ಮಂಡ್ಯ: ನಗರದ ರಸ್ತೆಗಳಲ್ಲಿ ಸಂಚರಿಸುವಾಗ ಮೈಯಲ್ಲಾ ಕಣ್ಣಾಗಿರಬೇಕು. ಇಲ್ಲದಿದ್ದರೆ, ಅಪಘಾತ ಗ್ಯಾರಂಟಿ ಎನ್ನುವಂತಾಗಿದೆ. ಕೆಲವು ಕಡೆಗಳಲ್ಲಿ ನೀರು ಸರಬರಾಜು ಮಾಡುವ ವಾಲ್ವ್, ಒಳಚರಂಡಿಯ ಚೇಂಬರ್, ತೆರೆದ ಚರಂಡಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ಪೇಟೆ ಬೀದಿಯ ಕಾಮನಗುಡಿ ವೃತ್ತದಲ್ಲಿರುವ ಕುಡಿಯುವ ನೀರು ಸರಬರಾಜು ಮಾಡಲು ಹಾಕಿರುವ ವಾಲ್ವ್‌್ ಸುತ್ತಲು ಅಳವಡಿಸಿರುವ ಕಬ್ಬಿಣ ಪೈಪ್ ಅಪಾಯಕ್ಕೆ ಆಹ್ವಾನಿಸುತ್ತಿದೆ. ರಸ್ತೆಗಿಂತ ಒಂದು ಅಡಿ ಎತ್ತರವಿದ್ದು, ಅದೂ ರಸ್ತೆಯ ಮಧ್ಯದಲ್ಲಿದೆ. ಪ್ರಮುಖ ರಸ್ತೆ ಇದಾಗಿರುವುದರಿಂದ ನಿತ್ಯ ಸಾವಿರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ. ವಾಹನ ಚಾಲಕರು ಸ್ವಲ್ಪ ಮೈಮರೆತರೂ ಜೀವಕ್ಕೆ ಅಪಾಯ ಖಂಡಿತ ತಪ್ಪಿದ್ದಲ್ಲ ಎನ್ನುವ ಸ್ಥಿತಿ ಇದೆ.
ರಾತ್ರಿಯ ವೇಳೆ ವಿದ್ಯುತ್ ಇಲ್ಲದಾಗ ಈ ರಸ್ತೆಯಲ್ಲಿ ಬಂದರೆ ಕಬ್ಬಿಣ ಪೈಪ್ ಮೇಲುಗಡೆ ಎದ್ದಿರುವುದು ಕಾಣುವುದೇ ಇಲ್ಲ. ಆಗ ಅನಾಹುತ ಕಟ್ಟಿಟ್ಟ ಬುತ್ತಿ. ಆಗಾಗ ಇಲ್ಲಿ ಅಪಘಾತಕ್ಕೆ ಒಳಗಾಗಿ ಜನರು ಬೀಳುತ್ತಿರುತ್ತಾರೆ ಎನ್ನುತ್ತಾರೆ ಅಲ್ಲಿನ ನಿವಾಸಿಗಳು.
ವಿ.ವಿ. ನಗರ ಸೇರಿದಂತೆ ಹಲವು ಕಡೆಗಳಲ್ಲಿ ನಗರದಲ್ಲಿ ಹಾದು ಹೋಗುವ ಮಂಡ್ಯ ಹನಿಯಂಬಾಡಿ ರಸ್ತೆ ಒಳಚರಂಡಿಯ ಚೇಂಬರಿನ ಮುಚ್ಚಳುಗಳ ಹಳೆಯದಾಗಿವೆ. ಕೆಲವು ಕಡೆಗಳಲ್ಲಿ ಮುರಿದು ಹೋಗಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ಸುತ್ತಲಿನ ಕಬ್ಬಿಣ ಕಿತ್ತು ಮೇಲಕ್ಕೆ ಎದ್ದಿವೆ.
ಮುಚ್ಚಳ ಕಿತ್ತು ಹೋದ ಕೆಲವು ಕಡೆಗಳಲ್ಲಿ ಕಲ್ಲು ಇಡಲಾಗಿದೆ. ಕಬ್ಬಿಣ ಕಿತ್ತು ಮೇಲೆ ಎದ್ದಿರುವ ಕಡೆಗಳಲ್ಲಿ ದೃಷ್ಟಿ ಹಾಯಿಸುವ ಗೋಜಿಗೂ ನಗರಸಭೆ ಅಧಿಕಾರಿಗಳು ಹೋಗಿಲ್ಲ. ರಾತ್ರಿ ವೇಳೆ ಇವುಗಳು ಕಾಣುವುದಿಲ್ಲವಾದ್ದರಿಂದ ಅಪಾಯ ಗ್ಯಾರಂಟಿ ಎನ್ನುವಂತಾಗಿದೆ.
ಹನಿಯಂಬಾಡಿ, ಪಿಇಎಸ್ ಕಾಲೇಜಿನ ಪಕ್ಕದ ದೊಡ್ಡ ಕಾಲುವೆ ಸೇರಿದಂತೆ ಹಲವೆಡೆ ಚರಂಡಿಗಳನ್ನು ಓಪನ್ ಆಗಿ ಹಾಗೆಯೇ ಬಿಡಲಾಗಿದೆ. ಇವುಗಳೂ ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಹನಿಯಂಬಾಡಿ ರಸ್ತೆ ಕಿರಿದಾಗಿದ್ದೂ, ಎರಡು ಕಡೆಗಳಲ್ಲಿ ಚರಂಡಿಯನ್ನು ಓಪನ್ ಆಗಿ ಬಿಡಲಾಗಿದೆ. ವಾಹನ ಚಾಲಕರು ಸ್ವಲ್ಪ ಮೈಮರೆತರು ವಾಹನ ಚರಂಡಿಯೊಳಕ್ಕೆ ನುಗ್ಗುತ್ತದೆ.
ಹೊಸಹಳ್ಳಿಗೆ ಹೋಗುವ ರಸ್ತೆಯಲ್ಲಿರುವ ದೊಡ್ಡ ನಾಲೆಗೆ ರಕ್ಷಣಾ ಗೋಡೆ ಇಲ್ಲ. ಈ ಹಿಂದೆ ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದಾಗ ರಕ್ಷಣಾ ಗೋಡೆ ನಿರ್ಮಾಣಕ್ಕೆ ನಗರಸಭೆ ಮುಂದಾಗಿತ್ತು. ಆ ನಂತರ ರಾಜಕೀಯ ಬೆಳವಣಿಗೆಗಳಲ್ಲಿ ಅದು ರದ್ದಾಯಿತು.
ನಿತ್ಯ ಈ ರಸ್ತೆಯಲ್ಲಿ ಶಾಲಾ ವಾಹನಗಳು ಸೇರಿದಂತೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಕ್ಷಣಾ ಗೋಡೆ ಇಲ್ಲದ್ದರಿಂದ ಚಾಲಕರು ಎಚ್ಚರದಿಂದ ಈ ರಸ್ತೆಯಲ್ಲಿ ಸಾಗಬೇಕಿದೆ.
ಪಿಇಎಸ್ ಕಾನೂನು ಕಾಲೇಜು ಮುಂದಿನಿಂದ ವಿ.ವಿ. ನಗರಕ್ಕೆ ಹೋಗುವ ರಸ್ತೆಯಲ್ಲಿಯೂ ದೊಡ್ಡದಾದ ಚರಂಡಿ ಓಪನ್ ಆಗಿ ಹಾಗೆಯೇ ಇದೆ. ಇದೂ ಅಪಾಯಕಾರಿಯಾಗಿದೆ. ಮೇಲುಗಡೆ ಕಾಂಕ್ರೀಟ್ ಹಾಕಿ ಮುಚ್ಚಬೇಕು ಎಂಬ ಕೂಗು ನಗರಸಭೆಗೆ ಕೇಳುತ್ತಿಲ್ಲ ಎನ್ನುವುದು ಅಲ್ಲಿನ ನಿವಾಸಿಗಳ ದೂರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.