ADVERTISEMENT

ಭಾರತ್ ನಿರ್ಮಾಣ್ ಯಶಸ್ಸಿಗೆ ಶ್ರಮಿಸಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 7:00 IST
Last Updated 22 ಅಕ್ಟೋಬರ್ 2011, 7:00 IST

ಶ್ರೀರಂಗಪಟ್ಟಣ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಜನರಿಗೆ ಸಿಗುವ ಸವಲತ್ತುಗಳು ಹಾಗೂ ಯೋಜನೆಗಳ ಬಗ್ಗೆ ಜನರಿಗೆ ತಿಳಿಸುವ ಮತ್ತು ಪ್ರಯೋಜನ ಪಡೆದುಕೊಳ್ಳುವಂತೆ ಜಾಗೃತಿ ಕಾರ್ಯಕ್ರಮವನ್ನು ಸ್ವಯಂ ಸೇವಕರ ನೆರವಿನಿಂದ ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಓ ಜಿ.ಜಯರಾಂ ಅವರು ಗ್ರಾ.ಪಂ. ಪಿಡಿಓ ಮತ್ತು ಅಧ್ಯಕ್ಷರಿಗೆ ಸೂಚಿಸಿದರು.

  ಶುಕ್ರವಾರ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷ, ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿಗಳು ಮೊದಲು ಸರ್ಕಾರದ ಯೋಜನೆ ಮತ್ತು ಪ್ರಯೋಜನ  ತಿಳಿಯಬೇಕು. ಪ್ರತಿ ಗ್ರಾ.ಪಂ.ನಲ್ಲಿ ಸರ್ಕಾರಿ ಯೋಜನೆ ಹಾಗೂ ಸಿಗುವ ಸವಲತ್ತು ಬಗ್ಗೆ ಪ್ರಕಟಿಸಬೇಕು.
 
45 ಕುಟುಂಬಗಳಿಗೆ ಒಬ್ಬರಂತೆ ಸ್ವಯಂ ಸೇವಕರನ್ನು ನಿಯೋಜಿಸಲು ಅವಕಾಶ ಇದ್ದು, ಕ್ರಿಯಾಶೀಲರನ್ನು ಗುರುತಿಸಬೇಕು. ಆರೋಗ್ಯ, ಶಿಕ್ಷಣ, ಕೃಷಿ, ರೇಷ್ಮೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಂದಾಯ, ಮೀನುಗಾರಿಕೆ, ಕೈಗಾರಿಕೆ ಇತರ ಇಲಾಖೆಗಳಿಂದ ದೊರೆಯುವ ಪ್ರಯೋಜನ ಅರ್ಹರಿಗೆ ತಲುಪಿಸುವ ಕೆಲಸ ಆಗಬೇಕು ಎಂದು ಹೇಳಿದರು.

 ಸಾರ್ವಜನಿಕ ಆಸ್ಪತ್ರೆಯಲ್ಲಿ ನೀಡುವ `ತಾಯಿ~ ಕಾರ್ಡ್ ಕುರಿತು ಸಿಇಓ ಕೇಳಿದ ಪ್ರಶ್ನೆಗೆ ಪಿಡಿಓಗಳು ತಬ್ಬಿಬ್ಬಾದರು.   ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ.ಅಮರನಾಥ್ ಮಾತನಾಡಿ, ಭಾರತ್ ನಿರ್ಮಾಣ್ ಯೋಜನೆಗೆ ರಾಜ್ಯದಲ್ಲಿ ಮೂರು ತಾಲ್ಲೂಕುಗಳನ್ನು ಪ್ರಾಯೋಗಿಕವಾಗಿ ಅಯ್ದು ಕೊಳ್ಳಲಾಗಿದೆ. ಕಾರ್ಕಳ, ಹರಿಹರ ಮತ್ತು ಶ್ರೀರಂಗಪಟ್ಟಣ ತಾಲ್ಲೂಕು ಗಳಲ್ಲಿ ಮಾತ್ರ ಮೊದಲ ಪ್ರಯತ್ನ ನಡೆಯುತ್ತಿದೆ.

ಯೋಜನೆಯನ್ನು ಯಶಸ್ವಿಗೊಳಿಸಲು ಪಿಡಿಓ ಹಾಗೂ ಜನಪ್ರತಿನಿಧಿಗಳು ಪ್ರಯತ್ನಿಸಬೇಕು. ಭಾರತ್ ನಿರ್ಮಾಣ್ ಯೋಜನೆಯಲ್ಲಿ ಸ್ವಯಂ ಸೇವಕರು ಜನತೆ ಮತ್ತು ಸ್ಥಳೀಯ ಸರ್ಕಾರದ ಮಧ್ಯವರ್ತಿಗಳಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ತಾ.ಪಂ. ಅಧ್ಯಕ್ಷ ಟಿ.ಶ್ರೀಧರ್, ಉಪಾಧ್ಯಕ್ಷ ರಾಜೇಶ್ವರಿ ನಂದೀಶ್‌ಕುಮಾರ್, ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರತಿನಿಧಿಗಳು ಭಾಗವಹಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.