ಶ್ರೀರಂಗಪಟ್ಟಣ: ತಾಲ್ಲೂಕಿನ ಬಲ್ಲೇನಹಳ್ಳಿ ಶೇ 100ರಷ್ಟು ನೀರಾವರಿ ಇರುವ ಗ್ರಾಮ. 2 ಸಾವಿರಕ್ಕಿಂತಲೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮದಲ್ಲಿ ಅಷ್ಟೇ ಸಮಸ್ಯೆಗಳೂ ಇವೆ.
ಗ್ರಾಮವನ್ನು ಪ್ರವೇಶಿಸುವಾಗ ಕಳಪೆ ರಸ್ತೆ ನಮ್ಮನ್ನು ಸ್ವಾಗತಿಸುತ್ತದೆ. ಸಿಮೆಂಟ್ ಕಂಡಿರುವ ವಿರಳ ರಸ್ತೆಗಳಲ್ಲಿ ಕೂಡ ದಿಣ್ಣೆ, ತಗ್ಗುಗಳಿವೆ. ಹಿರಿ ರಸ್ತೆ, ಕಿರು ರಸ್ತೆಗಳ ಇಕ್ಕೆಲಗಳಲ್ಲಿ ಇರುವ ಚರಂಡಿಗಳು ಕಟ್ಟಿಕೊಂಡಿದ್ದು ದುರ್ವಾಸನೆ ಬೀರುತ್ತಿವೆ. ಪರಿಣಾಮ ಸೊಳ್ಳೆಗಳ ಹಾವಳಿ ಮಿತಿ ಮೀರಿದೆ.
ಗ್ರಾಮದ ಪಶು ವೈದ್ಯಕೀಯ ಆಸ್ಪತ್ರೆಯ ಕಟ್ಟಡ ಶಿಥಿಲವಾಗಿದ್ದು ಅಲ್ಲಲ್ಲಿ, ಬಿರುಕುಗಳು ಕಾಣಿಸಿಕೊಂಡಿದೆ. ಲೋಕಪಾವನಿ ನದಿ ದಡದಲ್ಲಿ ಆರೋಗ್ಯ ಇಲಾಖೆ ನಿರ್ಮಿಸಿರುವ ಶವಾಗಾರದ ಕೊಠಡಿ ದಶಕಗಳಿಂದ ವ್ಯರ್ಥವಾಗಿದೆ.
ಬಲ್ಲೇನಹಳ್ಳಿಯನ್ನು ಸುವರ್ಣ ಗ್ರಾಮೋದಯ ಯೋಜನೆಗೆ ಸೇರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನರ ಬೇಡಿಕೆಗೆ ಸ್ಪಂದಿಸಿಲ್ಲ. 1978ರಲ್ಲಿ ಮಂಜೂರಾದ ಪಶು ಆಸ್ಪತ್ರೆಗೆ ಇಷ್ಟು ವರ್ಷ ಕಳೆದರೂ ಸ್ವಂತ ಕಟ್ಟಡ ಇಲ್ಲದೇ ಇರುವುದು ಅಚ್ಚರಿ ಮೂಡಿಸಿದೆ.
ಈ ಆಸ್ಪತ್ರೆಯಲ್ಲಿ ಕಳೆದ 5 ತಿಂಗಳಿಂದ ವೈದ್ಯರೂ ಇಲ್ಲ. ಹಾಗಾಗಿ ಪಶು ಪಾಲಕರು ಬವಣೆ ಪಡುತ್ತಿದ್ದಾರೆ.
`ನಮ್ಮೂರಲ್ಲಿ ವಾರಕ್ಕೆ ಒಮ್ಮೆಯಾದರೂ ಸ್ವಚ್ಛತೆ ಕಾರ್ಯ ನಡೆಯುತ್ತಿಲ್ಲ. ಗ್ರಾ.ಪಂ. ಅಧಿಕಾರಿಗಳು ಕೆಲಸಗಾರರ ಕೊರತೆಯ ನೆಪ ಹೇಳುತ್ತಾರೆ.
ಜನ ದಟ್ಟಣೆಯ ರಸ್ತೆಗಳಿಗೆ ಸಿಮೆಂಟ್ ಹಾಕಿಸುವಂತೆ ಅಧಿಕಾರಿಗಳು, ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ. ಚರಂಡಿಗಳಿಂದ ಸಹಿಸಲು ಆಗದ ವಾಸನೆ ಬರುತ್ತಿದೆ~ ಎಂದು ಗ್ರಾ.ಪಂ. ಮಾಜಿ ಸದಸ್ಯ ಬಿ.ಸಿ.ಕೃಷ್ಣೇಗೌಡ ಇತರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.