇ ಹಂತದಲ್ಲಿ ವಿಶ್ವೇಶ್ವರಯ್ಯ ನಾಲೆಗಳನ್ನು ದುರಸ್ತಿ ಮಾಡಬೇಕು. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.