ADVERTISEMENT

ಭಾರಿ ಮಳೆ: ಜನಸಂಚಾರ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 5:34 IST
Last Updated 4 ಏಪ್ರಿಲ್ 2013, 5:34 IST

ಹಲಗೂರು: ಹಲಗೂರು ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಮಂಗಳವಾರ ರಾತ್ರಿ ಭಾರಿ ಮಳೆಯಾಗಿದೆ. ಇದರಿಂದ ರೈತರ ಮುಖದಲ್ಲಿ ನಗು ಬೀರಿದೆ. ಅಕಾಲಿಕವಾಗಿ ಬಿದ್ದ ಮಳೆಯಿಂದ ಕೆಲವಡೆ ನಷ್ಟ ಸಂಭವಿಸಿದೆ.

ರಾತ್ರಿ 9 ಗಂಟೆಗೆ ಪ್ರಾರಂಭವಾದ ಗುಡುಗು ಸಿಡಿಲಿನಿಂದ ಕೂಡಿದ ಮಳೆ ಸರಿರಾತ್ರಿ 1 ಗಂಟೆವರೆಗೆ ಬಿದ್ದಿದೆ. ಇದರಿಂದಾಗಿ ಬುಧವಾರ ಸಂಜೆ 5 ಗಂಟೆವರೆಗೆ ಸಂಪೂರ್ಣವಾಗಿ ವಿದ್ಯುತ್ ಸ್ಥಗಿತಗೊಂಡಿತ್ತು. ಈ ಭಾಗದ ಬಹುತೇಕ ಹಳ್ಳಿಗಳಲ್ಲಿ ರಾತ್ರಿಯಿಡಿ ವಿದ್ಯುತ್ ಇಲ್ಲದೆ ತೊಂದರೆ ಉಂಟಾಯಿತು.

ಅಂಗಡಿ ಮುಂಗಟ್ಟುಗಳಿಗೂ ವಿದ್ಯುತ್ ತೊಂದರೆ ಕಾಡಿತು. ಕುಡಿಯುವ ನೀರಿನ ವ್ಯವಸ್ಥೆಯೂ ಅಸ್ತವ್ಯಸ್ತವಾಗಿತ್ತು. ಭಾರಿ ಬಿರುಗಾಳಿಗೆ ಅಲ್ಲಲ್ಲಿ ಮರಗಳು ನೆಲಕ್ಕುರುಳಿದ್ದವು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣ ಸಂಪೂರ್ಣ ಜಲಮಯವಾಗಿತ್ತು. ಕೊಠಡಿಗಳ ಮುಂದೆ ನೀರು ನಿಂತು ವಿದ್ಯಾರ್ಥಿಗಳು ತರಗತಿಗೆ ಹೋಗಲು ಪರದಾಡಿದರು. ಕಾಲಿಟ್ಟಲ್ಲಿ ಮಣ್ಣು ಜಾರುತಿದ್ದು, ಕಲ್ಲಿನ ಆಶ್ರಯ ಮಾಡಿಕೊಂಡಿದ್ದರು. ಕೆಸರುಗದ್ದೆಯಾದ ಕಾಲೇಜು ಆವರಣದಲ್ಲಿ ಓಡಾಡುವುದೇ ದುಸ್ತರವಾಗಿತ್ತು.

ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಕ್ಕದಲ್ಲಿರುವ ಅಂಗನವಾಡಿ ಕೊಠಡಿಯಲ್ಲಿ ನೀರು ನಿಂತಿತ್ತು. ಕಳಪೆ ಕಾಮಗಾರಿಯಿಂದಾಗಿ ಮೇಲ್ಛಾವಣಿಯಿಂದ ನೀರು ಸೋರಿತು. ಶಿಥಿಲಗೊಂಡ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದ್ದು, ಮಳೆ ಬಿದ್ದಾಗ ಮತ್ತಷ್ಟು ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. 

18 ವರ್ಷಗಳ ನಂತರ ಯುಗಾದಿ ವೇಳೆಯಲ್ಲಿ ಭಾರಿ ಮಳೆಯಾಗಿದೆ. ಅಂತರ್ಜಲ ಕುಸಿತ ಕಂಡಿರುವುದರಿಂದ ಇನ್ನು ಹೆಚ್ಚಿನ ಮಳೆಯ ಅವಶ್ಯ ಇದೆ. ಕೆರೆ ಕಟ್ಟೆಗಳು ಹೂಳು ತುಂಬಿವೆ. ನದಿ, ಹಳ್ಳಗಳನ್ನು ರೈತರೇ ಮುಚ್ಚಿಕೊಂಡಿದ್ದಾರೆ. ಬಿದ್ದ ಮಳೆ ಹರಿದು ಹೋಗಿದೆ. ಮಳೆಯ ನೀರನ್ನು ಸಂಗ್ರಹಿಸುವ ವ್ಯವಸ್ಥೆಯನ್ನು ಮಾಡಬೇಕಾಗಿದೆ ಎಂದು ರೈತ ಕುಂಟನದೊಡ್ಡಿ ರಾಮಣ್ಣ ಅಭಿಪ್ರಾಯ ಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.