ADVERTISEMENT

ಬಿಜೆಪಿ ಪ್ರಚಾರಕ್ಕೆ ತಾರಾ ಮೆರುಗು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 8:34 IST
Last Updated 22 ಮಾರ್ಚ್ 2014, 8:34 IST

ಮಂಡ್ಯ: ಮಂಡ್ಯದಲ್ಲಿ ಬಿಜೆಪಿ ನಿಯೋಜಿತ ಅಭ್ಯರ್ಥಿ ಬಿ. ಶಿವಲಿಂಗಯ್ಯ ಅವರ ಪರವಾಗಿ ಗುರುವಾರ ಚಿತ್ರನಟಿಯರಾದ ರಕ್ಷಿತಾ ಹಾಗೂ ಶ್ರುತಿ  ಪ್ರಚಾರ ಮಾಡುವ ಮೂಲಕ ತಾರಾ ಮೆರುಗು ತಂದರು.

ತೆರೆದ ವಾಹನದಲ್ಲಿ ಜಿಲ್ಲೆಯ ವಿವಿಧೆಡೆ ಪ್ರಚಾರ ಮಾಡಿದ ನಂತರ ಮಂಡ್ಯದಲ್ಲಿಯೂ ಪ್ರಚಾರ ಮಾಡಿದರು.

ಬಿಜೆಪಿ ಕಚೇರಿ ಉದ್ಘಾಟನೆ ಮಾಡಿದ ಶಾಸಕ ಆರ್‌. ಅಶೋಕ್‌ ಮಾತನಾಡಿ, ಬಿಜೆಪಿಯವರಿಗಿಂತ ಕಾಂಗ್ರೆಸ್‌ ಪಕ್ಷದವರೇ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಜಪ ಮಾಡುತ್ತಿದ್ದಾರೆ. ಇದು ಮೋದಿಯ ಅಲೆಯನ್ನು ತೋರಿಸುತ್ತದೆ ಎಂದರು.

ಮೋದಿ ಅವರಿಗೆ ಕಾಂಗ್ರೆಸ್ಸಿನವರೇ ಹೆಚ್ಚಿನ ಪ್ರಚಾರ ನೀಡುತ್ತಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆಗಳು. ಅಲೆ ಇಲ್ಲ ಎಂದ ಮೇಲೆ ಯಾಕೆ ಟೀಕೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರದ ಆಡಳಿತ ಚಾಲನೆ ಪಡೆದಿಲ್ಲ. ರಾಜ್ಯಪಾಲರೇ ಕಾನೂನು ಸುವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗಿದೆ ಎಂದು ಟೀಕಿಸಿದರು.

ಜೆಡಿಎಸ್‌ ಪಕ್ಷದವರು ಅಭ್ಯರ್ಥಿಗಳಿಗಾಗಿ ಹುಡುಕಾಡುತ್ತಿದ್ದಾರೆ. ಬೆಲೆ ಏರಿಕೆ ತಡೆಗಟ್ಟುವಲ್ಲಿ ಕಾಂಗ್ರೆಸ್‌ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ನಟಿ ರಕ್ಷಿತಾ ಮಾತನಾಡಿ, ದೇಶದ ಹಿತದೃಷ್ಟಿಯಿಂದ ಪಕ್ಷ ಬದಲಾಯಿಸಿದ್ದೇನೆ. ಅದಕ್ಕಾಗಿ ಜಿಲ್ಲೆಯ ಜನತೆಯ ಕ್ಷಮೆ ಯಾಚಿಸುತ್ತೇನೆ. ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ನಟಿ ಶ್ರುತಿ ಮಾತನಾಡಿ, ಸ್ವಾತಂತ್ರ್ಯ ನಂತರ ಬಹುತೇಕ ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್‌ ಪಕ್ಷವು ದೇಶವನ್ನು ಅವನತಿಯತ್ತ ತೆಗೆದುಕೊಂಡು ಹೋಗಿದೆ ಎಂದು ಟೀಕಿಸಿದರು. ದೇಶ ಪೋಲಿಯೊ ಪೀಡಿತ ಆಗಬಾರದು ಎಂದರೆ ಒಂದು ಮತವನ್ನು ಬಿಜೆಪಿಗೆ ನೀಡುವ ಸಂಕಲ್ಪ ಮಾಡಬೇಕು ಎಂದರು.

ಅಭ್ಯರ್ಥಿ ಬಿ. ಶಿವಲಿಂಗಯ್ಯ ಮಾತನಾಡಿ, ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ ಒಳಿತಿಗಾಗಿ ಸ್ಪರ್ಧಿಸಿದ್ದೇನೆ. ನನ್ನನ್ನು ಗೆಲ್ಲಿಸುವ ಮೂಲಕ ಮೋದಿ ಅವರ ಕೈ ಬಲ ಪಡಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಘಟಕದ ಅಧ್ಯಕ್ಷ ಎಚ್‌. ಹೊನ್ನಪ್ಪ, ಮೀರಾ ಶಿವಲಿಂಗಯ್ಯ, ನಾಗೇಂದ್ರ, ಬಸವೇಗೌಡ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.