ADVERTISEMENT

ಮಳೆಗಾಗಿ ಗ್ರಾಮ ತೊರೆದ ಜನತೆ!

​ಪ್ರಜಾವಾಣಿ ವಾರ್ತೆ
Published 27 ಜೂನ್ 2012, 8:45 IST
Last Updated 27 ಜೂನ್ 2012, 8:45 IST
ಮಳೆಗಾಗಿ ಗ್ರಾಮ ತೊರೆದ ಜನತೆ!
ಮಳೆಗಾಗಿ ಗ್ರಾಮ ತೊರೆದ ಜನತೆ!   

ಮಂಡ್ಯ: ಒಲೆ ಉರಿಸಲು ಕಟ್ಟಿಗೆ, ಅಡುಗೆ ಮಾಡಲು ಪಾತ್ರೆ-ಪಗಡೆ, ಅಡುಗೆ ಸಾಮಗ್ರಿಗಳನ್ನು ಎತ್ತಿನ ಬಂಡಿಯಲ್ಲಿ ಹಾಕಿಕೊಂಡ ಕುಟುಂಬದ ಸಮೇತ ಊರಿನ ಜನರೆಲ್ಲ ಗ್ರಾಮ ಬಿಟ್ಟು ಹೊರಟರು.

ಕೆಲಸ ಸಿಗಲಿಲ್ಲವೆಂದು ಇವರೆಲ್ಲ ಗುಳೆ ಹೊರಟವ ರಲ್ಲ. ಮಳೆಗಾಗಿ ಪ್ರಾರ್ಥಿಸಲು ಹೋದವರು. ಇವರು ತಾಲ್ಲೂಕಿನ ಕೀಲಾರ ಗ್ರಾಮದ ಜನರು.

ಮಳೆ ಕರುಣಿಸಿ ಎಂದು ದೇವರಲ್ಲಿ ಪ್ರಾರ್ಥಿಸಲು ಮಂಗಳವಾರ, ಒಂದು ದಿನದ ಮಟ್ಟಿಗೆ ಗ್ರಾಮ ತೊರೆಯುವ ಮೂಲಕ ವಿಶಿಷ್ಟ ಆಚರಣೆಯೊಂದನ್ನು ಗ್ರಾಮದ ಜನರು ಆಚರಿಸಿದರು.

ಮನೆಯನ್ನು ಮಹಿಳೆಯರು ಬೆಳಿಗ್ಗೆಯೇ ತೊಳೆದು ಪವಿತ್ರಗೊಳಿಸಿದರು. ಮನೆ ಮುಂದೆ ಸಾರಿಸಿದರು. ನಂತರ ಗ್ರಾಮದ ಜನರೆಲ್ಲರೂ ಸೇರಿಕೊಂಡು `ಬಂದಂತಮ್ಮ~ ದೇವತೆಗೆ ಕೋಳಿ ಬಲಿ ನೀಡಿ ಪೂಜೆ ಸಲ್ಲಿಸಿದರು. ಮಳೆ ಇಲ್ಲದೇ ಸಂಕಷ್ಟ ಎದುರಿಸುತ್ತಿದ್ದೇವೆ. ಮಳೆಯನ್ನು ಕರುಣಿಸು ಎಂದು ಕೋರಿದರು.

ಕುಟುಂಬದ ಸದಸ್ಯರೆಲ್ಲ ಅಡುಗೆ ಸಾಮಗ್ರಿ, ಕಟ್ಟಿಗೆ, ಪಾತ್ರೆ-ಪಗಡೆಗಳನ್ನು ಎತ್ತಿನ ಬಂಡಿಯಲ್ಲಿ ಹೇರಿಕೊಂಡು ಊರ ಹೊರಗಿನ ಹೊಲಗಳಿಗೆ ಆಗಮಿಸಿದರು. ಹೊಲದ ತುಂಬ ಕಲ್ಲುಗಳನ್ನು ಇಟ್ಟು ಒಲೆ ಹೂಡಿದರು. ತಂದಿದ್ದ ಪಾತ್ರೆಗಳಲ್ಲಿ ಬಾಡೂಟ ತಯಾರಿಸಿದರು. ಎಲ್ಲರೂ ಸಾಲಾಗಿ ಕುಳಿತು ದೇವರನ್ನು ನೆನೆದು ಊಟ ಮಾಡಿದರು.

ಈ ಆಚರಣೆಗೆ ಕೆಲವರು, ಬಂಧು- ಬಳಗದ ವರನ್ನೂ ಆಹ್ವಾನಿಸಿದ್ದರು. ಗ್ರಾಮವನ್ನು ತೊರೆದು, ಹೀಗೆ ಆಚರಣೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆಯಿಂದ ವಿಶಿಷ್ಟ ಆಚರಣೆ ಮಾಡಿದರು.

35 ವರ್ಷಗಳ ಹಿಂದೆ ಹೀಗೆಯೇ ಬರಗಾಲ ಬಿದ್ದಾಗ ಗ್ರಾಮದ ಜನರೆಲ್ಲ ಹೀಗೆಯೇ ಊರಿನಿಂದ ಹೊರ ಬಂದಿದ್ದೇವು. ದೇವರಿಗೆ ಪೂಜೆ ಸಲ್ಲಿಸಿ, ಅಡುಗೆ ಮಾಡಿಕೊಂಡು ಊಟ ಮಾಡಿದ್ದೇವು. ಆಗ ಸಾಕಷ್ಟು ಮಳೆಯಾಗಿತ್ತು. ನಾನು ಸಣ್ಣವನಿರುವಾಗಲೂ ಹೀಗೆ ಮಾಡಿದಾಗ ಮಳೆ ಬಂದಿತ್ತು. ಆದೇ ನಂಬಿಕೆಯ ಮೇಲೆ ಮತ್ತೆ ಆಚರಣೆ ಮಾಡುತ್ತಿದ್ದೇವೆ ಎಂದರು ಗ್ರಾಮದ ಹಿರಿಯರು, ರಂಗ ಕಲಾವಿದರಾದ ಬಿ.ರಾಮಯ್ಯ.

ಸೋಮವಾರ ಗ್ರಾಮದ ಸುತ್ತ-ಮುತ್ತಲಿನಲ್ಲಿ ಒಂದಷ್ಟು ಮಳೆಯಾಗಿದೆ. ಈ ಆಚರಣೆಯ ನಂತರವೂ ಮಳೆ ಬರುತ್ತದೆ. ಮಳೆ ಬರುವುದರಿಂದ ಒಣಗುತ್ತಿರವ ಕಬ್ಬಿನ ಬೆಳೆ ಚಿಗುರಲಿದೆ ಎಂಬ ವಿಶ್ವಾಸ ಅವರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.