ಮಂಡ್ಯ: ನಗರಸಭೆಯ ಆಯವ್ಯಯ ಮಂಡನೆಗೆ ಪೂರ್ವಭಾವಿಯಾಗಿ ನಾಗರಿಕರು, ಸಂಘ- ಸಂಸ್ಥೆಗಳಿಂದ ಸಲಹೆ ಪಡೆಯಲು ನಗರಸಭೆಯ ಆಯುಕ್ತರು, ಅಧ್ಯಕ್ಷರು ಕರೆದಿದ್ದ ಸಭೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಲ್ಲಿಯೂ ಬಹು ತೇಕ ನಗರದ ಸಮಸ್ಯೆಗಳೇ ಚರ್ಚೆಗೆ ಬಂದವು. ನಗರಸಭೆಯ ಸದಸ್ಯರುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಗೈರು ಹಾಜರಾಗಿದ್ದರು. ಒಂದಿ ಬ್ಬರು ಮಾಜಿ ಸದಸ್ಯರು, 8 ರಿಂದ 10 ಮಂದಿ ಹಾಲಿ ಸದಸ್ಯರು ಹಾಜರಿದ್ದರು. ಉಳಿದಂತೆ, ನಗರಸಭೆಯ ಸಿಬ್ಬಂದಿಗಳು ಇದ್ದು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ನಾಗರಿಕರ ಹಾಜರಿ ವಿರಳವಾಗಿತ್ತು.
ಹೆಚ್ಚಿನವರ ನಿರಾಸಕ್ತಿಯನ್ನುಪರೋಕ್ಷವಾಗಿ ಉಲ್ಲೇಖಿಸಿದ ಸದಸ್ಯ ಶಂಕರಗೌಡ, ನಗರಸಭೆ ಸಭೆ ಆಯೋಜಿಸಿರುವ ಕುರಿತು ಪ್ರಚಾರ ಮಾಡಿಲ್ಲ ಎಂದು ದೂರಿದರು. ಅಧ್ಯಕ್ಷ ಅರುಣ್‌ಕುಮಾರ್ ಅವರು, ಸಭೆಯ ಬಗೆಗೆ ಮಾಧ್ಯಮಗಳ ಮೂಲಕ ಪ್ರಚಾರ ಮಾಡಲಾಗಿತ್ತು ಎಂದರು. ಕಂದಾಯ ಬಾಕಿ ಬಗ್ಗೆ ಆಕ್ಷೇಪ: ಮಾಜಿ ಸದಸ್ಯ ರಾಮಲಿಂಗೇಗೌಡ ಅವರು, ನಗರದಲ್ಲಿ ಬಹುತೇಕ ಅಂಗಡಿಗಳಿಂದ ಕಂದಾಯ ವಸೂಲಾಗುತ್ತಿಲ್ಲ. ಶೇ 70ರಷ್ಟು ಆದಾಯ ಇಲ್ಲಿಯೇ ಸೋರಿಕೆ ಆಗುತ್ತಿದ್ದು, ಕಂದಾಯ ವಸೂಲಾತಿಗೆ ಕ್ರಮಕೈಗೊಳ್ಳಬೇಕು ಎಂದು ಸಲಹೆ ಮಾಡಿದರು.
ಹಾಲಿ ಸದಸ್ಯೆ ಪದ್ಮಾವತಿ ಅವರು, ನಗರದ ವಿವಿಧ ಬಡಾವಣೆಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಾಣ ಮಾಡಲು ಒತ್ತು ನೀಡಬೇಕು. ಆ ಬಡಾವಣೆಯ ಕಾರ್ಯಕ್ರಮ ಗಳಿಗೆ ವೇದಿಕೆ ಆಗುವ ಜೊತೆಗೆ, ಬಾಡಿಗೆ ಸ್ವರೂಪದಲ್ಲಿ ಆದಾಯವು ಬರಲಿದೆ ಎಂದರು. ಅಲ್ಲದೆ, ಮಹಿಳಾ ಸಂಘ ಸಂಸ್ಥೆಗಳಿಗೆ ನೆರವಾಗಲು ಬಜೆಟ್‌ನಲ್ಲಿಯೇ ಸ್ವಲ್ಪ ಪ್ರಮಾಣದ ಹಣಕಾಸು ಕಾದಿರಿಸಬೇಕು ಎಂದು ಸಲಹೆ ಮಾಡಿದರೆ, ಇದಕ್ಕೆ ಮಾಜಿ ಅಧ್ಯಕ್ಷೆ ನಾಗಮ್ಮ ಅವರು ಸಹಮತ ವ್ಯಕ್ತಪಡಿಸಿದರು.
ಕೃಷ್ಣಪ್ಪ ಅವರು, ನಗರದಲ್ಲಿರುವ ವಿವಿಧ ಪಾರ್ಕ್‌ಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಈಗಿರುವ ಸ್ವರೂಪದಲ್ಲಿ ಮಕ್ಕಳಿಗಾಗಲಿ, ಹಿರಿಯ ನಾಗರಿಕರಿಗಾಗಲಿ ಪಾರ್ಕ್‌ಗಳು ಪ್ರಯೋಜನಕ್ಕೆ ಬರುತ್ತಿಲ್ಲ ಎಂದರು. ಸಾರ್ವಜನಿಕರನ್ನು ಪ್ರತಿನಿಧಿಸಿದ್ದ ಶಾಮಣ್ಣ ಅವರು, ನಗರದ ಕೇಂದ್ರ ಭಾಗದಲ್ಲಿರುವ ಬಾಲಭವನ ಈಗ ಹಂದಿಗಳ ಬೀಡಾಗಿದೆ. ಮಕ್ಕಳಿಗ ಮನರಂಜನೆಯೂ ಇಲ್ಲ, ದೊಡ್ಡವರಿಗೆ ಪಾದಚಾರಿ ಮಾರ್ಗವು ಇಲ್ಲ ಎಂದು ವಿಷಾದಿಸಿದರು.
ಬೀದಿ ನಾಯಿ ಪಿಡುಗು ನಿರ್ಮೂಲನೆಗೆ ಕ್ರಮ, ಹೈಮಾಸ್ಟ್ ದೀಪಗಳ ಅಳವಡಿಕೆ, ಪಾರ್ಕ್‌ಗಳ ನಿರ್ಲಕ್ಷ್ಯ, ಕಸ ವಿಲೇವಾರಿ ಹೀಗೆ ಸಾಮಾನ್ಯವಾಗಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಸಾಕಷ್ಟು ಬಾರಿ ಚರ್ಚೆಯಾಗಿರುವ ವಿಷಯಗಳೇ ಮತ್ತೆ ಪ್ರಸ್ತಾಪವಾದವು. ಆಯವ್ಯಯ ಸ್ವರೂಪ ನಿರ್ಧರಿಸಲು ಕರೆದಿದ್ದ ಸಭೆ ಉದ್ದೇಶವನ್ನೇ ಮರೆತು ಕೆಲ ಹಾಲಿ ಸದಸ್ಯರೇ ಈ ಸಮಸ್ಯೆಗಳನ್ನು ಉಲ್ಲೇಖಿ ಸಿದ್ದು ಗಮನಾರ್ಹ.
ಸದಸ್ಯರು, ನಾಗರಿಕರು ಬಹುತೇಕ ಸಲಹೆಗಳಿಗೆ ಬಜೆಟ್ ಮಂಡಿಸು ವಾಗಿ ಇದನ್ನು ಪರಿಗಣಿಸುತ್ತೇವೆ ಎಂಬ ಭರವಸೆ ಅಧ್ಯಕ್ಷ ಎಂ.ಪಿ. ಅರುಣ್ ಕುಮಾರ್ ಅವರಿಂದ ದೊರೆಯಿತು. ಪಾರ್ಕ್ ನಿರ್ವಹಣೆ, ಬೀದಿ ನಾಯಿ ಪಿಡುಗು ಮತ್ತಿತರ ಸಮಸ್ಯೆಗಳು ಚರ್ಚೆಯಾದಾಗ, ‘ಇದು ಆಯವ್ಯಯ ಕುರಿತು ಸಲಹೆ ಪಡೆಯಲು ಕರೆದಿರುವ ಸಭೆ. ನಿಮ್ಮ ಸಲಹೆಗಳು ಅದಕ್ಕೆ ಪೂರಕವಾಗಿರಲಿ’ ಎಂದು ಉಪಾಧ್ಯಕ್ಷ ಚಿಕ್ಕಣ್ಣ ಕೋರಿದರು. ಆಯುಕ್ತ ರಾಮಸ್ವಾಮಿ ಅವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.