ಕಿಕ್ಕೇರಿ: ಶರಣರ ಗ್ರಾಮವಾಗಿರುವ ಹೋಬಳಿಯ ಗೋವಿಂದನಹಳ್ಳಿ ಗ್ರಾಮ ದಲ್ಲಿರುವ ಪಂಚಲಿಂಗೇಶ್ವರ ದೇವಾಲಯ ನವೀಕರಣದ ಕಾರಣ ದೇಗುಲದ ಪೂಜೆ ಭಾಗಶಃ ಸ್ಥಗಿತವಾಗಿ ಭಕ್ತರಲ್ಲಿ ಆತಂಕ ಮೂಡಿದೆ.
ಹೊಯ್ಸಳರ ಆಳ್ವಿಕೆಯಲ್ಲಿ ವೀರ ಸೋಮೇಶ್ವರನಿಂದ ನಿರ್ಮಿಸಲಟ್ಟಿರುವ ಈ ದೇಗುಲ ನಿರ್ವಹಣೆ ಸಮರ್ಪಕ ವಾಗಿಲ್ಲದೆ ಕುಸಿಯುವ ಹಂತ ತಲುಪಿತ್ತು. ನಿಧಾನವಾದರೂ ಎಚ್ಚರಗೊಂಡ ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆ ₨ 3೦ ಲಕ್ಷ ಅಂದಾಜು ವೆಚ್ಚದಲ್ಲಿ ನವೀಕರಣ ಕಾಮಗಾರಿಗೆ ಆರಂಭಿ ಸಿದರು.
ಕಾಮಗಾರಿ ಆರಂಭವಾಗಿ ಎರಡು ವರ್ಷ ಮುಗಿಯುತ್ತ ಬಂದರೂ ಕಾಲು ಭಾಗದಷ್ಟು ಅಭಿವೃದ್ಧಿ ಕಾಣದಿರುವುದು ಗ್ರಾಮಸ್ಥರಲ್ಲಿ ಹಾಗೂ ಭಕ್ತರಲ್ಲಿ ಆತಂಕ ಮನೆ ಮಾಡಿದೆ.
ಶಿಥಿಲಾವಸ್ಥೆ ದೇಗುಲ: ಪಂಚಕೂಟ ಆಲಯವಾಗಿರುವ ದೇಗುಲದಲ್ಲಿ ವಾಮ ನೇಶ್ವರ, ತತ್ಪುರುತೇಶ್ವರ, ಅಘೋರೇಶ್ವರ, ಸದ್ಯೋಜ್ಯೋತೇಶ್ವರ, ಈಶಾನ್ಯೇಶ್ವರ ಲಿಂಗಗಳಿವೆ. ಒಂದೊಂದು ವಿಭಿನ್ನವಾಗಿದ್ದು, ಗೋಪುರಗಳಲ್ಲಿ ಸ್ವಾಮ್ಯತೆ ಇದೆ. ಐದು ಗೋಪುರ, ಮದಿನಿಕೆಯರು, ಉಬ್ಬು ಶಿಲ್ಪಗಳಿರುವ ಎಲ್ಲ ಗೋಡೆಗಳು ಕುಸಿಯುವ ಹಂತದಲ್ಲಿದ್ದು, ಅಲ್ಲಲ್ಲಿ ಬಿರುಕು ಬಿಟ್ಟಿವೆ. ಸದ್ಯದ ಸ್ಥಿತಿಯಲ್ಲಿ ಪ್ರಾಚ್ಯ ವಸ್ತು ಇಲಾಖೆ ಈಶಾನ್ಯೇಶ್ವರ, ತತ್ಪುರುತೇಶ್ವರ ದೇಗುಲ ಗಳ ದುರಸ್ತಿಗೆ ಮುಂದಾಗಿದೆ.
ಅಧಿಕಾರಿಗಳ ಮಾತು: ನುಣುಪು ಕಲ್ಲು (ಸೋಪ್ ಸ್ಟೋನ್) ಗಳಿಂದ ನಿರ್ಮಿಸಲ್ಪಿಟ್ಟಿರುವ ಈ ದೇಗುಲದ ನವೀಕರಣದ ಕಾಮಗಾರಿ ಕಷ್ಟ.
ಆತುರ ತೋರಿದಲ್ಲಿ ವಿಗ್ರಹಗಳಿಗೆ, ಮೂಲ ಸ್ಥಿತಿಗೆ ವಿಪತ್ತು. ಶಿಥಿಲವಾಗಿ ರುವುದನ್ನು ಜೋಪಾನ ಮಾಡುವುದು ಕಷ್ಟವಾಗಿದೆ. ಹೊಸ ದೇಗುಲ ಕಟ್ಟುವುದಕ್ಕಿಂತ ಹಳೆಯ ದೇಗುಲ ನವೀಕರಣಗೊಳಿಸುವುದು ಕಷ್ಟ ಎಂಬುದನ್ನು ಜನರು ಅರಿಯಬೇಕು. ಬಿಚ್ಚಿಟ್ಟಿರುವ ವಿಗ್ರಹಗಳ ರಕ್ಷಣೆಗೆ ಸಿಬ್ಬಂದಿ ನೇಮಿಸಲಾಗಿದೆ ಎನ್ನುತ್ತಾರೆ.
ನುರಿತ ತಜ್ಞರಿಂದ ದೇಗುಲ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಐದಾರು ತಿಂಗಳಲ್ಲಿ ದೇಗುಲ ನವೀಕರಣ ಮುಗಿಯಲಿದ್ದು, ಉಳಿಕೆ ಮೂರು ದೇವಾಲಯಗಳನ್ನು ನವೀಕರಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎನ್ನುತ್ತಾರೆ ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆಯ ಸಹಾಯಕ ಸಂರಕ್ಷಕ ನಾಗರಾಜು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.