ADVERTISEMENT

ದೊಡ್ಡಕೆರೆ ಏರಿ ಬಿರುಕು: ಆತಂಕ

​ಪ್ರಜಾವಾಣಿ ವಾರ್ತೆ
Published 3 ಮೇ 2011, 6:25 IST
Last Updated 3 ಮೇ 2011, 6:25 IST

ಕೃಷ್ಣರಾಜಪೇಟೆ: ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತಾಲ್ಲೂಕಿನ ಹೊಸಹೊಳಲು ಗ್ರಾಮದ ದೊಡ್ಡ ಕೆರೆಯು ತುಂಬಿರುವುದು ರೈತರಿಗೆ ಸಂತಸವನ್ನು ಉಂಟುಮಾಡಿದ್ದರೆ, ಇದೇ ಕೆರೆಯ ಏರಿಯಲ್ಲಿ ಬಿರುಕು ಮೂಡಿದ್ದು, ನೀರು ಸೋರಿಕೆ ಆಗುತ್ತಿದೆ. ಇದರಿಂದ ಏರಿಯು ಒಡೆಯಬಹುದೆಂಬ ಆತಂಕ ರೈತರಲ್ಲಿ ಮೂಡಿದೆ.

ಕಳೆದ ಐದು ವರ್ಷಗಳ ಸುರಿದ ಕುಂಭದ್ರೋಣ ಮಳೆಗೆ ತಾಲ್ಲೂಕಿನ ವಿವಿಧ ಕೆರೆಗಳ ಏರಿ ಒಡೆದು ನೀರು ನುಗ್ಗಿ ರೈತರ ಬೆಳೆದ ಕಬ್ಬು, ಬತ್ತ, ತೆಂಗು, ಅಡಿಕೆಯಂತಹ ಫಸಲು ನಾಶವಾಗಿತ್ತು. ಆಗ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದ್ದ ಹೊಸ ಹೊಳಲು ದೊಡ್ಡಕೆರೆಯ ಏರಿಯನ್ನು ರೂ. 3 ಕೋಟಿಗೂ ಅಧಿಕ ವೆಚ್ಚದಲ್ಲಿ ಪುನರ್‌ನಿರ್ಮಿಸಲಾಗಿತ್ತು.

ಇದೇ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪನವರ ಮನೆ ದೇವರು ತಾಲ್ಲೂಕಿನ ಕಾಪನಹಳ್ಳಿ ಗವಿಮಠದ ಸ್ವತಂತ್ರ ಸಿದ್ದಲಿಂಗ ಯತಿಗಳ ಗದ್ದುಗೆ ಜಲಾವೃತಗೊಂಡು, ಭಾಗಶಃ ನಾಶಗೊಂಡು ಪುನರ್ ನಿರ್ಮಾಣ ವಾಯಿತು. 

ನೂತನ ಏರಿ ನಿರ್ಮಾಣವಾದ ನಂತರ ಕಳೆದ ಎರಡು ವರ್ಷಗಳ ಹಿಂದೆ ಸಹ ಏರಿಯಲ್ಲಿ ಬಿರುಕು ಕಂಡುಬಂದಿತ್ತು. ಆಗಲೂ ಬಿರುಕನ್ನು ಮುಚ್ಚಲಾಗಿತ್ತು. ಇದೀಗ ಮತ್ತೆ ಏರಿಯಲ್ಲಿ ಬಿರುಕು ಕಂಡುಬಂದಿದ್ದು, ರೈತರ ಮುಖದಲ್ಲಿ ಆತಂಕದ ಛಾಯೆ ಮೂಡಿಸಿದೆ.

ಭಾನುವಾರದಿಂದ ಕಂಡು ಬಂದಿರುವ ಈ ಸೋರಿಕೆಗೆ ಕೆರೆ ಏರಿಯನ್ನು ಉತ್ತಮ ಗುಣಮಟ್ಟ ದೊಂದಿಗೆ ನಿರ್ಮಾಣ ಮಾಡದಿರು ವುದೇ ಕಾರಣ ಎಂದು ಈ ಭಾಗದ ರೈತರು ಆರೋಪಿಸುತ್ತಾರೆ.

ಇದೀಗ ರಾಜ್ಯದ ಬೇರೆ ಬೇರೆ ಕಡೆಯಿಂದ ತಜ್ಞರನ್ನು ಕರೆಸಿ, ತೂಬನ್ನು ಮುಚ್ಚಿ ಸೋರಿಕೆಯನ್ನು ನಿಲ್ಲಿಸಲು ಅಧಿಕಾರಿಗಳು ಯತ್ನಿಸು ತ್ತಿದ್ದಾರೆ. ಬೆಳಗಾವಿ, ಧಾರವಾಡ ಮತ್ತು ಭದ್ರಾ ಪ್ರಾಜೆಕ್ಟ್‌ನಿಂದ ಮುಳುಗು ತಜ್ಞರೂ ಸಹ ಆಗಮಿ ಸಿದ್ದು, ತೂಬು ಮುಚ್ಚುವ ಕಾರ್ಯ ಆರಂಭಿಸಿದ್ದಾರೆ. ಹಳೆಯ ನಿರುಪ ಯುಕ್ತ ತೂಬಿನ ಮೂಲವನ್ನು ಪತ್ತೆಹಚ್ಚಿರುವ ತಜ್ಞರು ಮರಳು, ಜಲ್ಲಿಪುಡಿಯಂತಹ ವಸ್ತುಗಳನ್ನು ನೀರಿನಾಳಕ್ಕೆ ತೆಗದುಕೊಂಡು ಹೋಗಿ ತೂಬಿನ ಒಳಕ್ಕೆ ಸುರಿದು ಅದನ್ನು ಶಾಶ್ವತವಾಗಿ ಮುಚ್ಚಲು ಶ್ರಮಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.