ADVERTISEMENT

ಬೆಂಗಳೂರಿಗೆ ನೀರು ಸರಬರಾಜು ಬಂದ್

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 5:10 IST
Last Updated 3 ಅಕ್ಟೋಬರ್ 2012, 5:10 IST

ಹಲಗೂರು: ಕಾವೇರಿ ಹೋರಾಟ ಬೆಂಬಲಿಸಿ ಬೆಂಗಳೂರಿನ ಜನತೆ ಚಳುವಳಿಯಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಸಮೀಪದ ತೊರೆಕಾಡನಹಳ್ಳಿ ಗ್ರಾಮದ ಬೆಂಗಳೂರು ಜಲಮಂಡಲಿಗೆ ಮಂಗಳವಾರ ಮುತ್ತಿಗೆ ಹಾಕಿ ಬೆಂಗಳೂರಿಗೆ ನೀರು ಸರಬರಾಜನ್ನು ಬಂದ್ ಮಾಡಿಸಿದರು.

 ವಿಧಾನ ಪರಿಷತ್ ಮಾಜಿ ಸದಸ್ಯ ಮಧು.ಜಿ.ಮಾದೇಗೌಡ ಅವರ ನೇತೃತ್ವದಲ್ಲಿ ಅಪಾರ ಸಂಖ್ಯೆಯಲ್ಲಿ ರೈತರು ಪಾಲ್ಗೊಂಡಿದ್ದರು. ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ಜನರು ಬೆಳಿಗ್ಗೆ ಪುರದದೊಡ್ಡಿ ಗ್ರಾಮದಲ್ಲಿ ಜಮಾಯಿಸಿದರು. ಶಿಂಷಾ ನದಿ ಸೇತುವೆ ಬಳಿ ವಾಹನ ತಡೆದು ರಸ್ತೆ ತಡೆ ನಡೆಸಿದರು. ತೊರೆಕಾಡನಹಳ್ಳಿಯ ಬೆಂಗಳೂರು ಜಲಮಂಡಲಿ ಕೇಂದ್ರದವರೆಗೆ ಪಾದಯಾತ್ರೆ ನಡೆಸಿದರು. 

ಮಧು.ಜಿ.ಮಾದೇಗೌಡ ಮಾತನಾಡಿ, ತಮಿಳುನಾಡಿಗೆ ಕಾವೇರಿ ನೀರು ಹರಿಸುವುದರಿಂದ ಬೆಂಗಳೂರಿನ ಜನತೆ ಕುಡಿಯುವ ನೀರಿಗೂ ತೊಂದರೆ ಉಂಟಾಗಲಿದೆ. ಆದ್ದರಿಂದ ನಗರ ಪ್ರದೇಶದ ಜನರು ಎಚ್ಚೆತ್ತು ಚಳುವಳಿಯಲ್ಲಿ ಭಾಗವಹಿಸಬೇಕು ಎಂದರು.  ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ, ಮಲ್ಲಾಜಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯ ಎ.ಎಸ್.ರಾಜೀವ, ರೈತಸಂಘದ ಬೋರಾಪುರ ಶಂಕರೇಗೌಡ, ಶ್ರೀನಿವಾಸ್, ನವಕರ್ನಾಟಕ ಯುವಶಕ್ತಿ ಸಂಘದ ಎನ್.ಕೆ.ಕುಮಾರ್ ಮಾತನಾಡಿದರು.

ನೀರು ಬಂದ್: ಮಧು.ಜಿ.ಮಾದೇಗೌಡ ಅವರ ಮನವಿಗೆ ಸ್ಪಂಧಿಸಿದ ಕಾರ್ಯಪಾಲಕ ಅಭಿಯಂತರ ನಿತ್ಯಾನಂದಕುಮಾರ್ ಮತ್ತು ತಹಶೀಲ್ದಾರ್ ಎಂ.ಆರ್.ರಾಜೇಶ್ ಅವರು ಮುಖ್ಯ ಕಾರ್ಯಪಾಲಕ ಅಭಿಯಂತರರ ನಡುವೆ ದೂರವಾಣಿಯಲ್ಲಿ ಮಾತನಾಡಿ ನೀರು ನಿಲ್ಲಿಸುವ ತೀರ್ಮಾನ ತೆಗೆದುಕೊಂಡರು. ಜಲಮಂಡಲಿಯ ಅಧಿಕಾರಿಗಳ ಮುಂದಿನ ಆದೇಶದವರೆಗೆ ನೀರನ್ನು ಸ್ಥಗಿತಗೊಳಿಸಲಾಗುವುದು ಎಂದು ನಿತ್ಯಾನಂದಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.

ದಾಖಲೆ: ಜಲಮಂಡಲಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನೀರನ್ನು ಸ್ಥಗಿತಗೊಳಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.