ADVERTISEMENT

ಬತ್ತದ ಪೈರು ನಾಟಿಗೂ ಯಂತ್ರ ಬಂತು!

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 8:55 IST
Last Updated 16 ಫೆಬ್ರುವರಿ 2011, 8:55 IST

ಶ್ರೀರಂಗಪಟ್ಟಣ: ಆಧುನಿಕ ಯಂತ್ರದ ಸಹಾಯದಿಂದ ರೈತ ಮಹಿಳೆಯೊಬ್ಬರು ಮಂಗಳವಾರ ತಮ್ಮ ಜನೀನಿನಲ್ಲಿ ಬತ್ತದ ಪೈರು ನಾಟಿ ಮಾಡಿಸಿದರು. ತಾಲ್ಲೂಕಿನ ದೊಡ್ಡಪಾಳ್ಯ ಬಳಿ ಜಮೀನು ಹೊಂದಿರುವ, ಪಟ್ಟಣದ ಅನಲ ಎಂಬವರ 4 ಎಕರೆ ಜಮೀನಿನಲ್ಲಿ ಬತ್ತದ ಪೈರು ನಾಟಿ ನಡೆಯಿತು. ಇದೇ ಮೊದಲ ಬಾರಿಗೆ ಈ ಭಾಗದಲ್ಲಿ ಯಂತ್ರದ ಸಹಾಯದಿಂದ ಬತ್ತದ ಪೈರು ನಾಟಿ ಮಾಡುತ್ತಿದ್ದುದನ್ನು ರೈತರು ಕುತೂಹಲದಿಂದ ವೀಕ್ಷಿಸಿದರು. ಒಟ್ಲು ಪಾತಿಯಿಂದ ಕಿತ್ತು ತಂದ ಪೈರನ್ನು ಯಂತ್ರಕ್ಕೆ ಜೋಡಿಸಿದರೆ ಸಾಕು, ನಾಟಿ ತನ್ನಷ್ಟಕ್ಕೆ ಸಾಗುತ್ತದೆ.

‘ಒಂದು ಗಂಟೆಯಲ್ಲಿ ಒಂದು ಎಕರೆ ವಿಸ್ತೀರ್ಣದಷ್ಟು ನಾಟಿ ಮಾಡಬಹುದು. ಎಷ್ಟು ಪೈರು ಬೇಕೊ ಅಷ್ಟನ್ನು ಮಾತ್ರ ಈ ಯಂತ್ರ ಭೂಮಿಗೆ ಹಾಕುತ್ತದೆ. ಪೈರು ತರಲು, ಅದನ್ನು ಜೋಡಿಸಲು ಹಾಗೂ ಯಂತ್ರ ಚಲಾಯಿಸಲು ಮೂವರು ಸಿಬ್ಬಂದಿ ಸಾಕು. ಇದರಿಂದ ಸಾಕಷ್ಟು ಖರ್ಚು ಉಳಿಯುತ್ತದೆ’ ಎಂದು ರೈತ ಮಹಿಳೆ ಅನಲ ಖುಷಿ ವ್ಯಕ್ತಪಡಿಸಿದರು. ಕೃಷಿ ಕಾರ್ಮಿಕರ ಕೊರತೆಯಿಂದ ಸಮಸ್ಯೆ ಎದುರಿಸುತ್ತಿದ್ದ ರೈತರಿಗೆ ಬತ್ತದ ಪೈರು ನಾಟಿ ಮಾಡುವ ಯಂತ್ರ ವರದಾನವಾಗಿದೆ.

ಯಂತ್ರ ಕೊಳ್ಳುವವರಿಗೆ ಸರ್ಕಾರ ಶೇ.50 ಸಹಾಯ ಧನ ನೀಡುತ್ತಿದೆ. ರೂ.90 ಸಾವಿರ ಹಣ ಪಾವತಿಸಿ ರೈತರು ಈ ಯಂತ್ರ ಕೊಳ್ಳಬಹುದು. ಕೇವಲ 3 ಲೀಟರ್ ಡೀಸೆಲ್‌ನಲ್ಲಿ ಒಂದು ಎಕರೆ ನಾಟಿ ಮಾಡಿಕೊಳ್ಳಬಹುದು. ಆರಂಭದಲ್ಲಿ ನುರಿತವರ ಸಲಹೆ ಪಡೆದು ನಾಟಿ ಮಾಡಿಕೊಳ್ಳಬೇಕು. ಈ ಯಂತ್ರವನ್ನು ಸ್ವಂತ ಕೆಲಸದ ಜತೆಗೆ ಬಾಡಿಗೆಗೂ ನೀಡಿ ಹಣ ಗಳಿಸಬಹುದು.ಯಂತ್ರದಿಂದ ಬತ್ತದ ಪೈರು ನಾಟಿ ಮಾಡುವವರು ಒಟ್ಲು ಪಾತಿ ಮಾಡಿಕೊಳ್ಳಲು ಎಕರೆಗೆ ರೂ.800 ಸಹಾಯ ಧನವ ನೀಡಲಾಗುತ್ತಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕಿ ಎಚ್.ಎನ್.ಮಮತಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.