ADVERTISEMENT

ಮಠದ ಮೇಲೆ ಐ.ಟಿ ದಾಳಿ: ಸಿಎಂ ಭಾವಚಿತ್ರಕ್ಕೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 5:43 IST
Last Updated 20 ಜುಲೈ 2013, 5:43 IST

ಶ್ರೀರಂಗಪಟ್ಟಣ: ಬೆಂಗಳೂರಿನ ಆದಿ ಚುಂಚನಗಿರಿ ಮಠದ ವಿಜಯನಗರ ಶಾಖೆ, ಬಾಲಗಂಗಾಧರನಾಥ ಸ್ವಾಮೀಜಿ (ಬಿಜಿಎಸ್) ಆಸ್ಪತ್ರೆ ಇತರ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿರುವ ಕ್ರಮವನ್ನು ಖಂಡಿಸಿ ತಾಲ್ಲೂಕಿನ ಬಾಬುರಾಯನಕೊಪ್ಪಲು ಹಾಗೂ ಪಟ್ಟಣದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಸ್ವಾಭಿಮಾನಿ ಒಕ್ಕಲಿಗರ ವೇದಿಕೆ ಕಾರ್ಯಕರ್ತರು ಬಾಬುರಾಯನಕೊಪ್ಪಲು ಬಳಿ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಾಹನ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಒಕ್ಕಲಿಗರ ಮೇಲೆ ದ್ವೇಷ ಸಾಧಿಸುತ್ತಿದ್ದು ಸಮಾಜದ ಮುಖಂಡರು, ಸಂಘ, ಸಂಸ್ಥೆಗಳ ವಿರುದ್ಧ ಸೇಡಿನ ಕ್ರಮ ಅನುಸರಿಸುತ್ತಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಸ್.ಸಂದೇಶ್ ದೂರಿದರು. ತಿಲಕ್‌ಕುಮಾರ್, ಎಪಿಎಂಸಿ ನಿರ್ದೇಶಕ ಬಿ.ಎಸ್. ರಾಮಚಂದ್ರು, ಹೋಟೆಲ್ ತಮ್ಮಣ್ಣ, ಬಿ.ಜೆ. ಲೋಕೇಶ್‌ಗ್ರಾಮ ಪಂಚಾಯಿತಿ ಸದಸ್ಯ ಮಲ್ಲೇಗೌಡ, ದೀಪಕ್, ಹರೀಶ್, ಆಟೊ  ಪ್ರಭಾಕರ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸಿಎಂ ಭಾವಚಿತ್ರಕ್ಕೆ ಬೆಂಕಿ: ಆದಿಚುಂಚನಗಿರಿ ಶಾಖಾ ಮಠ, ಬಿಜಿಎಸ್ ಆಸ್ಪತ್ರೆ ಇತರ ಸಂಸ್ಥೆಗಳ ಮೇಲೆ ನಡೆದಿರುವ ಐ.ಟಿ ದಾಳಿಯನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು, ಭಾರತ ಸೇವಾದಲ, ಎಚ್.ಡಿ. ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಕಾರ್ಯಕರ್ತರು ಪಟ್ಟಣದ ಕುವೆಂಪು ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಸುಮಾರು ಅರ್ಧತಾಸು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಸುಟ್ಟರು.

ಖಂಡನೆ: ಆದಿಚುಂಚನಗಿರಿ ಮಠದ ಶಾಖೆ ಹಾಗೂ ಬಿಜಿಎಸ್ ಆಸ್ಪತ್ರೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರುವ ಕ್ರಮವನ್ನು ಕಾಂಗ್ರೆಸ್ ಮುಖಂಡ ಇಂಡುವಾಳು ಸಚ್ಚಿದಾನಂದ ಖಂಡಿಸಿದ್ದಾರೆ. 

ಭಾರಿ ಪ್ರತಿಭಟನೆ 
ಮದ್ದೂರು: ಆದಿ ಚುಂಚನಗಿರಿ ಶಾಖಾ ಮಠದ ಮೇಲಿನ ಆದಾಯ ತೆರಿಗೆ ಇಲಾಖೆ ದಾಳಿ ಖಂಡಿಸಿ ಶುಕ್ರವಾರ ತಾಲ್ಲೂಕಿನ ವಿವಿಧೆಡೆ ಒಕ್ಕಲಿಗ ಜನಾಂಗದಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಗೆಜ್ಜಲಗೆರೆ: ಸಮೀಪದ ಗೆಜ್ಜಲಗೆರೆ ಬಳಿ ಒಕ್ಕಲಿಗ ಜನಾಂಗಕ್ಕೆ ಸೇರಿದ ವಿವಿಧ ಸಂಘಟನೆಗಳ ಸದಸ್ಯರು ಹೆದ್ದಾರಿ ತಡೆ ನಡೆಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಒಕ್ಕಲಿಗ ವಿರೋಧಿ ನೀತಿ ಖಂಡಿಸಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಕೂಡಲೇ ಎಲ್ಲಾ ಒಕ್ಕಲಿಗ ಜನಾಂಗದ ಸದಸ್ಯರು ರಾಜೀನಾಮೆ ನೀಡಿ ಹೋರಾಟಕ್ಕಿಳಿಯಬೇಕೆಂದು ಆಗ್ರಹಿಸಿದರು.

ಅರ್ಧ ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ತಡೆ ನಡೆಸಿದ್ದರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾಲ ಅಸ್ತವ್ಯಸ್ತಗೊಂಡಿತು. ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಶ್ರೀಧರ್ ಪ್ರತಿಭಟನಾನಿರತರನ್ನು ಸಮಾಧಾನಗೊಳಿಸಿ ಹೆದ್ದಾರಿ ತೆರವುಗೊಳಿಸಿದರು. ಮುಖಂಡರಾದ    ಗೆಜ್ಜಲಗೆರೆ ಕಿಟ್ಟಿ, ಕೆ. ಕೃಷ್ಣ, ಸಿದ್ದರಾಜು, ಲೋಕೇಶ್, ಸುನೀಲ್, ಮೋಹನ್, ಜಯರಾಂ, ಶೇಖರ್, ಪ್ರದೀಪ್,   ಪುರುಷೋತ್ತಮ್, ನಾಗೇಶ್ ಸೇರಿದಂತೆ ನೂರಾರು ಜನರು ಪ್ರತಿಭಟನೆ   ಪಾಲ್ಗೊಂಡಿದ್ದರು.

ಹೆದ್ದಾರಿ ತಡೆ: ಪಟ್ಟಣದ ಟಿಬಿ ವೃತ್ತದಲ್ಲಿ ಒಕ್ಕಲಿಗರ ಸಂಘ ಹಾಗೂ ಎಪಿಎಂಸಿ ವರ್ತಕರ ಹಾಗೂ ಹಮಾಲಿಗಳ ಸಂಘದ ಸದಸ್ಯರು ಒಂದು ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ತಡೆ ಪ್ರತಿಭಟನೆ ನಡೆಸಿದರು. ಒಕ್ಕಲಿಗರ ಸಂಘದ ಅಧ್ಯಕ್ಷ  ಸಿ.ಎಸ್. ಪುರುಷೋತ್ತಮ್, ಕಾರ್ಯದರ್ಶಿ ವಿ. ಹರ್ಷ, ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ರವಿಚನ್ನಸಂದ್ರ,   ಯು.ಸಿ. ರವಿಗೌಡ, ನಗರಕೆರೆ ಸಂದೀಪ್, ಸಿ.ಎಸ್. ಯೋಗೇಶ್, ಜಿಬಿ. ಕೃಷ್ಣ,  ಕಾಳೀರಯ್ಯ, ರಾಜು ಕುಟ್ಟಿ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

ಆದಿ ಚುಂಚನಗಿರಿ ಶಾಖಾ ಮಠದ ಮೇಲಿನ ಆದಾಯ ತೆರಿಗೆ ಇಲಾಖೆಯ ದಾಳಿಯನ್ನು ಖಂಡಿಸಿ ಪಟ್ಟಣದಲ್ಲಿ ವಕೀಲರು ಶುಕ್ರವಾರ ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.