ADVERTISEMENT

ಮರು ವಿವಾಹಕ್ಕೆ ಸಿದ್ಧತೆ: ಸಿಕ್ಕಿಬಿದ್ದ ವರ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2012, 11:20 IST
Last Updated 7 ಮಾರ್ಚ್ 2012, 11:20 IST

ಮಂಡ್ಯ: ವಿವಾಹಿತನೊಬ್ಬ ಮರು ಮದುವೆಗೆ ಮುಂದಾಗಿದ್ದು ಕೊನೆಗಳಿಗೆಯಲ್ಲಿ ಗ್ರಾಮಸ್ಥರಿಗೆ ಸಿಕ್ಕಿಬಿದ್ದ ಘಟನೆ ತಾಲ್ಲೂಕಿನ ದುದ್ದ ಹೋಬಳಿಯ ಕನ್ನಹಟ್ಟಿಯಲ್ಲಿ ನಡೆದಿದೆ. ವ್ಯಕ್ತಿಯನ್ನು ಮಹೇಶ್ ಎಂದು ಗುರುತಿಸಿದ್ದು, ಮದುವೆ ನಾಲ್ಕು ದಿನ ಇರುವಂತೆ ವಂಚನೆ ಯತ್ನ ಬಯಲಾಗಿದೆ.

ಶಿವಳ್ಳಿ ಠಾಣೆ ಪೊಲೀಸರು ಗ್ರಾಮಕ್ಕೆ ಧಾವಿಸಿ ಯುವಕನನ್ನು ವಶಕ್ಕೆ ತೆಗೆದುಕೊಳ್ಳಲು ಮುಂದಾದರು. ಆದರೆ, ಮದುವೆಗಾಗಿ ವರನಿಗೆ ನೀಡಿರುವ ಹಣವನ್ನು ಮರಳಿ ಕೊಡಿಸಬೇಕು, ಈ ಮೂಲಕ ಅನ್ಯಾಯ ಸರಿಪಡಿಸಬೇಕು ವಧು, ಆಕೆಯ ಕುಟುಂಬ ಪಟ್ಟು ಹಿಡಿದಿದ್ದು, ರಾತ್ರಿಯವರೆಗೂ ರಾಜಿ ಮುಂದುವರಿದಿತ್ತು.

ಗ್ರಾಮಸ್ಥರ ಪ್ರಕಾರ, ಮಂಡ್ಯದ ಗುತ್ತಲು ನಿವಾಸಿಯಾದ ವ್ಯಕ್ತಿಯೂ ವರದಕ್ಷಿಣೆಯೂ ಇಲ್ಲದೇ ಮದುವೆಯಾಗುತ್ತೇನೆ ಎಂದು ನಂಬಿಸಿದ್ದ. ಆದರೂ ಈತನಿಗೆ ವರದಕ್ಷಿಣೆ ನೀಡಿದ್ದು, ಭಾನುವಾರ ವಿವಾಹ ನಡೆಯಬೇಕಿತ್ತು.

ಕೊನೆಗಳಿಗೆಯಲ್ಲಿ ಆತನಿಗೆ ಈಗಾಗಲೇ ಮದುವೆಯಾಗಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ವಧುವಿನ ಕುಟುಂಬ ಜಾಗೃತವಾಯಿತು. ಗ್ರಾಮಕ್ಕೆ ಕರೆಸಿಕೊಂಡು ದಿಗ್ಬಂಧನ ವಿಧಿಸಿದರು.

ನನಗೆ ಅನ್ಯಾಯ ಆಗಿದ್ದು, ನ್ಯಾಯ ಒದಗಿಸಬೇಕು ಎಂದು ವಧು ಮುಖಂಡರಿಗೆ ಮನವಿ ಮಾಡಿದರು. ಗ್ರಾಮಸ್ಥರೂ ವಿಷಯ ಇತ್ಯರ್ಥ ಆಗುವವರೆಗೂ ವರನನ್ನು ಒಪ್ಪಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ರಾತ್ರಿ ಬಹುಹೊತ್ತಿನವರೆಗೂ ರಾಜಿ ಮುಂದುವರಿದಿತ್ತು. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳಾ ದಿನಾಚರಣೆ ನಾಳೆ
ಜಿಲ್ಲಾಡಳಿತ ಮತ್ತು ಮಹಿಳಾ ಮತ್ತು ಮಕ್ಕಳ ಆಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಾರ್ಚ್ 8ರಂದು ಬೆಳಿಗ್ಗೆ 10ಕ್ಕೆ ಗಂಟೆಗೆ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಲಿದೆ.

ಉಸ್ತುವಾರಿ ಸಚಿವ ಆರ್. ಅಶೋಕ್ ಉದ್ಘಾಟಿಸಲಿದ್ದು, ಶಾಸಕ ಎಂ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿ ದ್ದಾರೆ. ವಿವಿಧ ಪಂಚಾಯಿತಿಗಳ ಮಹಿಳಾ ಪ್ರತಿನಿಧಿಗಳು ಸೇರಿ ಸುಮಾರು 500  ಮಂದಿ ಮಹಿಳೆಯರು ಭಾಗವಹಿಸುವ ನಿರೀಕ್ಷೆಯಿದೆ.

ಅಲ್ಲದೆ, ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ, ಆಯುಷ್‌ಇಲಾಖೆಯಿಂದ ಮಹಿಳೆಯರಿಗೆ ಆರೋಗ್ಯದ ಉಚಿತ ತಪಾಸಣೆ, ಚಿಕಿತ್ಸಾ ಶಿಬಿರ, ಸ್ತ್ರೀಶಕ್ತಿ ಗುಂಪುಗಳ ಸದಸ್ಯರು ತಯಾರಿಸಿದ ವಸ್ತುಗಳ ಪ್ರದರ್ಶನ ನಡೆಯಲಿದೆ ಎಂದು ಹೇಳಿಕೆ ತಿಳಿಸಿದೆ.

ಆರೋಗ್ಯ ತಪಾಸಣೆ
ನಗರದ ಎಸ್.ಡಿ. ಜಯರಾಂ ಸಮಗ್ರ ಗ್ರಾಮೀಣಾ ಭಿವೃದ್ದಿ ಸಂಸ್ಥೆ, ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ ನಗರದ ಪಿಇಎಸ್ ಮತ್ತು ಕಲಾ ಕಾಲೇಜಿನಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಶೋಕ ಜಯರಾಂ,  ವೈ.ಡಿ.ಲೀಲಾ, ಕಾರಸವಾಡಿ ಮಹದೇವು, ಗುರುಸಿದ್ದಯ್ಯ, ವೀರೇಶ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.