ADVERTISEMENT

ನೀತಿ ಸಂಹಿತೆ ಉಲ್ಲಂಘನೆ ಆರೋಪ: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 6:53 IST
Last Updated 9 ಏಪ್ರಿಲ್ 2013, 6:53 IST

ಪಾಂಡವಪುರ: ತಾಲ್ಲೂಕಿನ ಬೇಬಿ ಗ್ರಾಮದಲ್ಲಿ ಜೆಡಿಎಸ್ ಪಕ್ಷವು ನಂಗಾನಾಚ್ ಕಾರ್ಯಕ್ರಮ ಏರ್ಪಡಿಸಿ ನೀತಿ ಸಂಹಿತೆ ಉಲ್ಲಂಘಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. 
 
 ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಶಾಸಕ ಸಿ.ಎಸ್. ಪುಟ್ಟರಾಜು ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಯುವ ಕಾಂಗ್ರೆಸ್ ಅಧ್ಯಕ್ಷ ಕೋ.ಪು.ಗುಣಶೇಖರ್ ಚುನಾವಣಾಧಿಕಾರಿಗೆ ಭಾನುವಾರ ದೂರು ಸಲ್ಲಿಸಿದರು.

ನಂತರ ಮಾತನಾಡಿದ ಅವರು, ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ರಮ ಮದ್ಯ ದಾಸ್ತಾನು ಸಿಕ್ಕಿಬಿದ್ದ ಬೆನ್ನಲ್ಲೆ ಬೇಬಿ ಗ್ರಾಮದಲ್ಲಿ ನಂಗಾನಾಚ್ ನಡೆಸಿರುವುದು ನಾಚಿಕೆಗೇಡು. ಈ ಬಗ್ಗೆ ಚುನಾವಣಾಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಚುನಾವಣೆಯಲ್ಲಿ ಕ್ಷೇತ್ರದ ಮಹಿಳೆಯರು ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಚುನಾವಣಾಧಿಕಾರಿಗಳು ತಕ್ಷಣ ಈ ದೂರನ್ನು ಪರಿಶೀಲಿಸಿ ಪುಟ್ಟರಾಜು ಅವರನ್ನು ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡರಾದ ಚಿಕ್ಕಾಡೆ ರಾಮಕೃಷ್ಣೇಗೌಡ, ಮಹೇಶ್, ಶ್ಯಾದನಹಳ್ಳಿ ವಿಶ್ವನಾಥ್, ಚನ್ನೇಗೌಡ ಇತರರು ಹಾಜರಿದ್ದರು.

ಪುಟ್ಟಣ್ಣಯ್ಯಗೆ ಕೆಜೆಪಿ ಬೆಂಬಲ
ಪಾಂಡವಪುರ:
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ಕೆಜೆಪಿ ಬೆಂಬಲ ನೀಡಲಿದೆ ಎಂದು ಪಕ್ಷದ ಜಿಲ್ಲಾ ಘಟಕ ಅಧ್ಯಕ್ಷ ನಾಗರಾಜಪ್ಪ ತಿಳಿಸಿದರು.

ಪಟ್ಟಣದ ಸಾಯಿ ಮಂದಿರದಲ್ಲಿ ಭಾನುವಾರ ಕೆಜೆಪಿ ತಾಲ್ಲೂಕು ಘಟಕ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪುಟ್ಟಣ್ಣಯ್ಯ ಅವರ ವ್ಯಕ್ತಿತ್ವ ಹಾಗೂ ಹೋರಾಟ ಮೆಚ್ಚಿ ಬೆಂಬಲಿಸುತ್ತಿದ್ದಾರೆ ಎಂದು ಹೇಳಿದರು.
ಕೆಜೆಪಿ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಪುಟ್ಟಣ್ಣಯ್ಯ, ನಾನು ಯಡಿಯೂರಪ್ಪ ಅವರಿಗೆ ಅಭಾರಿಯಾಗಿದ್ದೇನೆ ಎಂದರು.

ತಾಲ್ಲೂಕು ಘಟಕ ಅಧ್ಯಕ್ಷ ಮಂಡಿಬೆಟ್ಟಹಳ್ಳಿ ಮಂಜುನಾಥ್, ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ, ಮುಖಂಡರಾದ ದ್ಯಾವಪ್ಪ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.