ADVERTISEMENT

ನಾಲೆ ಕಾಮಗಾರಿ ವಿಳಂಬ: ಶಾಸಕರ ಅಸಮಾಧಾನ

ಕೆಆರ್‌ಎಸ್ ಜಲಾಶಯದ ನಾಲೆಗೆ ಇಂದಿನಿಂದ ನೀರು

​ಪ್ರಜಾವಾಣಿ ವಾರ್ತೆ
Published 6 ಜುಲೈ 2013, 5:30 IST
Last Updated 6 ಜುಲೈ 2013, 5:30 IST

ಮಂಡ್ಯ:  ಆಧುನೀಕರಣ ಕೆಲಸ ಪೂರ್ಣಗೊಳಿಸದ ಹಾಗೂ ಕಾಮಗಾರಿ ಗುಣಮಟ್ಟ ಕಾಪಾಡದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಕಾರ್ಯವೈಖರಿ ಬಗೆಗೆ ಜಿಲ್ಲೆಯ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಕೆಆರ್‌ಎಸ್‌ನಲ್ಲಿ ಶುಕ್ರವಾರ ನಡೆದ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಶಾಸಕರು, ಡಿಸೆಂಬರ್‌ನಲ್ಲಿಯೇ ನೀರು ನಿಲ್ಲಿಸಲಾಗಿತ್ತು. ಇಲ್ಲಿಯವರೆಗೆ ಯಾಕೆ ವಿಳಂಬ ಮಾಡಲಾಯಿತು ಎಂದು ಪ್ರಶ್ನಿಸಿದರು.

ಶಾಸಕ ಪಿ.ಎಂ. ನರೇಂದ್ರಸ್ವಾಮಿ ಮಾತನಾಡಿ, ನಾಲೆಯ ಕೊನೆ ಭಾಗದ ಕೆರೆಗಳನ್ನು ತುಂಬಿಸುವ ಮೂಲಕ ಕುಡಿಯುವ ನೀರಿಗೆ ಅವಕಾಶ ಮಾಡಿಕೊಡಬೇಕು. ಆ ಭಾಗದ ನಾಲೆಗಳ ಆಧುನೀಕರಣಕ್ಕೂ ಯೋಜನೆಯೊಂದನ್ನು ಸಿದ್ಧ ಪಡಿಸಬೇಕು ಎಂದರು.

ಶಾಸಕ ಎನ್. ಚಲುವರಾಯಸ್ವಾಮಿ ಮಾತನಾಡಿ, ಮುಂದಿನ 50 ವರ್ಷ ಗಮನದಲ್ಲಿಟ್ಟುಕೊಂಡು ನಾಲೆಗಳ ಆಧುನೀಕರಣ ಮಾಡಬೇಕು. ಕೇಂದ್ರ ಸರ್ಕಾರದ ನೆರವಿನೊಂದಿಗೆ ಸಮಗ್ರವಾಗಿ ಅಭಿವೃದ್ಧಿ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಸಚಿವರು ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.

ಶಾಸಕ ಡಿ.ಸಿ. ತಮ್ಮಣ್ಣ ಮಾತನಾಡಿ, ನಾಲಾ ರಸ್ತೆಗಳ ದುರಸ್ತಿ ಮಾಡಬೇಕು. ಕುಡಿಯುವ ನೀರಿನ ಮೊದಲ ಆದ್ಯತೆ ನೀಡಬೇಕು. ಗುಣಮಟ್ಟದ ಕೆಲಸ ಆಗುತ್ತಿಲ್ಲ. ಕಾಮಗಾರಿ ನಿಲ್ಲಿಸಿ, ಕೂಡಲೇ ನೀರು ಹರಿಸಬೇಕು ಎಂದು ಒತ್ತಾಯಿಸಿದರು. ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಮಾತನಾಡಿ, ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಬಳಕೆಯಾಗುತ್ತಿದೆ. ಈ ಬಗೆಗೆ ಜಾಗೃತಿ ಮೂಡಿಸಬೇಕು. ಕಾಟಾಚಾರಕ್ಕೆ ಸಭೆ ನಡೆಸಿದಂತಾಗುತ್ತಿದೆ. ನೀರು ಬಿಡುವ ಸಮಯದಲ್ಲಿ ಕಾಮಗಾರಿ ಕೈಗೆತ್ತಿ ಕೊಂಡಿರುವುದು ನೋಡಿದರೆ, ಎಲ್ಲರೂ ಹುಚ್ಚಾಸ್ಪತ್ರೆ ಸೇರುವಂತಾಗಿದೆ ಎಂದರು.

ಶಾಸಕ ರಮೇಶ್‌ಬಾಬು ಬಂಡಿಸಿದ್ದೇಗೌಡ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಭಾರತಿ ಕೃಷ್ಣಮೂರ್ತಿ, ಮುಖ್ಯ ಎಂಜಿನಿಯರ್ ಶಿವಕುಮಾರ್, ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ, ಜಿಲ್ಲಾ ಪೊಲೀಸ್ ವರಿಷ್ಠ ಭೂಷಣ ಬೊರಸೆ, ಜಿ.ಪಂ. ಸಿಇಒ ಪಿ.ಸಿ. ಜಯಣ್ಣ, ಎಸ್‌ಇ ಶಂಕರೇಗೌಡ, ಇಇ ಗಳಾದ ಬಸವರಾಜೇಗೌಡ, ವಿಜಯಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.
ಆತ್ಮೀಯ ಸ್ವಾಗತ: ಕೆಆರ್‌ಎಸ್ ಜಲಾಶಯಕ್ಕೆ ಆಗಮಿಸಿ ಅಂಬರೀಷ್ ಅವರನ್ನು ಶುಕ್ರವಾರ ಶ್ರೀರಂಗಪಟ್ಟಣ ತಾಲ್ಲೂಕಿನ ಕಾಂಗ್ರೆಸ್ ಮುಖಂಡರು ಆತ್ಮೀಯವಾಗಿ ಬರ ಮಾಡಿಕೊಂಡರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್. ಲಿಂಗರಾಜು, ಮುಖಂಡ ಸಚ್ಚಿದಾನಂದ ಅವರು ಹಾರ ಹಾಕಿ ಸ್ವಾಗತಿಸಿದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಮಂಜೇಗೌಡ, ಮಂಜುಳಾ ಪರಮೇಶ್‌ಮುಖಂಡರಾದ ಎಲ್.ಡಿ. ರವಿ, ಎಚ್.ಪಿ. ಮಹೇಶ್, ಎಂ.ಎಸ್. ಚಿದಂಬರ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.