ADVERTISEMENT

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 5:36 IST
Last Updated 2 ಸೆಪ್ಟೆಂಬರ್ 2013, 5:36 IST

ಪಾಂಡವಪುರ: ಸಾಮಾಜಿಕ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕೆಂದು ಬಿಆರ್‌ಸಿ ಸಂಪನ್ಮೂಲ ಶಿಕ್ಷಕ ಎನ್. ಮಹಾದೇವಪ್ಪ ಹೇಳಿದರು.

ತಾಲ್ಲೂಕಿನ ತಾಳಶಾಸನ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ `ಪವಾಡ ರಹಸ್ಯ ಬಯಲು' ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಮಕ್ಕಳು ಯಾವುದೇ ಮೂಢನಂಬಿಕೆ ಬಿತ್ತುವಂತಹ ವಿಚಾರಗಳಿಗತೆ ಕಿಡಿಗೊಡದೆ ನೇರವಾಗಿ ಪ್ರಶ್ನಿಸುವಂತಹ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಇಂತಹ ದುಷ್ಟ ಪದ್ಧತಿಗಳನ್ನು ತೊಡೆದುಹಾಕಬೇಕು ಎಂದರು.

ಶಿಕ್ಷಕ ಮಹದೇವಪ್ಪ ಅವರು ಶಾಲಾ ಮಕ್ಕಳಿಂದಲೇ ನೀರಿನಿಂದ ದೀಪ ಉರಿಸುವುದು, ನಾಲಿಗೆಗೆ ಕರ್ಪೂರ ಹಚ್ಚುವುದು, ಬೆಂಕಿಯ ಜ್ವಾಲೆಯನ್ನು ಚರ್ಮದ ಮೇಲೆ ಇಡುವುದು, ಮುಳ್ಳಿನ ಪಾದರಕ್ಷೆಗಳ ಮೇಲೆ ನಿಲ್ಲುವುದು, ಚರ್ಮಕ್ಕೆ ಸೂಜಿಯಿಂದ ನಿಂಬೆಹಣ್ಣು ನೇತುಹಾಕುವುದು, ಶೂನ್ಯದಿಂದ ವಿಭೂತಿ ಬರಿಸುವುದು, ತಲೆ ಮೇಲೆ ಕಾಫಿ ಕಾಯಿಸುವುದು, ಕಾಯಿಯಿಂದ ಬೆಂಕಿ ಬರಿಸುವುದು... ಹೀಗೆ ತಮ್ಮ ಪವಾಡಗಳ ಮೂಲಕ ಜನರನ್ನು ಹೇಗೆ ವಂಚಿಸುತ್ತಾರೆ ಎಂಬುದನ್ನು ಮಕ್ಕಳಿಗೆ ಎಳೆ ಎಳೆಯಾಗಿ ಬಿಡಿಸಿಕೊಟ್ಟರು.

ಎಸ್‌ಡಿಎಂಸಿ ಅಧ್ಯಕ್ಷ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಟಿ.ಎಂ. ನಂಜುಂಡಪ್ಪ, ಶೇಖರ್, ದೇವರಾಜು, ಗುರುಸ್ವಾಮಿ, ಆನಂದ್, ಮಹಲಿಂಗಪ್ಪ, ಮುಖ್ಯ ಶಿಕ್ಷಕ ಪ್ರಸನ್ನಕುಮಾರ್, ಶಿಕ್ಷಕರಾದ ರಮೇಶ್, ಪ.ಮ. ನಂಜುಂಡಸ್ವಾಮಿ, ಶ್ರೀನಿವಾಸಾಚಾರಿ, ಲೋಕೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹದೇವಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.