ಶ್ರೀರಂಗಪಟ್ಟಣ: ಐತಿಹಾಸಿಕ ತಾಣಗಳಾದ ಸೋಮನಾಥಪುರ ಹಾಗೂ ತಲಕಾಡುಗಳ ಪ್ರಾಚ್ಯವಸ್ತು ಸ್ಥಳ ಹಾಗೂ ಸ್ಮಾರಕಗಳನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಬೇಕು ಎಂದು ಚಾಮರಾಜನಗರ ಸಂಸದ ಆರ್.ಧ್ರುವನಾರಾಯಣ ಒತ್ತಾಯಿಸಿದರು.
ಪಟ್ಟಣದ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ (ದರಿಯಾ ದೌಲತ್)ನಲ್ಲಿ ಶನಿವಾರ ನಡೆದ ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣದ 150ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಲಕಾಡು ಮತ್ತು ಸೋಮನಾಥಪುರದಲ್ಲಿ ಸಾವಿರಾರು ವರ್ಷಗಳ ಹಿಂದಿನ ಅಪರೂಪದ ಸ್ಮಾರಕಗಳಿವೆ. ಅವುಗಳನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಿದರೆ ಹಂಪಿಯಂತೆ ವಿಶ್ವಮಾನ್ಯತೆ ಸಿಗುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಅದರ ಅಗತ್ಯವಿದೆ. ಈ ದಿಸೆಯಲ್ಲಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದರು.
ರಾಜ್ಯದಲ್ಲಿ 270 ಸ್ಮಾರಕಗಳು ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣ ವ್ಯಾಪ್ತಿಗೆ ಸೇರಿವೆ. ಅವುಗಳ ಪುನರುಜ್ಜೀವನಕ್ಕಾಗಿ 2011-12ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ರೂ.11.25 ಕೋಟಿ ಹಣ ನೀಡಿದೆ. ರಾಜ್ಯದ 6 ವಸ್ತು ಸಂಗ್ರಹಾಲಯಗಳ ನಿರ್ವಹಣೆಗೆ 2010-11ನೇ ಸಾಲಿ ನಲ್ಲಿ 180 ಕೋಟಿ ಹಣ ಬಂದಿದೆ ಎಂದರು.
ಸ್ಮಾರಕಗಳ ಸಂರಕ್ಷಣೆಗಾಗಿ 12ನೇ ಪಂಚವಾರ್ಷಿಕ ಯೋಜನೆಯಲ್ಲಿ ರೂ. 22.50 ಕೋಟಿ ಹಣ ಮೀಸಲಿಟ್ಟಿದೆ. ರಾಜ್ಯದ ಸ್ಮಾರಕಗಳ ಸಂರಕ್ಷಣೆ ಮತ್ತು ನಿರ್ವಹಣೆಗೆ ಮತ್ತಷ್ಟು ಅನುದಾನ ನೀಡುವಂತೆ ಕೇಂದ್ರ ಸಚಿವೆ ಕುಮಾರಿ ಶೆಲ್ಜಾ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.