ADVERTISEMENT

ಮಣ್ಣಿನ ಮಕ್ಕಳಾದ ಕಾಲೇಜು ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 4:30 IST
Last Updated 13 ಅಕ್ಟೋಬರ್ 2012, 4:30 IST

ಮಂಡ್ಯ: ತಾಲ್ಲೂಕಿನ ಹುನಗನಹಳ್ಳಿ ಗ್ರಾಮದಲ್ಲೆಗ ಕಾಲೇಜು ವಿದ್ಯಾರ್ಥಿಗಳ ಕಲರವ. ಅವರೀಗ, ಅಕ್ಷರಶಃ ಮಣ್ಣಿನ ಮಕ್ಕಳಾಗಿದ್ದಾರೆ. ಕಳೆದ ಏಳು ದಿನಗಳಿಂದ ಶ್ರಮದಾನದಲ್ಲಿ ತೊಡಗಿರುವ ವಿದ್ಯಾರ್ಥಿಗಳು, ಗ್ರಾಮಕ್ಕೀಗ ಹೊಸರೂಪ ನೀಡುತ್ತಿದ್ದಾರೆ !

ತಾಲ್ಲೂಕಿನ ಬಸರಾಳುವಿನ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು. `ಜಲ-ವನ ಸಂವರ್ಧನೆಗಾಗಿ ಯುವಜನತೆ~ ಶೀರ್ಷಿಕೆಯಡಿ, ಏಳು ದಿನದ ರಾಷ್ಟ್ರೀಯ ಸೇವಾ ಯೋಜನೆಯ (ಎನ್‌ಎಸ್‌ಎಸ್) ಶಿಬಿರವನ್ನು ಹುನಗನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡು, ಊರಿನ ರೂಪವನ್ನೇ ಬದಲಾಯಿಸಿದ್ದಾರೆ.

ಕಾಲೇಜಿನ ಎನ್‌ಎಸ್‌ಎಸ್ ಘಟಕದ ಸುಮಾರು 50 ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಇವರಿಗೆ ಗ್ರಾಮಸ್ಥರೂ ಸಂಪೂರ್ಣ ಸಹಕಾರ ನೀಡಿದ್ದಾರೆ. ಸಮುದಾಯದ ಸಹಭಾಗಿತ್ವ ಇದ್ದರೆ, ಏನೆಲ್ಲಾ ಬದಲಾವಣೆ ಮಾಡಬಹುದು ಎಂಬುವುದಕ್ಕೆ ಗ್ರಾಮದಲ್ಲಿ ನಡೆದಿರುವ ಕಾರ್ಯಗಳೇ ಎದುರಿಗೆ ನಿಲ್ಲುತ್ತದೆ.

ಈ ಏಳು ದಿನಗಳ ಅವಧಿಯಲ್ಲಿ ರಸ್ತೆಗಳ ಇಕ್ಕೆಲ ಶುಚಿಗೊಳಿಸಿದ್ದಾರೆ. ಚರಂಡಿ ನಿರ್ಮಿಸುವುದರ ಜೊತೆಗೆ ಸ್ವಚ್ಛ ಮಾಡಿದ್ದಾರೆ. ಶೌಚಾಲಯದ ಗುಂಡಿಗಳನ್ನು ನಿರ್ಮಿಸಿದ್ದಾರೆ. ದೇವಸ್ಥಾನ ಆವರಣ ಸ್ವಚ್ಛಗೊಳಿಸುವುದು, ಸಸಿ ನೆಡುವುದು ಸೇರಿದಂತೆ ಹಲವು ಕೆಲಸಗಳನ್ನು ಮಾಡಿ, ಗ್ರಾಮಕ್ಕೆ ಹೊಸ ಮೆರುಗು ನೀಡಿದ್ದಾರೆ.

ಅಷ್ಟೇ ಅಲ್ಲದೆ, ಸಾಕ್ಷರತಾ ಅರಿವು, ಆರೋಗ್ಯ ಮತ್ತು ವೈಚಾರಿಕ ಜಾಗೃತಿ, ನೀರಿನ ಸದ್ಬಳಕೆ, ಸಾಮಾಜಿಕ ಸಮಸ್ಯೆಗಳು ಹಾಗೂ ದುಶ್ಚಟಗಳ ವಿರುದ್ಧ ಅರಿವು, ಗ್ರಾಮ ನೈರ್ಮಲ್ಯ, ಕಾನೂನು ಅರಿವು ಸೇರಿದಂತೆ ಹಲವು ವಿಷಯಗಳಲ್ಲಿ ಜಾಗೃತಿ ಮೂಡಿಸಿದ್ದಾರೆ. ಜೊತೆಗೆ ತಾವೂ ಹೊಸತನ್ನು ಕಲಿತಿದ್ದಾರೆ.

ಮುಂಜಾನೆ 5.30ಕ್ಕೆ ದೈನಂದಿನ ಕೆಲಸಗಳು ಆರಂಭವಾಗುತ್ತದೆ. ನಿತ್ಯಕರ್ಮ, ಪ್ರಾರ್ಥನೆ, ಗ್ರಾಮದಲ್ಲಿ ಜಾಥಾ ನಡೆಸಿ, ಉಪಾಹಾರದ ಬಳಿಕ ಕೈಯಲ್ಲಿ ಗುದ್ದಲಿ, ಬಾಂಡ್ಲಿ, ಕುಡುಗೋಲು ಹಿಡಿದು, ಸ್ವಚ್ಛತೆಯಲ್ಲಿ ತೊಡಿಸಿಕೊಳ್ಳುತ್ತಾರೆ. ಬೆಳಿಗ್ಗೆ 9ರ ವೇಳೆಗೆ ಕೆಲಸ ಆರಂಭವಾದರೆ, ಮಧ್ಯಾಹ್ನದ 12.30ರ ವರೆಗೂ ಶ್ರಮದಾನದಲ್ಲಿ ತೊಡಗುತ್ತಾರೆ.

ಪ್ರತಿದಿನ, ಸಂಜೆ ನಂತರ ಉಪನ್ಯಾಸ, ಅರಿವು ಮತ್ತು ದೇಶಪ್ರೇಮ ಮೂಡಿಸುವ ಸಾಕ್ಷ್ಯಚಿತ್ರಗಳ ಪ್ರದರ್ಶನ ಮಾಡಲಾಗುತ್ತದೆ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಮೆರವಣಿಗೆಯೂ ನಡೆದಿದೆ.

ಶಿಬಿರದ ಕಾರ್ಯಕ್ರಮಾಧಿಕಾರಿ ಜಿ.ಎನ್.ಮನುಕುಮಾರ್ ಮಾತನಾಡಿ, `ವಿದ್ಯಾರ್ಥಿಗಳಲ್ಲಿ ಅಂತರ್ಗತವಾಗಿರುವ ಯುವಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ನಡೆಸುವುದು, ಸಮಾಜ ಸೇವೆಯನ್ನು ಉತ್ಸಾಹಪೂರ್ಣಗೊಳಿಸುವುದರ ಜೊತೆಗೆ ಜೀವನದಲ್ಲಿ ಶಿಸ್ತುಕ್ರಮ ಅವಳವಡಿಸಿಕೊಳ್ಳಲು ಶಿಬಿರ ಪೂರಕವಾಗಿದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.