ADVERTISEMENT

ನಕಲಿ ದಾಖಲೆ ಸೃಷ್ಟಿ ಪ್ರಕರಣ: ಸಿಒಡಿಗೆ ಒಪ್ಪಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 8:35 IST
Last Updated 3 ಸೆಪ್ಟೆಂಬರ್ 2011, 8:35 IST

ಮಂಡ್ಯ: ನಾಗಮಂಗಲದ ಕಂದಾಯ ಮತ್ತು ಭೂ ಮಾಪನ ಇಲಾಖೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿರುವ ಪ್ರಕರಣದ ತನಿಖೆಯನ್ನು ಸಿ.ಒ.ಡಿ.ಗೆ ಒಪ್ಪಿಸಬೇಕು ಎಂದು ಬಿಜೆಪಿ ನಾಗಮಂಗಲ ತಾಲ್ಲೂಕು ಘಟಕ ಅಧ್ಯಕ್ಷ ಟಿ.ಕೆ.ರಾಮೇಗೌಡ ಅವರು ಒತ್ತಾಯಿಸಿದ್ದಾರೆ.

ಪ್ರಭಾವಿ ವ್ಯಕ್ತಿಗಳು ಮತ್ತು ಅಧಿಕಾರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಅಲ್ಲದೆ, ಭೂ ಮಾಫಿಯಾದವರ ಕೈವಾಡ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿರುವ ಅವರು, ಈ ಕುರಿತು ಸಮಗ್ರ ತನಿಖೆಯಾಗಬೇಕಿದ್ದು ಸಿಒಡಿಗೆ ವಹಿಸಬೇಕು ಎಂದು ಆಗ್ರಹಪಡಿಸಿದ್ದಾರೆ.

ನಾಗಮಂಗಲ ತಾಲ್ಲೂಕಿನಲ್ಲಿ ಸರ್ಕಾರಕ್ಕೆ ಸೇರಿದ ಜಾಗ, ಕೆರೆ, ಗೋಮಾಳ, ಗುಂಡುತೋಪು ಸೇರಿದಂತೆ ಇತರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿ, ಸಾಗುವಳಿ ಚೀಟಿ ನೀಡಿರುವ ಅಧಿಕಾರಿ ಮತ್ತು ನೌಕರರ ಮೇಲೆ ಕ್ರಮ ಜರುಗಿಸಲು ಸಿಒಡಿ ತನಿಖೆ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.

ಈಗ 5 ಮಂದಿ ಭೂ ಮಾಪಕರನ್ನಷ್ಟೇ ಬಂಧನಕ್ಕೆ ಒಳಪಡಿಸಲಾಗಿದೆ. ಉನ್ನತ ತನಿಖೆ ನಡೆದರೆ ಇನ್ನಷ್ಟು ತಪ್ಪಿತಸ್ಥರು ಸಿಕ್ಕಿ ಬೀಳಲಿದ್ದಾರೆ.

ಹೀಗಾಗಿ, 2005 ರಿಂದ ಈವರೆಗೆ ಈ  ಪ್ರಕರಣದಲ್ಲಿ ತನಿಖೆ ಆಗಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.